ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಶಾಲಾ-ಕಾಲೇಜುಗಳ ದಾಖಲೆಗಳಲ್ಲಿ ಜಾತಿ ಕುರಿತಂತೆ ನಮೂದಾಗಿರುವ ತಪ್ಪುಗಳನ್ನು ಸರಿಪಡಿಸಲು ನಿರ್ದೇಶಿಸುವಂತೆ ಕೋರಿದ ದಾವೆಯ ವಿಚಾರಣೆ ನಡೆಸಿ ಆದೇಶ ಪ್ರಕಟಿಸುವ ಅಧಿಕಾರವನ್ನು ಸಿವಿಲ್ ನ್ಯಾಯಾಲಯಗಳು ಹೊಂದಿವೆ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಶಾಲಾ-ಕಾಲೇಜು ದಾಖಲೆಗಳಲ್ಲಿ ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿದ ಭೋವಿ ಜಾತಿಗೆ ಬದಲಾಗಿ ಗೌಡ ಎಂದು ನಮೂದಾಗಿರುವುದನ್ನು ಸರಿಪಡಿಸಲು ಕೋರಿ ದಾಖಲಿಸಿದ್ದ ದಾವೆಯನ್ನು ವಿಚಾರಣೆಗೆ ಪರಿಗಣಿಸುವ ಅಧಿಕಾರ ತನಗಿಲ್ಲ ಎಂದು ಸಿವಿಲ್ ನ್ಯಾಯಾಲಯ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಕೊಡಗಿನ ಇಬ್ಬರು ವಿದ್ಯಾರ್ಥಿನಿಯರು ದಾಖಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಂ ಅವರ ಪೀಠ ಈ ತೀರ್ಪು ನೀಡಿದೆ.
ದಾಖಲೆಗಳ ಪ್ರಕಾರ ದಾವೆದಾರ ವಿದ್ಯಾರ್ಥಿನಿಯರು ಭೋವಿ ಸಮುದಾಯಕ್ಕೆ ಸೇರಿದ್ದಾರೆ. ಆ ಕುರಿತು ಅವರಿಗೆ ತಹಸೀಲ್ದಾರ್ ಸಹ ಜಾತಿ ಪ್ರಮಾಣ ಪತ್ರ ವಿತರಿಸಿದ್ದಾರೆ.
ಜಾತಿ ಪ್ರಮಾಣ ಪತ್ರದ ಮಾನ್ಯತೆಯ ಮೌಲೀಕರಣಕ್ಕೆ ದಾವೆದಾರರು ಕೋರಿಲ್ಲ. ಮೀಸಲು ಕೆಟಗರಿ ಅಥವಾ ಹಿಂದುಳಿದ ವರ್ಗದಡಿ ಸರ್ಕಾರಿ ಉದ್ಯೋಗ ಕೋರಿದ ಸಂದರ್ಭದಲ್ಲಿ ಜಾತಿ ಪ್ರಮಾಣ ಪತ್ರದ ಮಾನ್ಯತೆಯ ಮೌಲೀಕರಣದ ಪ್ರಶ್ನೆ ಉದ್ಭವಿಸುತ್ತದೆ. ಅದರಿಂದ ಜಿಲ್ಲಾ ಜಾತಿ ಪರಿಶೀಲನಾ ಸಮಿತಿ ಮುಂದೆ ಪರಿಹಾರ ಕೋರುವ ಅಗತ್ಯ ಅವರಿಗಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ತಹಸೀಲ್ದಾರ್ ವಿತರಿಸಿದ ಜಾತಿ ಪ್ರಮಾಣ ಪ್ರತದ ಆಧರಿಸಿ ಶಾಲಾ-ಕಾಲೇಜುಗಳಲ್ಲಿ ದಾಖಲೆಗಳಲ್ಲಿ ಉಂಟಾಗಿರುವ ದೋಷಗಳನ್ನು ಸರಿಪಡಿಸಲು ದಾವೆದಾರರು ಕೋರಿದ್ದಾರೆ.
