ಬಿಸಿಲು, ಮಳೆ, ಚಳಿ ಎನ್ನುವುದನ್ನು ಲೆಕ್ಕಿಸದೇ ಪಟ್ಟಣದ ಜನರ ಆರೋಗ್ಯ ಸಂವರ್ಧನೆಗಾಗಿ ದುಡಿಯುತ್ತಿರುವ ಪೌರಕಾರ್ಮಿಕರ ಬದುಕು ಇಂದು ಸಂಕಷ್ಟದಲ್ಲಿದೆ. ರೋಗ-ರುಜಿನಗಳು ಪೌರಕಾರ್ಮಿಕರನ್ನು ಕಿತ್ತು ತಿನ್ನುತ್ತಿದ್ದು, ಅಕಾಲಿಕವಾಗಿ ಅನಾರೋಗ್ಯದಿಂದ ಸಾವನ್ನಪ್ಪುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಪೌರಕಾರ್ಮಿಕರು ನಗರದ ಸ್ವಚ್ಛತೆ ಜೊತೆಗೆ ತಮ್ಮ ಆರೋಗ್ಯದ ಬಗ್ಗೆಯೂ ಹೆಚ್ಚಿನ ಗಮನಹರಿಸಿ ಕೆಲಸ ಮಾಡಬೇಕು ಎಂದು ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಸಿ.ಶಂಕರ ಅಂಕನಶೆಟ್ಟಿಪುರ ಮನವಿ ಮಾಡಿದರು.

ಪಟ್ಟಣದ ಸ್ವರ್ಣ ಜಯಂತಿ ಶಹರಿ ರೋಜ್ಗಾರ್ ಯೋಜನಾ ಭವನದಲ್ಲಿ ಪುರಸಭಾ ಕಾರ್ಯಾಲಯದ ಪೌರಕಾರ್ಮಿಕರು ಹಾಗೂ ಅವರ ಕುಟುಂಬದ ಸದಸ್ಯರೊಂದಿಗೆ ಸಂವಾದ ನಡೆಸಿ ಪೌರ ಕಾರ್ಮಿಕರ ಸಮಸ್ಯೆಗಳನ್ನು ಆಲಿಸಿ ಮಾತನಾಡಿದರು.

ಬಿಸಿಲು, ಮಳೆ, ಚಳಿ ಎನ್ನುವುದನ್ನು ಲೆಕ್ಕಿಸದೇ ಪಟ್ಟಣದ ಜನರ ಆರೋಗ್ಯ ಸಂವರ್ಧನೆಗಾಗಿ ದುಡಿಯುತ್ತಿರುವ ಪೌರಕಾರ್ಮಿಕರ ಬದುಕು ಇಂದು ಸಂಕಷ್ಟದಲ್ಲಿದೆ. ರೋಗ-ರುಜಿನಗಳು ಪೌರಕಾರ್ಮಿಕರನ್ನು ಕಿತ್ತು ತಿನ್ನುತ್ತಿದ್ದು, ಅಕಾಲಿಕವಾಗಿ ಅನಾರೋಗ್ಯದಿಂದ ಸಾವನ್ನಪ್ಪುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಪೌರಕಾರ್ಮಿಕರು ಪಟ್ಟಣದ ಜನತೆ ಆರೋಗ್ಯವನ್ನು ಕಾಪಾಡುವ ಜೊತೆಗೆ ತಮ್ಮ ವೈಯಕ್ತಿಕ ಸ್ವಚ್ಛತೆ ಹಾಗೂ ಆರೋಗ್ಯದ ಕಡೆಯೂ ಗಮನಹರಿಸಿ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಇದರಿಂದ ತಮ್ಮ ಕುಟುಂಬದ ಯೋಗ ಕ್ಷೇಮವನ್ನು ನೋಡಿಕೊಳ್ಳಬೇಕು ಎಂದರು.

ಪೌರಕಾರ್ಮಿಕರು ತಮಗೆ ಸಂವಿಧಾನಬದ್ಧವಾಗಿ ದೊರೆಯಬೇಕಾದ ಸೌಲಭ್ಯಗಳನ್ನು ಕೇಳಿ ಪಡೆದುಕೊಂಡು ಜಾಗೃತರಾಗಿ ಕೆಲಸ ಮಾಡಬೇಕು. ನಿಮ್ಮ ಜೀವನದಲ್ಲಿ ಎಷ್ಟೆ ಸಮಸ್ಯೆಗಳು ಹಾಗೂ ಸವಾಲುಗಳು ಎದುರಾದರೂ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಕೊಡಿಸಿ ಉನ್ನತ ಹುದ್ದೆಗಳನ್ನು ಅನುಭವಿಸಿ ಸ್ವಾಭಿಮಾನದಿಂದ ಜೀವನ ನಡೆಸುವಂತೆ ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.

