ಪೌರಕಾರ್ಮಿಕರಿಗೆ ನೀಡವಂತ ಸಮವಸ್ತ್ರ, ಪರಿಕರಗಳನ್ನು ಕಡ್ಡಾಯವಾಗಿ ಧರಿಸಿಕೊಂಡು ಕಾರ್ಯನಿರ್ವಹಿಸಬೇಕು. ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು.
ಕನ್ನಡಪ್ರಭ ವಾರ್ತೆ ಮುಂಡರಗಿ
ಪೌರಕಾರ್ಮಿಕರಿಗೆ ನೀಡವಂತ ಸಮವಸ್ತ್ರ, ಪರಿಕರಗಳನ್ನು ಕಡ್ಡಾಯವಾಗಿ ಧರಿಸಿಕೊಂಡು ಕಾರ್ಯನಿರ್ವಹಿಸಬೇಕು. ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಕುಟುಂಬದ ಹಿತದೃಷ್ಟಿಯಿಂದ ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ ಹೇಳಿದರು.ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಕಲ್ಯಾಣ ಮಂಟಪದಲ್ಲಿ ರಾಜ್ಯ ಪೌರ ನೌಕರರ ಸಂಘ ಮುಂಡರಗಿ ಶಾಖೆಯಿಂದ ಬುಧವಾರ ಜರುಗಿದ 15ನೇ ವರ್ಷದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪೌರನೌಕರರು ಸದಾ ಕರ್ತವ್ಯ ನಿಷ್ಠೆ, ಪ್ರಾಮಾಣಿಕತೆ, ಜವಾಬ್ದಾರಿಯುತವಾಗಿ ಕೆಲಸ ಮಾಡುವ ಮೂಲಕ ಸಮಾಜಕ್ಕೆ ತಮ್ಮದೆ ಆದ ಸೇವೆಯನ್ನು ಒದಗಿಸಬೇಕು. ಸಾರ್ವಜನಿಕರೊಂದಿಗೆ ಗೌರವಿತವಾಗಿ ನಡೆದುಕೊಂಡು ಕೆಲಸ ಮಾಡಬೇಕು ಎಂದರು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಉದಯಕುಮಾರ ಯಲಿವಾಳ ಮಾತನಾಡಿ, ಪೌರಕಾರ್ಮಿಕರ ಕೆಲಸ ಶ್ರೇಷ್ಠ ಕಾಯಕ. ಸ್ವಚ್ಛತೆ ಮಾಡುವ ಕಾಯಕ ಪೌರಕಾರ್ಮಿಕರಾಗಿದ್ದರಿಂದ ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಆದ್ಯತೆ ನೀಡಬೇಕು. ಸಫಾಯಿ ಕರ್ಮಚಾರಿ ನಿಗಮದಡಿ ಹಲವು ಸೌಲಭ್ಯಗಳಿದ್ದು ಅರ್ಹ ಫಲಾನುಭವಿಗಳು ಅವುಗಳ ಬಗ್ಗೆ ಹೆಚ್ಚು ಮಾಹಿತಿ ಪಡೆದು ಸೌಲಭ್ಯ ಪಡೆಯಬೇಕು. ತಮ್ಮ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ರಾಜ್ಯ ಪೌರ ನೌಕರರ ಸಂಘದ ಅಧ್ಯಕ್ಷ ಮೈಲಪ್ಪ ದೊಡ್ಡಮನಿ ಮಾತನಾಡಿ, ಪುರಸಭೆ ಮುಖ್ಯಾಧಿಕಾರಿಗಳ ಮಾರ್ಗದರ್ಶನದಲ್ಲಿ ಪೌರಕಾರ್ಮಿಕರೆಲ್ಲ ಒಂದಾಗಿ ಉತ್ತಮ ರೀತಿಯಲ್ಲಿ ಸಾರ್ವಜನಿಕರ ಸೇವೆ ಮಾಡೋಣ ಎಂದರು.
ಈ ವೇಳೆ ಪೌರಕಾರ್ಮಿಕರಿಗೆ ಆಯೋಜಿಸಿದ್ದ ವಿವಿಧ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಪ್ರಮಾಣಪತ್ರ ನೀಡಲಾಯಿತು. ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು.ರಮೇಶ ಗೊಂದಕರ್, ರವಿ ಕುಂಬಾರ, ಕಾರಿಸಿದ್ದಪ್ಪ ಹರಿಜನ ಸೇರಿ ಪುರಸಭೆ ಸಿಬ್ಬಂದಿ, ಪೌರಕಾರ್ಮಿಕರು ಇದ್ದರು. ಆರೋಗ್ಯ ನಿರೀಕ್ಷಕ ಎಂ.ಎಸ್. ಮ್ಯಾಗೇರಿ ಸ್ವಾಗತಿಸಿದರು. ಶಿಕ್ಷಕ ವಿಶ್ವನಾಥ ಉಳ್ಳಾಗಡ್ಡಿ ನಿರೂಪಿಸಿದರು.