ಸಾರಾಂಶ
ವೈಯಕ್ತಿಕ ಆರೋಗ್ಯ ಕಡೆಗಣಿಸಿ ಪ್ರಾಮಾಣಿಕವಾಗಿ ಪೌರಕಾರ್ಮಿಕರು ಕೆಲಸ ಮಾಡಿದ್ದರಿಂದ ಕುಮಟಾ ಪುರಸಭೆಗೆ ಸ್ವಚ್ಛತೆಯ ಕಾರಣಕ್ಕೆ ಒಳ್ಳೆಯ ಹೆಸರು ಬಂದಿದೆ.
ಕನ್ನಡಪ್ರಭ ವಾರ್ತೆ ಕುಮಟಾ
ವೈಯಕ್ತಿಕ ಆರೋಗ್ಯ ಕಡೆಗಣಿಸಿ ಪ್ರಾಮಾಣಿಕವಾಗಿ ಪೌರಕಾರ್ಮಿಕರು ಕೆಲಸ ಮಾಡಿದ್ದರಿಂದ ಕುಮಟಾ ಪುರಸಭೆಗೆ ಸ್ವಚ್ಛತೆಯ ಕಾರಣಕ್ಕೆ ಒಳ್ಳೆಯ ಹೆಸರು ಬಂದಿದೆ. ಈ ಗೌರವವನ್ನು ಸದಾ ಉಳಿಸಿಕೊಳ್ಳಬೇಕು ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.ಪುರಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಪೌರಕಾರ್ಮಿಕ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಎಲ್ಲರೂ ಉತ್ಸಾಹದಿಂದ ಪೌರಕಾರ್ಮಿಕ ದಿನವನ್ನು ದೀಪಾವಳಿ ಹಬ್ಬದಂತೆ ಆಚರಿಸಿದ್ದು ಖುಷಿ ತಂದಿದೆ ಎಂದರು.
ಸ್ವಚ್ಛತೆಗೆ ಮಹಾತ್ಮಾಗಾಂಧಿ ಕರೆ ಕೊಟ್ಟಿದ್ದರು. ಅದೇ ಧ್ಯೇಯದೊಂದಿಗೆ ಈಗ ಮೂರನೇ ಬಾರಿ ದೇಶದ ಪ್ರಧಾನಿಯಾಗಿರುವ ನರೇಂದ್ರ ಮೋದಿಯವರು ದೇಶಾದ್ಯಂತ ಜಾಗೃತಿ ಮೂಡಿಸುತ್ತಿದ್ದಾರೆ. ಇಂದೋರ್ ನಗರ ವಿಶ್ವಮಟ್ಟದಲ್ಲಿ ಸ್ವಚ್ಛತೆಗೆ ಪ್ರಸಿದ್ಧ ಪಡೆಯಲು ಕಾರಣವಾಗಿದೆ.ಇತ್ತೀಚೆಗೆ ಪೌರಾಡಳಿತ ಸಚಿವರಿಗೆ ಭೇಟಿಯಾಗಿ ಅನುದಾನಕ್ಕಾಗಿ ವಿನಂತಿಸಿದ್ದೇನೆ. ಹಣಕಾಸಿನ ಲಭ್ಯತೆಯ ಬಳಿಕ ಕುಮಟಾ ಹಾಗೂ ಹೊನ್ನಾವರ ಪಟ್ಟಣ ಆಡಳಿತಕ್ಕೆ ಹಣಕಾಸು ಕೊಡುವುದಾಗಿ ಭರವಸೆ ನೀಡಿದ್ದಾರೆ. ಹೀಗಾಗಿ ಅನುದಾನ ಸಿಗುತ್ತಿದ್ದಂತೆ ಪಟ್ಟಣ ವ್ಯಾಪ್ತಿಗೂ ಅಭಿವೃದ್ಧಿ ಕಾರ್ಯಗಳಿಗೆ ಸಹಯೋಗ ನೀಡುತ್ತೇನೆ.
ಪುರಸಭೆ ಅಧ್ಯಕ್ಷೆ ಸುಮತಿ ಭಟ್ ಮಾತನಾಡಿ, ದೇಶದ ಪ್ರಗತಿಯಲ್ಲಿ ಪೌರಕಾರ್ಮಿಕರಿಗೆ ವಿಶೇಷ ಮಹತ್ವವಿದೆ. ಪ್ರತಿ ಮನೆಯಿಂದ ಸ್ವಚ್ಛತೆಯ ಜಾಗೃತಿ ಆಗಬೇಕಿದೆ. ನಮ್ಮ ಮಕ್ಕಳಿಗೆ ನಾವೇ ಸ್ವಚ್ಛತೆಯ ಪಾಠ ಮಾಡಬೇಕು. ಪೌರಕಾರ್ಮಿಕರು ನಿಮ್ಮ ಕುಂದು ಕೊರತೆಗಳು, ತೊಂದರೆಗಳ ಕುರಿತು ಅಧ್ಯಕ್ಷರು, ಸದಸ್ಯರು, ಮುಖ್ಯಾಧಿಕಾರಿ ಗಮನಕ್ಕೆ ತರಬೇಕು. ನಿಮ್ಮ ಸಂಸಾರದ ಬಗ್ಗೆ ಕಾಳಜಿ ಕೊಡಿ, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದರೆ ಮಾತ್ರ ಪ್ರಗತಿ ಸಾಧ್ಯ ಎಂದರು.ಉಪಾಧ್ಯಕ್ಷ ಮಹೇಶ ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷ ಸೂರ್ಯಕಾಂತ ಗೌಡ, ಸದಸ್ಯರಾದ ಕಿರಣ ಅಂಬಿಗ, ಅನಿಲ ಹರ್ಮಲಕರ, ಗೀತಾ ಮುಕ್ರಿ, ತುಳಸಿ ಗೌಡ, ಮೋಹಿನಿ ಗೌಡ, ಸಂತೋಷ ನಾಯ್ಕ ಇತರ ಸದಸ್ಯರು ಮುಖ್ಯಾಧಿಕಾರಿ ಎಂ.ಆರ್. ಸ್ವಾಮಿ, ಸಿಬ್ಬಂದಿ ಇತರರು ಇದ್ದರು.
;Resize=(128,128))
;Resize=(128,128))
;Resize=(128,128))