ರಾಮನಗರ: ಕಳೆದ 25 ವರ್ಷಗಳಿಂದ ನಿರಂತರ ದೇಶ ಸೇವೆಯಲ್ಲಿ ತೊಡಗಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬವನ್ನು ಮಹಿಳಾ ಪೌರಕಾರ್ಮಿಕರ ಪಾದ ತೊಳೆದು ಪೂಜಿಸಿ, ಬಾಗಿನ ಅರ್ಪಿಸುವ ಮೂಲಕ ಬಿಜೆಪಿ ಮುಖಂಡರು, ಕಾರ್ಯಕರ್ತರು ಸೇವಾ ಸಂಕಲ್ಪ ಅಭಿಯಾನಕ್ಕೆ ವಿಶಿಷ್ಠವಾಗಿ ಚಾಲನೆ ನೀಡಿದರು
ರಾಮನಗರ: ಕಳೆದ 25 ವರ್ಷಗಳಿಂದ ನಿರಂತರ ದೇಶ ಸೇವೆಯಲ್ಲಿ ತೊಡಗಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬವನ್ನು ಮಹಿಳಾ ಪೌರಕಾರ್ಮಿಕರ ಪಾದ ತೊಳೆದು ಪೂಜಿಸಿ, ಬಾಗಿನ ಅರ್ಪಿಸುವ ಮೂಲಕ ಬಿಜೆಪಿ ಮುಖಂಡರು, ಕಾರ್ಯಕರ್ತರು ಸೇವಾ ಸಂಕಲ್ಪ ಅಭಿಯಾನಕ್ಕೆ ವಿಶಿಷ್ಠವಾಗಿ ಚಾಲನೆ ನೀಡಿದರು.
ನಗರದ ವಾಟರ್ ಟ್ಯಾಂಕ್ ಸರ್ಕಲ್ ಬಳಿಯಿರುವ ಪೌರ ಕಾರ್ಮಿಕರ ಕಚೇರಿ ಆವರಣದಲ್ಲಿ ಶುಕ್ರವಾರ ಮಹಿಳಾ ಪೌರ ಕಾರ್ಮಿಕರ ಕಾಲು ತೊಳೆದು ಪಾದಪೂಜೆ ಮಾಡಿ ಬಾಗಿನ ಅರ್ಪಿಸಿದರು.ಈ ವೇಳೆ ಬಿಜೆಪಿ ರಾಮನಗರ ಮಂಡಲ ಅಧ್ಯಕ್ಷ ಗೌತಮ್ ಗೌಡ ಮಾತನಾಡಿ, ಜನರ ಆರೋಗ್ಯ ರಕ್ಷಿಸುವಲ್ಲಿ ಪೌರ ಕಾರ್ಮಿಕರ ಸೇವೆ ಅಮೂಲ್ಯವಾದುದು. ತಮ್ಮ ಕಾಯಕ ನಿಷ್ಠೆಯಿಂದ ಸ್ವಚ್ಛ ಪರಿಸರ ನಿರ್ಮಿಸುತ್ತಿರುವ ಪೌರ ಕಾರ್ಮಿಕರನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಹೀಗಾಗಿ ವಿಶ್ವ ನಾಯಕ ಮೋದಿ ಅವರ ಜನ್ಮದಿನವನ್ನು ನಗರದ ಸ್ವಚ್ಛತೆಗೆ ನಿರಂತರ ಶ್ರಮಿಸುವ ಪೌರ ಕಾರ್ಮಿಕರಿಗೆ ಗೌರವಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಪ್ರಧಾನಿ ಮೋದಿರವರು ವಿಶ್ವನಾಯಕ. ಭಾರತವನ್ನು