ಪೌರಕಾರ್ಮಿಕರು ಮಳೆ, ಚಳಿ, ಬಿಸಿಲು ಎನ್ನದೆ ತಮ್ಮ ವೈಯಕ್ತಿಕ ಜೀವನದ ಹಂಗು ತೊರೆದು ನಗರದ ಸ್ವಚ್ಛತೆ ಹಾಗೂ ಸಾರ್ವಜನಿಕರ ಆರೋಗ್ಯ ಕಾಪಾಡುವ ಮಹತ್ವದ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ರಾಣಿಬೆನ್ನೂರು: ಪೌರ ಕಾರ್ಮಿಕರು ಸ್ವಚ್ಛತೆಯ ಸೇನಾನಿಗಳಿದ್ದಂತೆ. ಸೂರ್ಯೋದಯಕ್ಕೂ ಮುನ್ನವೇ ನಗರವನ್ನು ಸ್ವಚ್ಛ, ಸುಂದರ ಹಾಗೂ ಆರೋಗ್ಯಕರವಾಗಿ ಕಾಣುವಂತೆ ಮಾಡುವಲ್ಲಿ ಅವರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ನಗರಸಭೆ ಆಯುಕ್ತ ಎಫ್.ಐ. ಇಂಗಳಗಿ ಹೇಳಿದರು.

ನಗರದ ಸ್ಟೇಷನ್ ರಸ್ತೆ ವರ್ತಕರ ಸಂಘದ ಸಮುದಾಯ ಭವನದಲ್ಲಿ ಬುಧವಾರ ಏರ್ಪಡಿಸಿದ್ದ ಪೌರ ಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಪೌರಕಾರ್ಮಿಕರನ್ನು ಕೇವಲ ಪೌರಕಾರ್ಮಿಕರ ದಿನ ಮಾತ್ರ ಗೌರವದಿಂದ ಕಾಣದೆ ಪ್ರತಿದಿನ ಹಾಗೂ ಪ್ರತಿಕ್ಷಣ ಗೌರವದಿಂದ ಕಾಣಬೇಕು. ಆಗ ಮಾತ್ರ ಪೌರಕಾರ್ಮಿಕರ ದಿನಾಚರಣೆ ಆಚರಿಸಿದ್ದಕ್ಕೂ ಸಾರ್ಥಕತೆ ದೊರೆಯುತ್ತದೆ ಎಂದರು.

ಪೌರಕಾರ್ಮಿಕರು ಮಳೆ, ಚಳಿ, ಬಿಸಿಲು ಎನ್ನದೆ ತಮ್ಮ ವೈಯಕ್ತಿಕ ಜೀವನದ ಹಂಗು ತೊರೆದು ನಗರದ ಸ್ವಚ್ಛತೆ ಹಾಗೂ ಸಾರ್ವಜನಿಕರ ಆರೋಗ್ಯ ಕಾಪಾಡುವ ಮಹತ್ವದ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರತಿಯೊಬ್ಬ ನಾಗರಿಕನ ಆರೋಗ್ಯ ಮತ್ತು ನಗರದ ಸ್ವಚ್ಛ ಪರಿಸರದ ಹಿಂದೆ ಪೌರಕಾರ್ಮಿಕರ ಪರಿಶ್ರಮ ಅಡಗಿದೆ. ಅವರ ಸೇವೆಯನ್ನು ಸಮಾಜ ಎಂದಿಗೂ ಮರೆಯಬಾರದು. ಪೌರಕಾರ್ಮಿಕರು ತಮ್ಮ ಆರೋಗ್ಯದ ಬಗ್ಗೆಯೂ ಹೆಚ್ಚಿನ ಕಾಳಜಿ ವಹಿಸಬೇಕು. ಕರ್ತವ್ಯದ ಸಂದರ್ಭದಲ್ಲಿ ಸುರಕ್ಷತಾ ಕ್ರಮ ಅನುಸರಿಸುವ ಜತೆಗೆ ಆರೋಗ್ಯದ ಕಡೆ ಗಮನಹರಿಸಬೇಕು. ಯಾವುದೇ ರೀತಿಯ ದುಶ್ಚಟಗಳಿಗೆ ಬಲಿಯಾಗದೆ, ತಮ್ಮ ಕುಟುಂಬ ಹಾಗೂ ಮಕ್ಕಳ ಭವಿಷ್ಯದ ಬಗ್ಗೆ ಕಾಳಜಿ ವಹಿಸಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಮೂಲಕ ಉತ್ತಮ ಭವಿಷ್ಯ ರೂಪಿಸಬೇಕು ಎಂದರು.

ಪರಿಸರ ಅಭಿಯಂತರ ಮಹೇಶ ಕೋಡಬಾಳ, ಪೌರ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕರಬಸಪ್ಪ ದಾಸಪ್ಪನವರ ಮಾತನಾಡಿದರು. ನಗರಸಭೆ ಮಾಜಿ ಸದಸ್ಯ ಪುಟ್ಟಪ್ಪ ಮರಿಯಮ್ಮನವರ, ಜಿಲ್ಲಾ ಪೌರ ಸೇವಾ ನೌಕರರ ಸಂಘದ ಅಧ್ಯಕ್ಷ ಏಳುಕೊಟೆಪ್ಪ ಗೋಣಿಬಸಮ್ಮನವರ, ತಾಲೂಕು ಅಧ್ಯಕ್ಷ ನಿಂಗಪ್ಪ ಮುದಿಕರಿಯಪ್ಪನವರ, ಮಧು ಸಾತೇನಹಳ್ಳಿ, ಮಧು ಕಂಬಳಿ, ರಾಘವೇಂದ್ರ ಗಾವಡೆ, ಶ್ರುತಿ ಮಾರಮ್ಮನವರ, ನವನಾಥ ಎಸ್., ಮಂಜುನಾಥ, ಮಲ್ಲೇಶಪ್ಪ ಮೆಣಸಿನಹಾಳ, ಗಣೇಶ, ಪ್ರಭು ಬಾಲೇಹೊಸೂರ, ವಾಣಿಶ್ರೀ, ನಾಗರತ್ನ ಹಾಗೂ ಸಿಬ್ಬಂದಿ ವರ್ಗ, ಪೌರ ಕಾರ್ಮಿಕರರು ಇದ್ದರು.

ಇದೇ ವೇಳೆ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು. ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆ ವಿಜೇತರಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಲಾಯಿತು.