ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರಕೋಲಾರ ನಗರಸಭೆಯ ಪೌರಕಾರ್ಮಿಕರನ್ನು ಒಳಚರಂಡಿ ಮತ್ತು ಸ್ವಚ್ಛಾತ ಕಾರ್ಮಿಕರನ್ನು ಸರ್ಕಾರದ ನಿಯಮಾವಳಿಗಳ ವಿರುದ್ಧವಾಗಿ ನಿಗದಿತ ಅವಧಿಗಿಂತ ಹೆಚ್ಚುವರಿಯಾಗಿ ಓವರ್‌ಟೈಮ್ ಭತ್ಯೆ ನೀಡದೆ ರಜೆ ದಿನಗಳಾದ 2ನೇ ಮತ್ತು 4ನೇ ಶನಿವಾರಗಳಂದು ಕೆಲಸ ನಿರ್ವಹಿಸಲು ಸೂಚಿಸಿ ಶೋಷಣೆ ಮಾಡುತ್ತಿರುವ ವಿರುದ್ಧವಾಗಿ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗಕ್ಕೆ ಮನವಿ ಸಲ್ಲಿಸಲಾಗಿದೆ.ನಗರಸಭೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ ನಗರಸಭೆ ಅಧಿಕಾರಿಗಳು ಕಸ ಸಂಗ್ರಹ ಮಾಡಲು ವಾಹನಗಳನ್ನು ನಿಯೋಜಿಸದ ಕಾರಣ ಸಾರ್ವಜನಿಕರು ಕಸಗಳನ್ನು ಎಲ್ಲೆಂದರಲ್ಲಿ ಸುರಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ನಗರದಲ್ಲಿ ಸ್ವಚ್ಛತೆ ಎಂಬುವುದು ಇಲ್ಲವಾಗಿದೆ. ಸಂಬಂಧಪಟ್ಟ ನಗರಸಭೆ ಅಧಿಕಾರಿಗಳು ಮನೆ ಮನೆ ಕಸ ಸಂಗ್ರಹಿಸಿ ವಿಲೇವಾರಿ ಮಾಡುವ ಕುರಿತು ಕರ್ತವ್ಯ ಲೋಪವೆಸೆಗುವ ಮೂಲಕ ನಗರಸಭೆ ಕಾರ್ಮಿಕರ ಮೇಲೆ ಆರೋಪಿಸುತ್ತಿದ್ದಾರೆಂದು ದೂರಿದ್ದಾರೆ.ಸಾರ್ವಜನಿಕರು ಕಸವನ್ನು ಎಲ್ಲೆಂದರೆ ಸುರಿಯುವ ಮೂಲಕ ಹಸಿ ಕಸ ಮತ್ತು ಒಣ ಕಸವನ್ನು ಸುರಿಯುತ್ತಿರುವುದರಿಂದ ಹಸಿಕಸವು ಕೊಳೆತು ದುರ್ವಾಸನೆಯಿಂದ ಪರಿಸರ ಮಾಲಿನ್ಯ ಉಂಟಾಗುತ್ತಿದೆ. ಪೌರಕಾರ್ಮಿಕರು ಕಸವನ್ನು ವಿಲೇವಾರಿ ಮಾಡಲು ಯಾವುದೇ ರೀತಿ ಆರೋಗ್ಯ ಸುರಕ್ಷತಾ ಪರಿಕರಗಳಾದ ಕೈಚೀಲ, ಕಾಲು ಚೀಲ, ಮಾಸ್ಕ್, ಸ್ಯಾನಿಟೈಸರ್, ಮುಂತಾದವುಗಳನ್ನು ನೀಡುತ್ತಿಲ್ಲ. ಇದರಿಂದ ದಿನನಿತ್ಯ ಕರ್ತವ್ಯ ನಿರತರಾಗುವ ಪೌರಕಾರ್ಮಿಕರು ಅನಾರೋಗ್ಯಕ್ಕೆ ತುತ್ತಾಗುವಂತಾಗಿದೆ ಎಂದು ಆರೋಪಿಸಿದ್ದಾರೆ.ನಗರದಲ್ಲಿ 35 ವಾರ್ಡ್‌ಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಯನ್ನು ನಿಯೋಜಿಸಿಕೊಳ್ಳದೆ ಅತಿ ಕಡಿಮೆ ಸಂಖ್ಯೆಯಲ್ಲಿ ನಾಲ್ಕು ಮಂದಿ ಮಾಡುವ ಕೆಲಸವನ್ನು ಒಬ್ಬರು ಮಾಡುವಂತೆ ಕಾರ್ಮಿಕರನ್ನು ಪ್ರಾಣಿಗಳಿಗಿಂತ ಕಡೆಯಾಗಿ ಮಾನವೀಯತೆ ಇಲ್ಲದಂತೆ ದುಡಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕಾರ್ಮಿಕರಿಗೆ ಕೆಲಸದ ಒತ್ತಡ ತೀವ್ರವಾಗಿದೆ. ಅಲ್ಲದೆ ದುಡಿಮೆಗೆ ತಕ್ಕಂತೆ ವೇತನ ಸಹ ನೀಡುತ್ತಿಲ್ಲ.
ತಿಂಗಳ 2ನೇ ಮತ್ತು 4ನೇ ಶನಿವಾರಗಳಂದು ಸರ್ಕಾರಿ ರಜೆ ಇದ್ದರೂ ಸಹ ಕಾನೂನು ಬಾಹಿರವಾಗಿ ಜಿಲ್ಲಾಧಿಕಾರಿ ಕಚೇರಿಯಿಂದ ಆದೇಶ ಜಾರಿ ಮಾಡಿಸಿಕೊಂಡು ಮಧ್ಯಾಹ್ನ 2 ಗಂಟೆಯವರೆಗೆ ಕೆಲಸ ನಿರ್ವಹಿಸಬೇಕೆಂದು ಆದೇಶದಲ್ಲಿ ಸೂಚಿಸಲಾಗಿದೆ. ಇದರಿಂದಾಗಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಾರ್ಮಿಕರಿಗೆ ವಿಶ್ರಾಂತಿ ಎಂಬುವುದು ಇಲ್ಲದೆ ಯಂತ್ರಗಳಂತೆ ದುಡಿಸಿಕೊಳ್ಳುತ್ತಿದ್ದಾರೆ. ಇದರಿಂದ ಕಾರ್ಮಿಕರು ಪದೇ ಪದೇ ಅನಾರೋಗ್ಯಕ್ಕೆ ತುತ್ತಾಗಬೇಕಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಒಳಚರಂಡಿ ಮತ್ತು ಸ್ಚಚ್ಛತಾ ಕಾರ್ಮಿಕರಿಗೆ ಸಾಂದರ್ಭಿಕ ರಜೆ ಹಾಕಲು ಅವಕಾಶ ಇದ್ದರೂ ಸಹ ರಜೆ ನೀಡಲು ನಿರಾಕರಿಸುತ್ತಿದ್ದಾರೆ. ಪ್ರತಿ ಮಾಹೆ ಒಂದು ದಿನ ಮಾತ್ರ ರಜೆ ನೀಡುವುದಾಗಿ ಕರಾರು ಹಾಕುತ್ತಾರೆ. ಕಾನೂನುಗಳ ಕುರಿತು ಪ್ರಸ್ತಾಪಿಸಿದರೆ ಕೆಲಸದಿಂದ ತೆಗೆದು ಹಾಕುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಅದ್ಯಾಗೂ ಸಿ.ಎಲ್ ರಜೆ ಹಾಕಿದರೆ ಗೈರು ಹಾಜರಿ ಹಾಕಿ ವೇತನವನ್ನು ಕಡಿತ ಮಾಡುತ್ತಾರೆ.ಇದರಿಂದ ಮುಂದೆ ಕೆಲಸಕ್ಕೆ ತೊಂದರೆಯಾಗಲಿದೆ ಎಂದು ಬೆದರಿಸುತ್ತಿದ್ದಾರೆ. ಅನೇಕ ರೀತಿಯ ಕಿರುಕುಳಗಳಿಂದ ಅನ್ಯಾಯ, ವಂಚನೆಗೆ ತುತ್ತಾಗಿದ್ದೇವೆ. ಕಾರ್ಮಿಕರ ಕಾಯ್ದೆಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಲಾಗಿದೆ. ಜಿಲ್ಲಾ ಕಾರ್ಮಿಕ ಇಲಾಖೆಯು ನಾಮಾಕಾವಸ್ಥೆಗೆ ಇದ್ದು ಕಾರ್ಮಿಕರ ಕುಂದು ಕೊರತೆಗಳನ್ನು ಕೇಳುವವರಿಲ್ಲದಂತಾಗಿದೆ ಎಂದು ತಮ್ಮ ಅಳಲನ್ನು ತೊಡಿಕೊಂಡು ರಾಜ್ಯ ಸಹಾಯ ಕರ್ಮಚಾರಿಗಳ ಆಯೋಗಕ್ಕೆ ದೂರಿನ ಮನವಿ ಸಲ್ಲಿಸಿದ್ದಾರೆ.
