ಪೌರಕಾರ್ಮಿಕರೇ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಕೊಡಿ

| Published : Aug 21 2024, 12:34 AM IST

ಸಾರಾಂಶ

ಪೌರಕಾರ್ಮಿಕರು ತಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ಎಂದು ದಂತ ವ್ಯೆದ್ಯಾಧಿಕಾರಿ ಡಾ.ದೀಪಾ ಯಡವಣ್ಣವರ ಹೇಳಿದರು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಪೌರಕಾರ್ಮಿಕರು ತಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ಎಂದು ದಂತ ವ್ಯೆದ್ಯಾಧಿಕಾರಿ ಡಾ.ದೀಪಾ ಯಡವಣ್ಣವರ ಹೇಳಿದರು.

ಪುರಸಭೆಯಲ್ಲಿ ಮಂಗಳವಾರ ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ರಾಷ್ಟ್ರೀಯ ಬಾಯಿ ಆರೋಗ್ಯ ಕಾರ್ಯಕ್ರಮ ಜಿಲ್ಲಾ ಎನ್.ಸಿ.ಡಿ ಘಟಕ, ಎನ್.ಟಿ.ಸಿ.ಪಿ. ಘಟಕ, ತಾಲೂಕು ಆರೋಗ್ಯಾಧಿಕಾರಿಗಳ, ಸಮುದಾಯ ಆರೋಗ್ಯ ಕೇಂದ್ರ ಇವರ ಸಹಯೋಗದಲ್ಲಿ ನಡೆದ ತಂಬಾಕು ಸೇವನೆಗಳ ಸೇವನೆಯ ದುಷ್ಪರಿಣಾಮಗಳ ಕುರಿತು ಅರಿವು ಮತ್ತು ಉಚಿತ ದಂತ ಆರೋಗ್ಯ ಅಪಾಸಣೆ ಮತ್ತು ಬಾಯಿ ಕ್ಯಾನ್ಸರ್‌ ಜಾಗೃತಿ ಶಿಬಿರದಲ್ಲಿ ಪೌರ ಕಾರ್ಮಿಕರನ್ನುದ್ದೇಶಿಸಿ ಮಾತನಾಡಿದ ಅವರು, ಬಾಯಿ ಮತ್ತು ದಂತಗಳನ್ನು ಸ್ವಚ್ಛವಾಗಿಡುವ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ತಂಬಾಕು, ಮದ್ಯಪಾನ, ದೂಮಪಾನ ಸೇವನೆಯಿಂದ ನಿಮ್ಮ ಆರೋಗ್ಯ ಹಾಳಾಗುತ್ತದೆ. ಇವುಗಳಿಂದ ಪೌರಕಾರ್ಮಿಕರು ಆದಷ್ಟು ದೂರವಿದ್ದು ಉತ್ತಮ ಆಹಾರ ಸೇವನೆ ಮಾಡಬೇಕು. ತಮ್ಮ ಆರೋಗ್ಯವನ್ನು ಕ್ಯಾನ್ಸರ್‌ನಂತಹ ಮಹಾಮಾರಿರೋಗಗಳಿಗೆ ತುತ್ತಾಗದಂತೆ ಕಾಪಾಡಿಕೊಳ್ಳಬೇಕು. ನೀವು ಆರೋಗ್ಯವಂತರಾದರೇ ಇಡೀ ನಿಮ್ಮ ಕುಟುಂಬವೇ ನೆಮ್ಮದಿಯಾಗಿ ಬದುಕಲು ಸಾದ್ಯ ಎಂದರು.