ಈ ಕುರಿತು ವಿಚಾರಣೆ ನಡೆಸಿ ಪರಿಹಾರ ಕಲ್ಪಿಸುವುದಕ್ಕೆ ಸಿವಿಲ್ ನ್ಯಾಯಾಲಯಗಳಿಗೆ ಕರ್ನಾಟಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳು ಮತ್ತು ಇತರೆ ಹಿಂದುಳಿದ ವರ್ಗಗಳ (ನೇಮಕಾತಿಯಲ್ಲಿ ಮೀಸಲು ಇತ್ಯಾದಿ) ಕಾಯ್ದೆ-1990ರ ನಿಯಮಗಳು ಯಾವುದೇ ಅಡ್ಡಿ ಉಂಟು ಮಾಡುವುದಿಲ್ಲ.
ಜಾತಿ ಪ್ರಮಾಣ ಪತ್ರ ಆಧರಿಸಿ ಶಾಲಾ-ಕಾಲೇಜುಗಳ ದಾಖಲೆಗಳಲ್ಲಿ ಉಂಟಾಗಿರುವ ದೋಷ ಸರಿಪಡಿಸಲು ಕೋರಿದ ಮನವಿಯನ್ನು ವಿಚಾರಣೆಗೆ ಪರಿಗಣಿಸಿ ಅಗತ್ಯ ಪರಿಹಾರ ಒದಗಿಸಲು ಸಿವಿಲ್ ನ್ಯಾಯಾಲಯ ಅಧಿಕಾರ ವ್ಯಾಪ್ತಿ ಹೊಂದಿದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಅಂತಿಮವಾಗಿ ಪ್ರಕರಣದಲ್ಲಿ ಕೊಡಗು ಜಿಲ್ಲಾ ಸಿವಿಲ್ ನ್ಯಾಯಾಲಯ ಹೊರಡಿಸಿದ ಆದೇಶ ರದ್ದುಪಡಿಸಿದ ಹೈಕೋರ್ಟ್, ದಾವೆದಾರ ವಿದ್ಯಾರ್ಥಿನಿಯರು ವ್ಯಾಸಂಗ ಮಾಡಿರುವ ಶಾಲಾ ಕಾಲೇಜುಗಳು, ತನ್ನಲ್ಲಿನ ಎಲ್ಲಾ ದಾಖಲೆಗಳಲ್ಲಿ ತಪ್ಪಾಗಿ ನಮೂದಾಗಿರುವ ಜಾತಿಯನ್ನು ಬದಲಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು.
ಆ ಪ್ರಸ್ತಾವನೆ ಪರಿಗಣಿಸಿ ತಹಸೀಲ್ದಾರ್ ವಿದ್ಯಾರ್ಥಿನಿಯರಿಗೆ ಸಂಬಂಧಿಸಿದ ಶಾಲಾ-ಕಾಲೇಜಿನ ಎಲ್ಲಾ ದಾಖಲೆಗಳಲ್ಲಿ ಜಾತಿ ತಿದ್ದುಪಡಿ ಮಾಡಬೇಕು ಎಂದು ಆದೇಶಿಸಿದೆ.
ಪ್ರಕರಣವೇನು: ಪರಿಶಿಷ್ಟ ಜಾತಿಗಳ ಪಟ್ಟಿಗೆ ಬರುವ ಭೋವಿ ಸಮುದಾಯಕ್ಕೆ ಸೇರಿದ ಶ್ರೀನಿವಾಸ್ ಅವರಿಗೆ ಎಸ್.ಆಲ್ಫಾ ಮತ್ತು ನಿಯಾನ್ ಎಂಬ ಪುತ್ರಿಯರಿದ್ದಾರೆ. 2019ರಲ್ಲಿ ಆಲ್ಫಾ ಮೈಸೂರಿನ ಸೇಂಟ್ ಫಿಲೋಮಿನಾ ಕಾಲೇಜಿನಲ್ಲಿ ಬಿಎಸ್‌ಸಿ ಓದುತ್ತಿದ್ದರು. ನಿಯಾನ್ ಮೈಸೂರಿನ ಎನ್‌ಐಇ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿಇ ಪದವಿ ಪೂರೈಸಿದ್ದರು.
