ಸಾರಾಂಶ
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸಭೆಯಲ್ಲಿ ಆಯುಕ್ತರು 15 ದಿನಗಳಲ್ಲಿ ನೇರ ನೇಮಕಾತಿ ಆದೇಶ ಪತ್ರ ನೀಡುವುದಾಗಿ ಮತ್ತು ನೇರ ವೇತನ ಬಗ್ಗೆ ಸರ್ಕಾರದ ಅನುಮೋದನೆ ಪಡೆಯುವುದಾಗಿ ಭರವಸೆ ನೀಡಿದ್ದರು. ಆದರೆ ಅದನ್ನು ಈಡೇರಿಸಲು ವಿಫಲರಾಗಿದ್ದಾರೆ.
ಹುಬ್ಬಳ್ಳಿ:
ಪೌರ ಕಾರ್ಮಿಕರು ತಮ್ಮ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಇಲ್ಲಿನ ಪಾಲಿಕೆ ಕಚೇರಿ ಎದುರು ನಡೆಸುತ್ತಿರುವ ಧರಣಿ ಸತ್ಯಾಗ್ರಹ ಸೋಮವಾರ 6ನೇ ದಿನಕ್ಕೆ ಮುಂದುವರಿದಿದ್ದು, ತಲೆಯ ಮೇಲೆ ಕಲ್ಲು ಹೊತ್ತುಕೊಂಡು ಪ್ರತಿಭಟನೆ ನಡೆಸಿದರು.ಬೆಳಗ್ಗೆಯಿಂದ ಸಂಜೆಯ ವರೆಗೂ ಪ್ರತಿಭಟನಾಕಾರರು ತಲೆಯ ಮೇಲೆ ಭಾರದ ಕಲ್ಲು ಳನ್ನು ಹೊತ್ತುಕೊಂಡು, ವಿನೂತನ ರೀತಿಯಲ್ಲಿ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದೆ ನಡೆದ ಪಾಲಿಕೆ ಸಭೆಯಲ್ಲಿ ಆಯುಕ್ತರು 15 ದಿನಗಳಲ್ಲಿ ನೇರ ನೇಮಕಾತಿ ಆದೇಶ ಪತ್ರ ನೀಡುವುದಾಗಿ ಮತ್ತು ನೇರ ವೇತನ ಬಗ್ಗೆ ಸರ್ಕಾರದ ಅನುಮೋದನೆ ಪಡೆಯುವುದಾಗಿ ಭರವಸೆ ನೀಡಿದ್ದರು. ಆದರೆ ಅದನ್ನು ಈಡೇರಿಸಲು ವಿಫಲರಾಗಿದ್ದಾರೆ. ಪಾಲಿಕೆ ಸಾಮಾನ್ಯ ಸಭೆಯಲ್ಲಿ 3 ಬಾರಿ ನಮ್ಮ ಸಂಘದ ಬೇಡಿಕೆಗಳನ್ನು ಈಡೇರಿಸುವಂತೆ ಠರಾವು ಪಾಸ್ ಮಾಡಿದ್ದಾರೆ. ಆದರೂ ಆಯುಕ್ತರು ಬೇಡಿಕೆ ಈಡೇರಿಸಿಲ್ಲ. ಅಲ್ಲದೇ ಸರ್ಕಾರ ನಮ್ಮ ಬೇಡಿಕೆಗಳ ಬಗ್ಗೆ ನಕಾರಾತ್ಮಕ ಧೋರಣೆ ತಾಳುತ್ತಿರುವುದು ಖಂಡನೀಯ ಎಂದು ಆರೋಪಿಸಿದರು.ಪೌರಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಡಾ. ವಿಜಯ ಗುಂಟ್ರಾಳ, ಗಾಳೆಪ್ಪಾ ದ್ವಾಸಲಕೇರಿ, ಗಂಗಮ್ಮ ಸಿದ್ರಾಮಪುರ, ನೀಲವ್ವ ಬೆಳವಟಗಿ, ಶಿವಮ್ಮ ಬೇವಿನಮರದ, ಪದ್ಮಾ ಚಿಕ್ಕಣವರ, ಕಮಲವ್ವ ಕಲಕ್ಕನವರ, ರೇಣುಕಾ ಹೊಸಮನಿ, ರಾಮು ಮಾದರ, ಗಳೆಪ್ಪಾ ರಣತೂರ, ಶರೀಫ್ ಮಸರಕಲ, ನಾಗಮ್ಮ ಅಂಗಡಿ, ನೀಲಮ್ಮ ಕದಂ, ಸುನೀತಾ ಮಾದರ, ಮುತ್ಯಾಲಮ್ಮ ಪೂಜಾರ, ರಾಮಸುಲೋಚನಾ, ಪ್ರಿಯಾಂಕಾ ಹೊಸಪೇಟ್, ದಯಾನಂದ ಗೊಲ್ಲರ ಉಪಸ್ಥಿತರಿದ್ದರು.