ಇಡೀ ವಿಶ್ವವನ್ನೇ ತಿರುಗಿ ನೋಡುವಂತೆ ಮಾಡಿದವರು. ಅವರ ಜನ್ಮದಿನದ ಸಂಭ್ರಮ ದೇಶದಾದ್ಯಂತ ಮನೆ ಮಾಡಿದೆ. ಮೋದಿ ಅವರದ್ದು ದೇಶ ಸೇವೆಯ ಸಾರ್ಥಕ ಪಯಣ. ಸತತ 13 ವರ್ಷಗಳ ಕಾಲ ಗುಜರಾತಿನ ಮುಖ್ಯಮಂತ್ರಿಯಾಗಿ, 12 ವರ್ಷಗಳಿಂದ ಪ್ರಧಾನಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ನಾಯಕತ್ವದಲ್ಲಿ ಭಾರತ ತನ್ನ ಸಾಮರ್ಥ್ಯವನ್ನು ಇಡೀ ಜಗತ್ತಿಗೆ ತೋರಿಸಿದೆ ಎಂದರು.ವಿಶ್ವವೇ ಭಾರತವನ್ನು ತಿರುಗಿ ನೋಡುವಂತಹ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿದ್ದಾರೆ. ಅವರ ನಾಯಕತ್ವದ ಅಡಿಯಲ್ಲಿ ನಾವು ಕೆಲಸ ಮಾಡುತ್ತಿರುವುದೇ ನಮ್ಮ ಸೌಭಾಗ್ಯ. ಮೋದಿ ಅವರು ಮಾಡಿರುವ ಸೇವೆ ಎದುರು ನಮ್ಮದು ಅಳಿಲು ಸೇವೆಯಾಗಿದ್ದು, ದೇಶದಾದ್ಯಂತ ಬಿಜೆಪಿಯಿಂದ ಸೇವಾ ಸಂಕಲ್ಪ ಅಭಿಯಾನ ಹಮ್ಮಿಕೊಳ್ಳಲಾಗಿದೆ. ನಮ್ಮ ಜಿಲ್ಲೆಯಲ್ಲೂ ಸಹ ಜಿಲ್ಲಾಧ್ಯಕ್ಷ ಆನಂದ ಸ್ವಾಮಿ ನೇತೃತ್ವದಲ್ಲಿ ಸೆ.17ರಿಂದ ಅ.17ರವರೆಗೆ ನಿರಂತರವಾಗಿ ಅಭಿನಂದನಾ, ಆಶೀರ್ವಾದ, ಸೇವೆಯ ಸಂಕಲ್ಪದ ಮೂಲಕ ಅನೇಕ ರೀತಿಯ ಸಮಾಜಮುಖಿ ಕಾರ್ಯಗಳು ನಡೆಯಲಿವೆ ಎಂದರು.
ಆರೋಗ್ಯ ಶಿಬಿರ, ಪರಿಕರ ವಿತರಣೆ :ಜಿಲ್ಲೆಯಾದ್ಯಂತ ನಾವು ನಮ್ಮ ಕಾರ್ಯಕರ್ತರು, ಮುಖಂಡರ ಜೊತೆಗೂಡಿ ವಿವಿಧ ರೀತಿಯ ಸಮಾಜಮುಖಿ ಕೆಲಸ ಮಾಡಲಿದ್ದೇವೆ. ರಕ್ತದಾನ ಶಿಬಿರ, ಆರೋಗ್ಯ ತಪಾಸಣಾ ಶಿಬಿರ ಸೇರಿದಂತೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳದ್ದೇವೆ. ರಾಮನಗರ, ಹಾರೋಹಳ್ಳಿ ತಾಲ್ಲೂಕಿನಲ್ಲಿ ಅನೇಕ ಸಾಮಾಜಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜತೆಗೆ ಆರೋಗ್ಯ ಕೇಂದ್ರಗಳಿಗೆ ಪರಿಕರಗಳ ಬೇಡಿಕೆ ಇದ್ದು, ಅದನ್ನು ಒದಗಿಸಲಾಗುತ್ತದೆ ಎಂದು ಗೌತಮ್ ಗೌಡ ಭರವಸೆ ನೀಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಆನಂದ ಸ್ವಾಮಿ ಮಾತನಾಡಿ, ದೇಶದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿರುವ ಮೋದಿ ಅವರು ಭಾರತದ ಗೌರವವನ್ನು ವಿಶ್ವ ಮಟ್ಟದಲ್ಲಿ ಹೆಚ್ಚಿಸಿದ್ದಾರೆ. ಅವರಿಗೆ ಆಯಸ್ಸು, ಆರೋಗ್ಯ ಹಾಗೂ ಇನ್ನಷ್ಟು ಜನಸೇವೆ ಮಾಡುವ ಶಕ್ತಿ ಭಗವಂತ ನೀಡಲಿ. ನರೇಂದ್ರ ಮೋದಿ ಎಂದರೆ ಅದು ಕೇವಲ ಒಂದು ಹೆಸರಲ್ಲ. ಭ್ರಷ್ಟಾಚಾರ ಮುಕ್ತ ಆಡಳಿತಕ್ಕೆ ಮತ್ತೊಂದು ಹೆಸರೇ ನರೇಂದ್ರ ಮೋದಿ ಎಂದು ಬಣ್ಣಿಸಿದರು.ಈ ಸಂದರ್ಭದಲ್ಲಿ ರಾಮನಗರ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಆರ್.ನಾಗರಾಜು, ಜಿಲ್ಲಾ ಎಸ್‌ಸಿ ಮೋರ್ಚಾ ಅಧ್ಯಕ್ಷ ಕಾಳಯ್ಯ, ಜಿಲ್ಲಾ ಉಪಾಧ್ಯಕ್ಷ ಪಿಚ್ಚನಕೆರೆ ಪಿ.ಎಸ್.ಜಗದೀಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಚಂದ್ರಶೇಖರ್, ನಾಗಮ್ಮ, ನಗರ ಅಧ್ಯಕ್ಷ ಚಂದನ್ ಮೋರೆ, ಮಹಿಳಾ ಅಧ್ಯಕ್ಷೆ ಹೇಮಾ ಶಿವರಾಂ, ಮುಖಂಡರಾದ ಆರ್.ವಿ.ಸುರೇಶ್, ರಾಜು, ಗೂಗಾರೆದೊಡ್ಡಿ ನಾಗರಾಜು, ಮಹದೇವಯ್ಯ, ದೇವಿಕಾ, ಹೇಮಲತಾ, ವರುಣ್, ಮಂಜು, ಪದ್ಮ, ಪುಟ್ಟಮ್ಮ, ಕಿಶನ್, ವಿ.ತೇಜು, ಲಕ್ಷ್ಮೀ, ಚನ್ನಪ್ಪ, ಮೋಹನ್, ಮಹೇಶ್, ಸಿದ್ದರಾಜು, ಭಾನುಪ್ರಕಾಶ್, ರಂಗಸ್ವಾಮಿ, ಹೇಮಾವತಿ ಮತ್ತಿತರರು ಹಾಜರಿದ್ದರು.