ಕುಶಾಲನಗರದ ಸಿವಿಲ್ ನ್ಯಾಯಾಲಯಕ್ಕೆ 2019ರಲ್ಲಿ ಅಸಲು ದಾವೆ ಹೂಡಿದ್ದ ಅವರು, ತಮ್ಮ ತಂದೆ ಭೋವಿ ಸಮುದಾಯದವರು. ಕುಶಾಲನಗರದಲ್ಲಿ ಪ್ರಾಥಮಿಕ ಶಾಲೆಗೆ ಪ್ರವೇಶ ಪಡೆದ ಸಂದರ್ಭದಲ್ಲಿ ಜಾತಿ ಪ್ರಮಾಣ ಪತ್ರದಲ್ಲಿ ಭೋವಿ ಬದಲಾಗಿ ಗೌಡ ಎಂದು ನಮೂದಿಸಲಾಗಿದೆ.
ಅದೇ ಪ್ರೌಢಶಾಲಾ ಹಾಗೂ ಕಾಲೇಜು ಶಿಕ್ಷಣದ ದಾಖಲೆಯಲ್ಲೂ ಮುಂದುವರಿದಿದೆ. ಆದ್ದರಿಂದ ತಾವು ಭೋವಿ ಜಾತಿಗೆ ಸೇರಿರುವುದಾಗಿ ಘೋಷಿಸಬೇಕು. ತಮ್ಮ ದಾಖಲೆಗಳಲ್ಲಿ ಉಂಟಾಗಿರುವ ದೋಷ ಸರಿಪಡಿಸಲು ಶಾಲಾ-ಕಾಲೇಜು ಮತ್ತು ಸರ್ಕಾರಕ್ಕೆ ಆದೇಶಿಸಬೇಕು ಎದು ಕೋರಿದ್ದರು.
ಆ ಅಸಲು ದಾವೆಯನ್ನು ಕುಶಾಲನಗರ ಸಿವಿಲ್ ನ್ಯಾಯಾಲಯವು 2019ರ ಅ.10ರಂದು ವಜಾಗೊಳಿಸಿತ್ತು. ಇದರಿಂದ ವಿದ್ಯಾರ್ಥಿನಿಯರು ಸೋಮವಾರಪೇಟೆಯ ಹಿರಿಯ ಸಿವಿಲ್ ನ್ಯಾಯಾಲಯಕ್ಕೆ ಮೇಲ್ಮನವಿ (ರೆಗ್ಯೂಲರ್ ಅಪೀಲ್) ಸಲ್ಲಿಸಿದ್ದರು. ಜಾತಿ ಪ್ರಮಾಣ ಪತ್ರ ಸೇರಿದಂತೆ ಶಾಲಾ-ಕಾಲೇಜುಗಳ ದಾಖಲೆಗಳಲ್ಲಿನ ತಪ್ಪನ್ನು ಸರಿಪಡಿಸಲು ಕೋರಿದ ದಾವೆಗಳನ್ನು ವಿಚಾರಣೆ ನಡೆಸಿ ಅಗತ್ಯ ಪರಿಹಾರ ಕಲ್ಪಿಸುವ ಅಧಿಕಾರ ತನಗಿಲ್ಲ.
ದಾವೆದಾರರು ತಮ್ಮ ಕುಂದುಕೊರತೆ ಪರಿಹರಿಸಲು ಜಿಲ್ಲಾ ಜಾತಿ ಪರಿಶೀಲನಾ ಸಮಿತಿಗೆ ಕೋರಬಹುದು ಎಂದು ತಿಳಿಸಿ 2021ರ ನ.25ರಂದು ಹಿರಿಯ ಸಿವಿಲ್ ನ್ಯಾಯಾಲಯ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಆಲ್ಫಾ ಮತ್ತು ನಿಯಾನ್ ಹೈಕೋರ್ಟ್‌ಗೆ ಮೇಲ್ಮನವಿ (ರೆಗ್ಯೂಲರ್ ಸೆಕೆಂಡ್ ಅಪೀಲ್) ಸಲ್ಲಿಸಿದ್ದರು.