ಪುರಸಭೆ ಮುಖ್ಯಾಧಿಕಾರಿ ಹಾಗೂ ಆಡಳಿತಾಧಿಕಾರಿಗಳು ಸ್ವಂತ ಸೂರನ್ನು ಹೊಂದಿರದ ಪೌರ ಕಾರ್ಮಿಕರನ್ನು ಗುರುತಿಸಿ ಅವರಿಗೆ ನಿವೇಶನವನ್ನು ಸರ್ಕಾರದ ವತಿಯಿಂದ ಕೊಡಿಸಿ ಸ್ವಂತ ಮನೆ ಹೊಂದಲು ನೆರವಾಗಬೇಕು. ಈ ದಿಕ್ಕಿನಲ್ಲಿ ರಾಜ್ಯ ಸರ್ಕಾರಕ್ಕೆ ಜಿಲ್ಲಾಧಿಕಾರಿಗಳ ಮೂಲಕ ಪ್ರಸ್ತಾವನೆಯನ್ನು ಕಳಿಸಿಕೊಡಬೇಕು ಎಂದು ಸಭೆಯಲ್ಲಿ ಹಾಜರಿದ್ದ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ಎಂ.ಅಶೋಕ್ ಕುಮಾರ್ ಅವರಿಗೆ ನಿರ್ದೇಶನ ನೀಡಿದರು.

ಪುರಸಭೆ ಹಿರಿಯ ಆರೋಗ್ಯ ಅಧಿಕಾರಿ ಅಶೋಕ್ ಮಾತನಾ,ಡಿ ಪುರಸಭೆ ವತಿಯಿಂದ ಪೌರಕಾರ್ಮಿಕರಿಗೆ ಗ್ಲೌಸ್, ಬೂಟು ಸೇರಿದಂತೆ ಸುರಕ್ಷತಾ ಪರಿಕರಗಳನ್ನು ನೀಡಲಾಗಿದೆ. ಶೌಚ ಗುಂಡಿಗಳನ್ನು ಸ್ವಚ್ಛತೆ ಮಾಡದಂತೆ ಕಟ್ಟುನಟ್ಟಿನ ನಿರ್ದೇಶನ ನೀಡಲಾಗಿದೆ ಎಂದರು.

ಯುಜಿಡಿ ಸೇರಿದಂತೆ ಶೌಚ ಗುಂಡಿಗಳ ಸ್ವಚ್ಛತೆಗೆ ಸಕ್ಕಿಂಗ್ ಯಂತ್ರಗಳನ್ನು ಬಳಸಲಾಗುತ್ತಿದೆ. ಪೌರಕಾರ್ಮಿಕರ ಆರೋಗ್ಯ ಸಂಮೋಧನೆಗಾಗಿ ಪ್ರತಿ ವರ್ಷವೂ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಿ ಔಷಧೋಪಚಾರ ನೀಡುವ ಜೊತೆಗೆ, ಆರೋಗ್ಯ ಸಂವರ್ಧನೆಗೆ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

ಪೌರಕಾರ್ಮಿಕರ ಮಕ್ಕಳು ಆರನೇ ತರಗತಿಯಿಂದ ದ್ವಿತೀಯ ಪಿಯುಸಿ ವರೆಗೆ ಉಚಿತವಾಗಿ ವಿದ್ಯಾಭ್ಯಾಸ ಮಾಡಲು ಅನುಕೂಲವಾಗುವಂತೆ ವಸತಿ ಶಾಲೆಗಳಲ್ಲಿ ನೇರ ಪ್ರವೇಶ ಕಲ್ಪಿಸಿ ಕೊಡುವ ಮೂಲಕ ಪೌರಕಾರ್ಮಿಕರ ಪ್ರತಿಯೊಂದು ಕುಟುಂಬದ ಮಕ್ಕಳು ವಿದ್ಯಾವಂತರಾಗಿ ನಾಗರೀಕ ಸಮಾಜದಲ್ಲಿ ಅತ್ಯುತ್ತಮ ಪ್ರಜೆಗಳಾಗಿ ಜೀವನ ನಡೆಸಲು ಸೂಕ್ತ ತಿಳಿವಳಿಕೆ ಹಾಗೂ ಮಾರ್ಗದರ್ಶನ ನೀಡಲಾಗುತ್ತಿದೆ ಎಂದರು.

ಸಭೆಯಲ್ಲಿ ಗ್ರೇಡ್ 2 ತಹಸೀಲ್ದಾರ್ ಲೋಕೇಶ್, ಪುರಸಭೆ ಪರಿಸರ ಇಂಜಿನಿಯರ್ ಪ್ರಿಯಾಂಕ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಅಶೋಕ್ ಕುಮಾರ್, ಆದಿ ದ್ರಾವಿಡ ಅರುಂಧತಿಯಾರ್ ಸಮಾಜದ ಮಂಡ್ಯ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಆರ್.ಬನ್ನಾರಿ, ಪಟ್ಟಣದ ರಾಮಯ್ಯ ಕಾಲೋನಿ ಆದಿದ್ರಾವಿಡ ಸಮಾಜದ ಮುಖಂಡರಾದ ಕುಮಾರ, ಮಧು, ನಾಗರಾಜು, ಕೃಷ್ಣ, ಮುತ್ತಣ್ಣ ಸೇರಿದಂತೆ ನೂರಾರು ಪೌರಕಾರ್ಮಿಕರು ಹಾಗೂ ಕುಟುಂಬದ ಸದಸ್ಯರು ಭಾಗವಹಿಸಿದ್ದರು.

ಸಭೆಯಲ್ಲಿ ಪೌರ ಕಾರ್ಮಿಕರು ತಮ್ಮ ಕುಂದು ಕೊರತೆಗಳು ಹಾಗೂ ಸಮಸ್ಯೆಗಳನ್ನು ಸಫಾಯಿ ಕರ್ಮಚಾರಿ ಆಯೋಗದ ಸದಸ್ಯರೊಂದಿಗೆ ಚರ್ಚೆ ಮಾಡಿ ಭಿನ್ನವಿಸಿಕೊಂಡರು.