ಕೋಟ್:ಪ್ರತಿದಿನ 5 ಗಂಟೆಗೆ ನಗರಸಭೆ ಕಚೇರಿ ಹೋಗಿ ಹಾಜರಾತಿ ನೀಡಿದ ನಂತರ ನಮ್ಮ ವಾರ್ಡುಗಳಿಗೆ ತೆರಳಿ ಹಸಿ-ಒಣ ಕಸ ಸಂಗ್ರಹಿಸಿದ ನಂತರ ನಗರಸಭೆಯಿಂದ ಬರುವ ಕಸದ ವಾಹನಗಳಿಗೆ ಸಂಗ್ರಹಿಸಿದ ಕಸ ನೀಡಬೇಕು. ಪ್ರಮುಖ ರಸ್ತೆಗಳಲ್ಲಿ ಸ್ವಚ್ಚತೆ ಮಾಡಬೇಕು ಇವೆಲ್ಲ ಕೆಲಸ ಮುಗಿಯುವಷ್ಟರಲ್ಲಿ ಮಧ್ಯಾಹ್ನ 2 ಗಂಟೆಯಾಗಿರುತ್ತದೆ. ಪೌರಕಾರ್ಮಿಕರು ಕಡಿಮೆಯಿರುವ ಕಾರಣ ನಾಲ್ಕು ಮಂದಿ ಮಾಡಬೇಕಾದ ಕೆಲಸ ಒಬ್ಬರೇ ಮಾಡಬೇಕಾಗಿದೆ.- ಹೆಸರು ಹೇಳಲು ಇಚ್ಚಿಸದ ಪೌರಕಾರ್ಮಿಕ...........ಜಿಲ್ಲಾ ಕೇಂದ್ರದಲ್ಲಿ ಸ್ಚಚ್ಛತೆ ಕಾಪಾಡುವುದು ನಮ್ಮ ಧ್ಯೇಯವಾಗಿದ್ದು, ಆದರೆ ಪೌರಕಾರ್ಮಿಕರ ಸಿಬ್ಬಂದಿ ಕೊರತೆ ಇರುವುದರಿಂದ ಸ್ವಚ್ಛತೆ ಮಾಡುವಲ್ಲಿ ಯಶಸ್ಸು ಕಂಡಿಲ್ಲ. ಸಿಬ್ಬಂದಿ ಕೊರತೆ ಕುರಿತು ಈಗಾಗಲೇ ಜಿಲ್ಲಾಡಳಿತದ ಗಮನಕ್ಕೆ ತಂದಿದ್ದು, ಅವರು ಸರ್ಕಾರದ ಗಮನಕ್ಕೆ ಸಿಬ್ಬಂದಿ ಕೊರತೆ ಪರಿಹರಿಸುವುದಾಗಿ ಭರವಸೆ ನೀಡಿದ್ದಾರೆ.ನವೀನ್ ಚಂದ್ರ, ನಗರಸಭೆ ಪೌರಾಯುಕ್ತ