ಪೌರಕಾರ್ಮಿಕರು ಹಾಗೂ ಅವರ ಕುಟುಂಬಗಳ ಸಮಗ್ರ ಕಲ್ಯಾಣಕ್ಕೆ ಜಿಲ್ಲಾಡಳಿತದಿಂದ ಎಲ್ಲ ರೀತಿಯ ಸಹಕಾರ ಹಾಗೂ ಬೆಂಬಲ ಒದಗಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ಆಡಳಿತಾಧಿಕಾರಿ ದರ್ಶನ್ ಎಚ್.ವಿ. ಹೇಳಿದರು.
ಮಂಗಳೂರು: ಪೌರಕಾರ್ಮಿಕರು ಹಾಗೂ ಅವರ ಕುಟುಂಬಗಳ ಸಮಗ್ರ ಕಲ್ಯಾಣಕ್ಕೆ ಜಿಲ್ಲಾಡಳಿತದಿಂದ ಎಲ್ಲ ರೀತಿಯ ಸಹಕಾರ ಹಾಗೂ ಬೆಂಬಲ ಒದಗಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ಆಡಳಿತಾಧಿಕಾರಿ ದರ್ಶನ್ ಎಚ್.ವಿ. ಹೇಳಿದರು.ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ಮಂಗಳವಾರ ನಗರದ ಕುದ್ಮುಲ್ ರಂಗ ರಾವ್ ಪುರಭವನದಲ್ಲಿ ಆಯೋಜಿಸಲಾಗಿದ್ದ ‘ಪೌರಕಾರ್ಮಿಕರ ದಿನಾಚರಣೆ–2026’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪೌರಕಾರ್ಮಿಕರು ಹಾಗೂ ಅವರ ಕುಟುಂಬಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.
ಜಿಲ್ಲಾಡಳಿತ ಹಾಗೂ ಮಂಗಳೂರು ಮಹಾನಗರ ಪಾಲಿಕೆ ನಡುವಿನ ಸಭೆಯಲ್ಲಿ ಪೌರಕಾರ್ಮಿಕರಿಗೆ ವಿಮಾ ಸೌಲಭ್ಯ ಕಲ್ಪಿಸುವ ಕುರಿತು ನಿರ್ಧರಿಸಲಾಗಿದೆ. ಈ ಸಂಬಂಧ ಬ್ಯಾಂಕ್‌ನೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲು ಉದ್ದೇಶಿಸಲಾಗಿದ್ದು, ಅಕ್ಟೋಬರ್ ಅಂತ್ಯದೊಳಗೆ ಬ್ಯಾಂಕ್ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು ಎಂದರು.ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ರತ್ನಂ ಪಾಂಡೆ, ಮಂಗಳೂರಿಗೆ ದೇಶದ ಅತ್ಯಂತ ಸ್ವಚ್ಛ ನಗರಗಳ ಪೈಕಿ ಅಗ್ರಸ್ಥಾನಕ್ಕೇರುವ ಸಂಪೂರ್ಣ ಸಾಮರ್ಥ್ಯವಿದ್ದು, ಈ ಗುರಿ ಸಾಧನೆಗಾಗಿ ಎಲ್ಲರೂ ಶ್ರಮಿಸಬೇಕು ಎಂದರು.ಪೌರ ಕಾರ್ಮಿಕ ಮಕ್ಕಳಿಗೆ ಶಿಕ್ಷಣ ತರಬೇತಿ: ಪೌರಕಾರ್ಮಿಕರ ಮಕ್ಕಳಿಗೆ ಶಾಲಾ ಹಂತದಿಂದಲೇ ತಮ್ಮ ಭವಿಷ್ಯದ ಗುರಿಗಳ ಕುರಿತು ಸ್ಪಷ್ಟತೆ ಮೂಡಿಸುವ ನಿಟ್ಟಿನಲ್ಲಿ ಸಮಾಲೋಚನೆ ಹಾಗೂ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಈ ಕಾರ್ಯಕ್ರಮಗಳು ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಯಲ್ಲಿಯೂ ಮಕ್ಕಳಿಗೆ ಸಹಕಾರಿಯಾಗಲಿವೆ ಎಂದು ಅವರು ಹೇಳಿದರು.
ವೇತನ ವಿಳಂಬ ಇಲ್ಲ: ಪೌರಕಾರ್ಮಿಕರಿಗೆ ವೇತನ ಪಾವತಿಯಲ್ಲಿ ಯಾವುದೇ ವಿಳಂಬವಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಅವರು, ಪ್ರತಿ ತಿಂಗಳ 5ನೇ ತಾರೀಕಿನೊಳಗೆ ಎಲ್ಲ ಪೌರಕಾರ್ಮಿಕರಿಗೂ ವೇತನ ಪಾವತಿಯಾಗುವಂತೆ ನೋಡಿಕೊಳ್ಳಲಾಗುವುದು ಎಂದರು.ಮಂಗಳೂರು ಮಹಾನಗರ ಪಾಲಿಕೆಯ ಘನತ್ಯಾಜ್ಯ ನಿರ್ವಹಣೆ ನೋಡಲ್ ಅಧಿಕಾರಿ ಅರ್ಚಿತ್ ಪರಾಗ್ ಡೋಂಗ್ರೆ, ಆರೋಗ್ಯಾಧಿಕಾರಿ ಡಾ. ಮಂಜಯ್ಯ ಶೆಟ್ಟಿ, ಸಹಾಯಕ ಕಾರ್ಯನಿರ್ವಾಹಕ ಪರಿಸರ ಅಭಿಯಂತರರು ದೀಪ್ತಿ ಎನ್., ಜಿಲ್ಲಾ ಪೌರಕಾರ್ಮಿಕ ಹಾಗೂ ‘ಡಿ’ ಗ್ರೂಪ್ ನೌಕರರ ಸಂಘದ ಅಧ್ಯಕ್ಷ ಅನಿಲ್ ಕುಮಾರ್ ಕೆ. ಮತ್ತಿತರರು ಇದ್ದರು.