ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ವತಿಯಿಂದ ಪೌರ ಕಾರ್ಮಿಕರ ದಿನಾಚರಣೆಯನ್ನು ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ

ಇಲ್ಲಿನ ಗ್ರಾಮ ಪಂಚಾಯಿತಿಯು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದ ನಂತರ ಇದೇ ಮೊದಲ ಬಾರಿಗೆ ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ವತಿಯಿಂದ ಪೌರ ಕಾರ್ಮಿಕರ ದಿನಾಚರಣೆಯನ್ನು ಆಚರಿಸಲಾಯಿತು.ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅಣ್ಣೀರ ಹರೀಶ್, ಇಡೀ ಪಟ್ಟಣ ಸ್ವಚ್ಛಂದ ಮತ್ತು ಸುಂದರವಾಗಿ ಕಾಣಬೇಕಾದರೆ ಆಯಾ ವ್ಯಾಪ್ತಿಯ ಪೌರಕಾರ್ಮಿಕರ ಕ್ರಮವನ್ನು ಅವಲಂಬಿಸಿದೆ. ಬೆಳಗಿನ ಜಾವ ಇವರು ಮಾಡುವ ಸ್ವಚ್ಛತಾ ಕಾಯಕವೇ ಆರೋಗ್ಯ ಪೂರ್ಣ ಪಟ್ಟಣ ನಿರ್ಮಾಣಕ್ಕೆ ಪ್ರಮುಖ ಕಾರಣವಾಗಿದೆ. ತಮ್ಮ ಆರೋಗ್ಯ ಲೆಕ್ಕಿಸದೆ ಪಟ್ಟಣದ ಆರೋಗ್ಯ ಕಾಪಾಡುವ ಪೌರಕಾರ್ಮಿಕರೇ ನಿಜವಾದ ಶ್ರಮಜೀವಿಗಳು. ಪೌರಕಾರ್ಮಿಕರ ವೃತ್ತಿ ಬದ್ಧತೆ ಶ್ರೇಷ್ಠವಾದದ್ದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷರಾದ ಆಲೀರ ಎಂ. ರಶೀದ್ ಮಾತನಾಡಿ, ವಿಶ್ವಗುರು ಬಸವಣ್ಣ ಅವರು ಕಾಯಕವೇ ಕೈಲಾಸ ತತ್ವವನ್ನು ಚಾಚೂತಪ್ಪದೆ ಪೌರ ಕಾರ್ಮಿಕರು ಪಾಲಿಸುತ್ತಿದ್ದಾರೆ. ಮನೆಗಳಿಂದ ತ್ಯಾಜ್ಯ ಸಂಗ್ರಹಿಸಿ, ನಗರದೊಳಗಿನ ತ್ಯಾಜ್ಯ ತೆರವುಗೊಳಿಸಿ ಸ್ವಚ್ಛತೆಗೆ ಶ್ರಮಿಸುತ್ತಿರುವ ಪೌರ ಕಾರ್ಮಿಕ ಶ್ರಮ ಅಪಾರ. ಸ್ವಚ್ಛತಾ ರಾಯಭಾರಿಗಳಾಗಿರುವ ಪೌರ ಕಾರ್ಮಿಕರಿಗೆ ಕೃತಜ್ಞತೆ ಸಲ್ಲಿಸಲು ಸರ್ಕಾರ ಪೌರಕಾರ್ಮಿಕರ ದಿನಾಚರಣೆ ಆಚರಿಸುತ್ತಿದೆ ಎಂದು ಹೇಳಿದರಲ್ಲದೆ, ಇದುವರೆಗೂ ಇದ್ದ ಪೊನ್ನಂಪೇಟೆ ಗ್ರಾಮ ಪಂಚಾಯಿತಿಗೆ ರಾಷ್ಟ್ರ ಮತ್ತು ರಾಜ್ಯಮಟ್ಟದ ಪ್ರಶಸ್ತಿಗಳು ಬರಲು ಸ್ಥಳೀಯ ಪೌರಕಾರ್ಮಿಕರ ಪ್ರಾಮಾಣಿಕವಾದ ವೃತ್ತಿಸೇವೆಯೇ ಕಾರಣ ಎಂದು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಸ್. ಗೋಪಿ ಮಾತನಾಡಿ, ಪೊನ್ನಂಪೇಟೆಯಲ್ಲಿ ಸಿಬ್ಬಂಧಿ ಕೊರತೆಯ ನಡುವೆಯೂ ಇಲ್ಲಿನ ಸ್ವಚ್ಛತಾಗಾರರು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇದುವರೆಗೂ ಗ್ರಾಮ ಪಂಚಾಯಿತಿಯಲ್ಲಿ ತಾತ್ಕಾಲಿಕ ಸೇವೆ ಸಲ್ಲಿಸುತ್ತಿದ್ದ ಸ್ವಚ್ಛತಾಗಾರರನ್ನು ನೇರಪಾವತಿಯಡಿ ಸೇರಿಸಲು ನಗರಾಭಿವೃದ್ಧಿ ಇಲಾಖೆಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ಮಾಸಿಕ ವೇತನ ಹೊರತುಪಡಿಸಿ ಪ್ರತೀ ತಿಂಗಳಿಗೆ ತಲಾ 2000 ರು. ದಂತೆ ಸಂಕಷ್ಟ ಭತ್ಯೆ, ಬೆಳಗಿನ ಉಪಾಹಾರ, ಆರೋಗ್ಯ ವಿಮೆ ಇತ್ಯಾದಿ ಸೇವೆಗಳನ್ನು ಒದಗಿಸುವುದಾಗಿ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿಯ ಎಲ್ಲಾ 12 ಜನ ಸ್ಛಚ್ಛತಾಗಾರರಿಗೆ ಅವರ ಸುದೀರ್ಘ ಸೇವೆಯನ್ನು ಗುರುತಿಸಿ ಸನ್ಮಾನಿಸಿ ಗೌರವಿಸಲಾಯಿತು. ಅಲ್ಲದೆ ಸಮವಸ್ತ್ರ ಮತ್ತು ಪೌರಕಾರ್ಮಿಕರ ಎಲ್ಲಾ ಕುಟುಂಬಗಳಿಗೆ ಕುಕ್ಕರ್ ಗಳನ್ನು ವಿತರಿಸಲಾಯಿತು. ವೇದಿಕೆಯಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರಾದ ಪಿ. ಕೆ. ವಿಜಯಕುಮಾರ್, ಆಲೀರ ಅಬ್ದುಲ್ ಅಜೀಜ್, ಕೆ.ವಿ. ರಾಮಕೃಷ್ಣ , ಮೂಕಳೇರ ಜಿ. ಸುಮಿತ, ಕೋಳೇರ ಯಮುನಾ ಭಾರತಿ, ರಶಿಕ ಅಶ್ವಥ್, ನೇತ್ರಾವತಿ ಪಿ.ಡಿ. ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕಚೇರಿಯ ಸಿಬ್ಬಂದಿ ಸೇರಿದಂತೆ ಪೌರಕಾರ್ಮಿಕರ ಕುಟುಂಬದ ವರ್ಗದವರು ಹಾಜರಿದ್ದರು.