ಪಟ್ಟಣಗಳ ಅಂದ- ಚೆಂದ ಹೆಚ್ಚಿಸುವ ಪೌರ ಕಾರ್ಮಿಕರು

| Published : Sep 25 2024, 12:56 AM IST

ಸಾರಾಂಶ

ಚನ್ನರಾಯಪಟ್ಟಣ: ಸ್ವಚ್ಛತೆಯ ಆಸ್ತಿ ಪೌರ ಕಾರ್ಮಿಕ ಬಂಧುಗಳು, ಪಟ್ಟಣದ ಅಂದ, ಚೆಂದ ಹೆಚ್ಚಿಸುವ ನಿಮ್ಮ ಶ್ರಮ, ಕಾರ್ಯತತ್ವರತೆಯಿಂದ ನಗರಗಳು ಸ್ವಚ್ಛವಾಗಿರಲು ಕಾರಣವಾಗಿವೆ. ನಿಮ್ಮ ಕಷ್ಟ, ನೋವುಗಳಿಗೆ ಸ್ಪಂದಿಸುವ ಕೆಲಸವನ್ನು ಪುರಸಭೆ ಆಡಳಿತ ಮಂಡಳಿ ಮಾಡುತ್ತಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.

ಚನ್ನರಾಯಪಟ್ಟಣ: ಸ್ವಚ್ಛತೆಯ ಆಸ್ತಿ ಪೌರ ಕಾರ್ಮಿಕ ಬಂಧುಗಳು, ಪಟ್ಟಣದ ಅಂದ, ಚೆಂದ ಹೆಚ್ಚಿಸುವ ನಿಮ್ಮ ಶ್ರಮ, ಕಾರ್ಯತತ್ವರತೆಯಿಂದ ನಗರಗಳು ಸ್ವಚ್ಛವಾಗಿರಲು ಕಾರಣವಾಗಿವೆ. ನಿಮ್ಮ ಕಷ್ಟ, ನೋವುಗಳಿಗೆ ಸ್ಪಂದಿಸುವ ಕೆಲಸವನ್ನು ಪುರಸಭೆ ಆಡಳಿತ ಮಂಡಳಿ ಮಾಡುತ್ತಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.

ಪಟ್ಟಣದ ಮೈಸೂರು ರಸ್ತೆಯಲ್ಲಿರುವ ಪಂಪ್ ಹೌಸ್‌ನ ಆವರಣದಲ್ಲಿ ಅಯೋಜಿಸಿದ್ದ ೨೦೨೪- ೨೫ನೇ ಸಾಲಿನ ಪೌರಕಾರ್ಮಿಕ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಜನ ಎದ್ದೇಳುವ ಮುಂಚೆ ನೀವು ಪಟ್ಟಣವನ್ನು ಸ್ವಚ್ಛಗೊಳಿಸಿ, ಸುಂದರ ಪಟ್ಟಣವನ್ನಾಗಿಸಿದ್ದರಿಂದಲೇ ಕಳೆದ ವರ್ಷ ಚನ್ನರಾಯಪಟ್ಟಣ ಪುರಸಭೆಗೆ ರಾಷ್ಟ್ರೀಯ ಸನ್ಮಾನದ ಗೌರವ ಸಿಕ್ಕಿದೆ. ಇದು ನಿಮ್ಮ ಶ್ರಮದಿಂದ ಸಾಧ್ಯವಾಗಿದೆ. ನಿಮ್ಮ ಗಣನೀಯ ಸೇವೆಯ ಫಲ ನಲ್ಲೂರು ಬಳಿಯಲ್ಲಿನ ಕಸ ವಿಲೇವಾರಿ ಘಟಕದಲ್ಲಿ ಕಸ ಬೇರ್ಪಡಿಸಿ, ಗೊಬ್ಬರವನ್ನಾಗಿಸುವ ಕಾರ್ಯಕ್ಕೆ ಸರ್ಕಾರದಿಂದ ಸಲಕರಣೆ, ಯಂತ್ರೋಪಕರಣಕ್ಕಾಗಿ ಅನುದಾನ ಹರಿದು ಬಂದಿದೆ. ನಿಮ್ಮ ಸೇವೆಗೆ ಪುರಸಭಾ ಆಡಳಿತ ಮಂಡಳಿಯು ಎಲ್ಲ ರೀತಿಯ ಸಹಕಾರ ನೀಡುತ್ತದೆ ಎಂದರು.

ನಿಮ್ಮ ಆರೋಗ್ಯದಿಂದ ಪಟ್ಟಣದ ಉತ್ತಮ ಆರೋಗ್ಯ ಸಾಧ್ಯ, ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಉತ್ತಮ ಆರೋಗ್ಯ ಕಾಪಾಡಿಕೊಳ್ಳಿ ಎಂದು ಮನವಿ ಮಾಡಿದ ಅವರು, ನಿಮ್ಮೆಲ್ಲರ ಕೋರಿಕೆ ಮೇರೆಗೆ ಪಟ್ಟಣಕ್ಕೆ ಹತ್ತಿರವಾಗಿ ಮಾರೇನಹಳ್ಳಿ ವ್ಯಾಪ್ತಿಯಲ್ಲಿ ೩ ಎಕರೆ ೧೮ ಗುಂಟೆ ಜಾಗವನ್ನು ನಿವೇಶನಕ್ಕಾಗಿ ಗುರುತಿಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಅವರು ಅಂಕಿತ ಹಾಕಿ ಪೌರಕಾರ್ಮಿಕರ ಮೀಸಲು ಜಾಗ ಎಂಬುದಾಗಿ ಅರಿಸಿ ಬಂದಿದೆ. ಸದ್ಯದಲ್ಲೆ ಲೇಔಟ್ ನಿರ್ಮಿಸಿ ನಿವೇಶನಗಳನ್ನು ಹಂಚಿಕೆ ಮಾಡುವುದಾಗಿ ತಿಳಿಸಿದರು.

ಸಮಾರಂಭದಲ್ಲಿ ಅತ್ಯುತ್ತಮ ಪೌರಕಾರ್ಮಿರಾಗಿ ಕೆ.ಕೆ.ಪ್ರದೀಪ್ ಕುಮಾರ್, ಪವನ್ ಕುಮಾರ್, ನವೀನ್ ಕುಮಾರ್, ಸಿ.ಎಸ್.ಅಜಯ್, ನಾಗಮ್ಮ, ರವಿಕುಮಾರ್, ಶರತ್, ಬಿ.ಪ್ರದೀಪ್ ರವರನ್ನು ಸನ್ಮಾನಿಸಲಾಯಿತು. ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಗೆದ್ದ ಪೌರಕಾರ್ಮಿಕರಿಗೆ ಬಹುಮಾನ ವಿತರಣೆ ಮಾಡಲಾಯಿತು.

ಸಮಾರಂಭದ ಆರಂಭದಲ್ಲಿ ಸಾವನ್ನಪ್ಪಿದ್ದ ನಾಲ್ವರು ಪೌರಕಾರ್ಮಿಕರಾದ ನಲ್ಲಮ್ಮ, ಅಣ್ಣಪ್ಪ, ಮಹೇಶ್, ಭಾಸ್ಕರ್ ರವರ ಆತ್ಮಕ್ಕೆ ಶಾಂತಿ ಕೋರಿ ಮೌನಚಾರಣೆ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಪುರಸಭಾಧ್ಯಕ್ಷೆ ಬನಶಂಕರಿ ರಘು, ಉಪಾಧ್ಯಕ್ಷೆ ರಾಣಿಕೃಷ್ಣ, ಸ್ಥಾಯಿಸಮಿತಿ ಅಧ್ಯಕ್ಷ ಕೆ.ಆರ್.ಸುರೇಶ್, ಸದಸ್ಯರಾದ ರೇಖಾ ಅನಿಲ್, ನವೀನ್ ಕುಮಾರ್, ಮೋಹನ್ ಕುಮಾರ್, ಸುಜಾತ, ಲಕ್ಷ್ಮೀ, ಕವಿತಾರಾಜು, ಫರ್ಹಾನ್‌ಭಾನು, ಗಣೇಶ್, ಧರಣೇಶ್, ನಾಮ ನಿರ್ದೇಶಿತ ಸದಸ್ಯರಾದ ಉಮಾಶಂಕರ್, ರವಿ, ಮುಖ್ಯಾಧಿಕಾರಿ ಹೇಮಂತ್ ಕುಮಾರ್, ಪರಿಸರ ಅಭಿಯಂತರೆ ಕಾವ್ಯ ಸೇರಿ ಸಿಬ್ಬಂದಿ ವರ್ಗ ಹಾಜರಿದ್ದರು.ಇನ್ನೂ ಪೌರಕಾರ್ಮಿಕ ದಿನಾಚರಣೆಗೂ ಮುನ್ನಾ ಎಲ್ಲ ಪೌರಕಾರ್ಮಿಕರು ಪಟ್ಟಣದ ಪುರಸಭೆ ಕಾರ್ಯಾಲಯದಿಂದ ಪಂಪ್ ಹೌಸ್ ವರೆಗೂ ಮೆರವಣಿಗೆಯಲ್ಲಿ ಸಾಗಿದರು, ಮೆರವಣಿಗೆಯುದ್ದಕ್ಕೂ ಡಿಜೆ ಸೌಂಡ್ಸ್ ಗೆ ಪೌರಕಾರ್ಮಿಕರು, ಪುರಸಭೆ ಅಧಿಕಾರಿಗಳು, ಸಿಬ್ಬಂದಿ ಸೇರಿ ಪುರಸಭಾ ಸದಸ್ಯರು ಕುಣಿದು ಸಂಭ್ರಮಿಸಿದರು.