ರಕ್ತದಲ್ಲಿ ಮುಖ್ಯಮಂತ್ರಿಗೆ ಪೌರಕಾರ್ಮಿಕರ ಪತ್ರ

| Published : Jul 23 2024, 12:40 AM IST

ಸಾರಾಂಶ

ವಿವಿಧ ಬೇಡಿಕೆ ಮುಂದಿಟ್ಟುಕೊಂಡು ಪಾಲಿಕೆ ಎದುರಿಗೆ ಪೌರಕಾರ್ಮಿಕರು ನಡೆಸುತ್ತಿರುವ ಧರಣಿಯೂ 5ನೇ ದಿನಕ್ಕೆ ಕಾಲಿಟ್ಟಿದೆ. ಸೋಮವಾರ ರಕ್ತದಲ್ಲಿ ಮುಖ್ಯಮಂತ್ರಿಗೆ ಪತ್ರ ಬರೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹುಬ್ಬಳ್ಳಿ:

ಪೌರಕಾರ್ಮಿಕರನ್ನು ನೇರ ನೇಮಕಾತಿ ಹಾಗೂ ನೇರ ವೇತನ ಪಾವತಿ ಅಡಿ ನೇಮಿಸಿಕೊಳ್ಳಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆ ಮುಂದಿಟ್ಟುಕೊಂಡು ಪಾಲಿಕೆ ಎದುರಿಗೆ ಪೌರಕಾರ್ಮಿಕರು ನಡೆಸುತ್ತಿರುವ ಧರಣಿಯೂ 5ನೇ ದಿನಕ್ಕೆ ಕಾಲಿಟ್ಟಿದೆ. ಸೋಮವಾರ ರಕ್ತದಲ್ಲಿ ಮುಖ್ಯಮಂತ್ರಿಗೆ ಪತ್ರ ಬರೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ನಡುವೆ ಪಾಲಿಕೆ ಆಯುಕ್ತರು ಪ್ರತಿಭಟನಾಕಾರರೊಂದಿಗೆ ನಡೆಸಿದ ಸಂಧಾನವೂ ವಿಫಲವಾಗಿದೆ.

ಗುತ್ತಿಗೆ ಪದ್ಧತಿ ರದ್ದುಗೊಳಿಸಬೇಕು. ನೇರ ವೇತನ ಪಾವತಿಯಡಿ 799 ಜನ ಪೌರಕಾರ್ಮಿಕರನ್ನು ನೇಮಿಸಿಕೊಳ್ಳಬೇಕು. ಪಾಲಿಕೆ ಪ್ರಾಂಗಣದಲ್ಲಿ ಸಂಘದ ಕಚೇರಿ ತೆರೆಯಲು ಕೊಠಡಿ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆ ಮುಂದಿಟ್ಟುಕೊಂಡು ಪೌರಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಪಾಲಿಕೆ ಹಾಗೂ ಸರ್ಕಾರದಿಂದ ಸ್ಪಂದನೆ ಸಿಗುತ್ತಿಲ್ಲ ಎಂದು ಟೀಕಿಸಿ ಸೋಮವಾರ 100ಕ್ಕೂ ಹೆಚ್ಚು ಕಾರ್ಮಿಕರು ರಕ್ತದಿಂದ ಮುಖ್ಯಮಂತ್ರಿಗೆ ಪತ್ರ ಬರೆದು ರವಾನಿಸಿದರು.

ಈ ನಡುವೆ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿದರು. ನಿಮ್ಮ ಬೇಡಿಕೆಗಳನ್ನೆಲ್ಲ ಪರಿಶೀಲಿಸಿ ಬಗೆಹರಿಸಲಾಗುವುದು. ಕೆಲವೊಂದಿಷ್ಟು ಬೇಡಿಕೆಗಳು ಸರ್ಕಾರದ ಮಟ್ಟದಲ್ಲೇ ಬಗೆಹರಿಸಬೇಕಿದೆ. ಅವುಗಳನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ. ಅಲ್ಲಿಂದ ನಿರ್ದೇಶನ ಬಂದ ನಂತರ ಬಗೆಹರಿಸಲಾಗುವುದು. ಹೀಗಾಗಿ ಪ್ರತಿಭಟನೆಯಿಂದ ಹಿಂದೆ ಸರಿಯಿರಿ ಎಂದು ಮನವರಿಕೆ ಮಾಡಿಕೊಡಲು ಯತ್ನಿಸಿದರು. ಆದರೆ ಪೌರಕಾರ್ಮಿಕರು ಮಾತ್ರ 799 ಜನರನ್ನು ನೇರ ವೇತನ ಪಾವತಿಯಡಿ ನೇಮಿಸಿ ಆದೇಶ ಪತ್ರ ನೀಡಬೇಕು. ಪಾಲಿಕೆ ಪ್ರಾಂಗಣದಲ್ಲಿ ಸಂಘಕ್ಕೆ ಕಚೇರಿಗೆ ಕೊಠಡಿ ನೀಡಬೇಕು ಅಂದಾಗ ಮಾತ್ರ ಪ್ರತಿಭಟನೆ ಕೈ ಬಿಡುವುದಾಗಿ ಹೇಳಿದರು. ಇದರಿಂದ ಸಂಧಾನ ವಿಫಲವಾಯಿತು.

ಸ್ವಚ್ಛತೆಗೆ ಸಮಸ್ಯೆ:

ಈ ನಡುವೆ ಪೌರಕಾರ್ಮಿಕರು ಪ್ರತಿಭಟನೆ ನಡೆಸುತ್ತಿರುವುದರಿಂದ ಸ್ವಚ್ಛತೆಗೆ ಕೊಂಚ ಸಮಸ್ಯೆಯಾಗಿದೆ. ಇನ್ನು ಕೆಲ ದಿನ ಪ್ರತಿಭಟನೆ ಮುಂದುವರಿದರೆ ಸ್ವಚ್ಛತೆಗೆ ಇನ್ನಷ್ಟು ತೊಂದರೆಯಾಗಬಹುದು. ಆದಕಾರಣ ಆದಷ್ಟು ಶೀಘ್ರ ಮುಷ್ಕರ ಹಿಂಪಡೆಯುವಂತೆ ಪಾಲಿಕೆ ಹಾಗೂ ಸರ್ಕಾರ ಕ್ರಮಕೈಗೊಳ್ಳಬೇಕು ಎಂಬುದು ಪ್ರಜ್ಞಾವಂತರ ಅಳಲು.

ಸಂಘದ ಧಾರವಾಡ ಜಿಲ್ಲಾಧ್ಯಕ್ಷ ಡಾ. ವಿಜಯ ಗುಂಟ್ರಾಳ, ಗಾಳೆಪ್ಪಾ ದ್ವಾಸಲಕೇರಿ, ಗಂಗಮ್ಮ ಸಿದ್ರಾಮಪುರ ಸೋಮು ಮೊರಬದ, ಕನಕಪ್ಪ ಕೋಟಬಾಗಿ, ಚಂದ್ರಶೇಖರ ಖಾನಾಪುರ, ಕಿರಣಕುಮಾರ ಸೋಮರಡ್ಡಿ, ಸುರೇಶ ನಾಗರಾಳ, ವಿಜಯಕುಮಾರ ಗಬ್ಬೂರ, ರವಿ ಹೊಸಮನಿ ಸೇರಿದಂತೆ ನೂರಾರು ಪೌರಕಾರ್ಮಿಕರು ಧರಣಿಯಲ್ಲಿ ಪಾಲ್ಗೊಂಡಿದ್ದರು.