ನಂತರ ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ಈರಣ್ಣ ದಡ್ಡಿ ಪೌರ ಕಾರ್ಮಿಕರ ಕೆಲಸವೆಂದರೆ ಅದು ಒತ್ತಡದ ಕೆಲಸವೆಂದು ನಮಗೂ ತಿಳಿದಿದೆ. ಹಾಗಂತ ಒತ್ತಡಕ್ಕೆ ಮಣಿದು ನೀವು ಕೆಟ್ಟ ಚಟಗಳಿಗೆ ಬಲಿಯಾದರೆ ನಿಮ್ಮ ಕುಟುಂಬದ ಗತಿ ಏನು? ಕಾರಣ ನೀವು ನಿಮ್ಮ ನಿತ್ಯ ಕೆಲಸದ ಜೋತೆಗೆ ನಿಮ್ಮ ಆರೋಗ್ಯವನ್ನು ಸಹ ಕಾಪಾಡಿಕೊಳ್ಳಿ, ದುಷ್ಟಟಗಳಿಂದ ದೂರವಿರಿ ಎಂದರು.

ನಂತರ ಮಾತನಾಡಿದ ಕಚೇರಿ ಅಧೀಕ್ಷಕ ಎಂ.ಬಿ ಅಕ್ಕಿ ಕ್ಯಾನ್ಸರ್‌ನಂತಹ ಮಹಾಮಾರಿ ರೋಗ ಬರದಂತೆ ತಡೆಯಲು ಇಂತಹ ಶಿಬಿರಗಳ, ಜಾಗೃತಿ ಕಾರ್ಯಕ್ರಮಗಳನ್ನು ಸರ್ಕಾರ ಪ್ರತಿವರ್ಷ ಮಾಡುತ್ತಲೇ ಬರುತ್ತಿದೆ. ಕಾರಣ ಇದರ ಸರಿಯಾದ ಸದುಪಯೋಗವನ್ನು ಎಲ್ಲ ಪೌರ ಕಾರ್ಮಿಕರು ಪಡೆದುಕೊಳ್ಳಬೇಕು. ಒಟ್ಟಿನಲ್ಲಿ ಬಾಯಿ ಕ್ಯಾನ್ಸರ್‌ನಂತ ಕಾಯಿಲೆಯನ್ನು ಪ್ರಾಥಮಿಕ ಹಂತದಲ್ಲಿಯೇ ಬರದಂತೆ ಎಲ್ಲ ಕಾರ್ಮಿಕರು ಎಚ್ಚರವಹಿಸಿ ಕೆಲಸ ನಿರ್ವಹಿಸಬೇಕು ಎಂದು ಸಲಹೆ ನೀಡಿದರು. ನೀವು ಆರೋಗ್ಯವಂತರಾದಾಗ ಮಾತ್ರ ಪಟ್ಟಣವನ್ನು ಸ್ವಚ್ಛವಾಗಿಡಲು ಸಾಧ್ಯ. ನಿಮ್ಮಲ್ಲಿರುವ ರೋಗಗಳನ್ನು ಪರಿಶೀಲಿಸಿ ಅವುಗಳಿಗೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡಿ ಅವುಗಳು ಬರದಂತೆ ಮುಂಜಾಗ್ರತಾ ಕೃಮ ವಹಿಸುವ ಸಲುವಾಗಿಯೇ ಸರ್ಕಾರ ಇಂತಹ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದರು.

ಈ ಸಂದರ್ಭದಲ್ಲಿ ಮುಖ್ಯ ವ್ಯೆದ್ಯಾಧಿಕಾರಿ ಡಾ.ಚಿಕ್ಕಯ್ಯ ವಜ್ರಮಟ್ಟಿ, ಬಸವರಾಜ ತೇಲಿ, ವಿನಾಯಕ ಮುಡಸಿ, ಪುರಸಭೆ ಸಿಬ್ಬಂದಿಯಾದ ಎಸ್.ಎನ್ ಪಾಟೀಲ, ಎಂ.ಎಂ.ಮುಗಳಖೋಡ, ರಾಜು ಹೂಗಾರ, ರಾಮು ಮಾಂಗ, ಮಾನಿಂಗ ಮಾಂಗ, ಲಕ್ಷ್ಮೀ ಪರೀಟ, ಲಕ್ಕಣ ದೊಡಮನಿ, ಹನಮಂತ ಮಾಂಗ ಹಾಗೂ ಇನ್ನಿತರ ಆರೋಗ್ಯ ಸಿಬ್ಬಂದಿಗಳು ಉಪಸ್ಥಿತರಿದ್ದರು.