ಬಾಕ್ಸ್ ...ಬಿಜೆಪಿ ಮುಖಂಡರಿಂದ ಪೌರ ಕಾರ್ಮಿಕರ ಪಾದಪೂಜೆ :
ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಸೇವಾ ಸಂಕಲ್ಪ ಅಭಿಯಾನ ಆರಂಭಿಸಿರುವ ಜಿಲ್ಲಾ ಬಿಜೆಪಿ ಗೌತಮ್ ಗೌಡ ನೇತೃತ್ವದಲ್ಲಿ ಮಹಿಳಾ ಪೌರ ಕಾರ್ಮಿಕರ ಪಾದ ತೊಳೆದು ಪೂಜೆ ಮಾಡಿ ಮುಂದಿನ ಒಂದು ತಿಂಗಳ ಕಾಲ ಸಮಾಜ ಸೇವೆಯ ಸಂಕಲ್ಪವನ್ನು ಕೈಗೊಂಡಿತು.ಪೌರಕಾರ್ಮಿಕರ ಕಚೇರಿ ಎದುರಿನ ಬಯಲಿನಲ್ಲಿ ಸಾಲಾಗಿ ಎಲ್ಲರನ್ನೂ ಕುರ್ಚಿಯಲ್ಲಿ ಕೂರಿಸಿ ಪ್ರತಿಯೊಬ್ಬರ ಪಾದಗಳನ್ನು ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ ಅವರು ನೀರು ಹಾಕಿ ತೊಳೆದರೆ, ಕೆಎಸ್ಐಸಿ ಮಾಜಿ ಅಧ್ಯಕ್ಷ ಎಂ.ಗೌತಮ್ ಗೌಡ ಪಾದಕ್ಕೆ ನಮಸ್ಕರಿಸಿ ಪಾದಪೂಜೆ ಸಲ್ಲಿಸಿದರು. 35ಕ್ಕೂ ಹೆಚ್ಚು ಮಹಿಳಾ ಪೌರ ಕಾರ್ಮಿಕರಿಗೆ ಹೊಸ ಸೀರೆಯೊಂದಿಗೆ ಬಾಗಿನ ಅರ್ಪಿಸಿ ಪುಷ್ಪವೃಷ್ಟಿಯೊಡನೆ ಬಿಜೆಪಿ ಮುಖಂಡರು ಕಾರ್ಯಕರ್ತರು ಗೌರವ ಸಮರ್ಪಣೆ ಮಾಡಿದರು.
ಬಾಕ್ಸ್ ...ಭಾವುಕರಾದ ಪೌರ ಕಾರ್ಮಿಕರು :
ಬಿಜೆಪಿ ನಾಯಕ ಎಂ.ಗೌತಮ್ ಗೌಡ ಹಾಗೂ ಜಿಲ್ಲಾಧ್ಯಕ್ಷ ಆನಂದಸ್ವಾಮಿ ಮಹಿಳಾ ಪೌರ ಕಾರ್ಮಿಕರ ಪಾದಪೂಜೆಗೆ ಮುಂದಾದಾಗ ಬಹುತೇಕ ಕಾರ್ಮಿಕರ ಕಣ್ಣಾಲಿಗಳು ತೇವಗೊಂಡು ಭಾವುಕರಾದರು.ದಿನನಿತ್ಯ ಶ್ರಮವಹಿಸಿ ನಗರದ ಸ್ವಚ್ಚತಾ ಕಾರ್ಯದಲ್ಲಿ ತೊಡಗುವ ನಮ್ಮನ್ನು ಗೌರವದಿಂದ ಕಂಡು ಬಾಗಿನ ನೀಡುತ್ತಿರುವ ಬಿಜೆಪಿ ನಾಯಕರನ್ನು ಮನಸಾರೆ ಹಾರೈಸಿದರು. ಗೌತಮ್ ಗೌಡ ಅವರನ್ನು ಸುತ್ತುವರೆದ ಮಹಿಳಾ ಪೌರ ಕಾರ್ಮಿಕರು ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ ಎಂದು ಆಶಿಸಿ, ತಮಗೆ ತಂದಿದ್ದ ಹೂಗಳನ್ನು ಅವರಿಗೆ ಹಾಕಿ ಆಶೀರ್ವದಿಸಿದ್ದು ಎಲ್ಲರನ್ನೂ ಭಾವುಕರನ್ನಾಗುವಂತೆ ಮಾಡಿತ್ತು.
18ಕೆಆರ್ ಎಂಎನ್ 4.ಜೆಪಿಜಿರಾಮನಗರದ ಪೌರ ಕಾರ್ಮಿಕರ ಸಂಘದ ಕಚೇರಿ ಆವರಣದಲ್ಲಿ ಬಿಜೆಪಿ ವತಿಯಿಂದ ಆಶೀರ್ವಾದ ಕಾರ್ಯಕ್ರಮ ಅಂಗವಾಗಿ ಪೌರ ಕಾರ್ಮಿಕರಿಗೆ ಬಾಗಿನ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಿತು.