ಸಾರಾಂಶ
ಪಾಲಿಕೆ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಭೇಟಿ ನೀಡಿ ನಮ್ಮ ಸಮಸ್ಯೆ ಆಲಿಸುತ್ತಿಲ್ಲ. ಇದೇ ರೀತಿ ಮುಂದುವರಿದಲ್ಲಿ ಪಾಲಿಕೆ ಕಚೇರಿಗೆ ಬೀಗಹಾಕಿ ಆಹೋರಾತ್ರಿ ಧರಣಿ ನಡೆಸುವುದರೊಂದಿಗೆ ರಾಜ್ಯದ ಎಲ್ಲ ಪೌರಕಾರ್ಮಿಕರು ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಲಾಗಿದೆ.
ಹುಬ್ಬಳ್ಳಿ:
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಒಂದು ವಾರದಿಂದ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿರುವ ಪೌರಕಾರ್ಮಿಕರು ಸಂಘದ ರಾಜ್ಯಾಧ್ಯಕ್ಷ ನಾರಾಯಣ ನೇತೃತ್ವದಲ್ಲಿ ಬುಧವಾರ ಪಾಲಿಕೆ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.ಪಾಲಿಕೆ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಭೇಟಿ ನೀಡಿ ನಮ್ಮ ಸಮಸ್ಯೆ ಆಲಿಸುತ್ತಿಲ್ಲ. ಇದೇ ರೀತಿ ಮುಂದುವರಿದಲ್ಲಿ ಪಾಲಿಕೆ ಕಚೇರಿಗೆ ಬೀಗಹಾಕಿ ಆಹೋರಾತ್ರಿ ಧರಣಿ ನಡೆಸುವುದರೊಂದಿಗೆ ರಾಜ್ಯದ ಎಲ್ಲ ಪೌರಕಾರ್ಮಿಕರು ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ಮಾಡಲು ಕರೆ ನೀಡುವುದಾಗಿ ಎಚ್ಚರಿಕೆ ನೀಡಿದರು.
ಬೇಡಿಕೆ ಈಡೇರಿಸಲು ಸಮಯ ಕೇಳಿದ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ಧರಣಿ ಕೈಬಿಡುವಂತೆ ಮನವಿ ಮಾಡಿದರು. ಇದಕ್ಕೆ ಒಪ್ಪದ ಪೌರಕಾರ್ಮಿಕರು ಬೇಡಿಕೆ ಈಡೇರುವ ವರೆಗೂ ಧರಣಿ ಮುಂದುವರಿಸುವುದಾಗಿ ತಿಳಿಸಿದರು.ಈ ವೇಳೆ ಸಂಘದ ಜಿಲ್ಲಾಧ್ಯಕ್ಷ ವಿಜಯ ಗುಂಟ್ರಾಳ, ಗಂಗಮ್ಮ ಸಿದ್ರಾಮಪುರ, ಗಾಳೆಪ್ಪಾ ದ್ವಾಸಲಕೇರಿ, ಸೋಮು ಮೊರಬದ, ಶರಣಪ್ಪ ಅಮರಾವತಿ, ಕಿರಣಕುಮಾರ ಸೋಮರಡ್ಡಿ, ನಾಗರಾಜ ದೊಡ್ಡಮನಿ, ತಾಯಪ್ಪ ಬೆಳ್ಳಿಕೊಪ್ಪ ಕನಕಪ್ಪ ಕೋಟಬಾಗಿ, ಅನಿತಾ ಈನಗೊಂಡ, ಲಕ್ಷ್ಮೀ ಬೇತಾಪಲ್ಲಿ, ಬೆಂಗಳೂರು ನಗರ ಅಧ್ಯಕ್ಷ ಸುರೇಶ ಬಾಬು, ಹೆಬ್ಬಾಳ ನಾಗರಾಜ ದಾಸು ಸೇರಿದಂತೆ ಹಲವರಿದ್ದರು.