ವಿರಾಜಪೇಟೆಯಲ್ಲಿ ಪೌರ ಕಾರ್ಮಿಕರ ದಿನಾಚರಣೆ, ಸನ್ಮಾನ

| Published : Oct 03 2024, 01:25 AM IST

ಸಾರಾಂಶ

ಪುರಸಭೆ ಪೌರಕಾರ್ಮಿಕ ಸೇವಾ ಸಮಿತಿ ವಿರಾಜಪೇಟೆ ವತಿಯಿಂದ ವಿರಾಜಪೇಟೆ ನಗರದ ಪುರಭವನದಲ್ಲಿ ಪೌರಕಾರ್ಮಿಕ ದಿನಾಚರಣೆ ಅಂಗವಾಗಿ ಬುಧವಾರ ಪೌರಕಾರ್ಮಿಕರಿಗೆ ಸನ್ಮಾನ ಮತ್ತು ವಿವಿದ ಆಟೋಟ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭ ನಡೆಯಿತು.

ಕನ್ನಡಪ್ರಭ ವಾರ್ತೆ ವಿರಾಜಪೇಟೆ

ಪೌರಕಾರ್ಮಿಕರು ಪುರಸಭೆಯ ಒಂದು ಅಂಗ. ಪುರಸಭೆಯ ಆಡಳಿತ ವರ್ಗ ಮತ್ತು ಪೌರಕಾರ್ಮಿಕರು ಒಂದು ನಾಣ್ಯದ ಎರಡು ಮುಖಗಳಂತೆ. ನಗರದ ಶುಚಿತ್ವಕ್ಕೆ ಮಹತ್ವ ನೀಡಿದಂತೆ ತಮ್ಮ ಅರೋಗ್ಯ ಮತ್ತು ಕುಟುಂಬದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತಾಗಬೇಕು ಎಂದು ವಿರಾಜಪೇಟೆ ಪುರಸಭೆಯ ನೂತನ ಅದ್ಯಕ್ಷೆ ದೇಚಮ್ಮ ಕಾಳಪ್ಪ ಕರೆ ನೀಡಿದ್ದಾರೆ.

ಪುರಸಭೆ ಪೌರಕಾರ್ಮಿಕ ಸೇವಾ ಸಮಿತಿ ವಿರಾಜಪೇಟೆ ವತಿಯಿಂದ ವಿರಾಜಪೇಟೆ ನಗರದ ಪುರಭವನದಲ್ಲಿ ಪೌರಕಾರ್ಮಿಕ ದಿನಾಚರಣೆ ಅಂಗವಾಗಿ ಬುಧವಾರ ನಡೆದ ಪೌರಕಾರ್ಮಿಕರಿಗೆ ಸನ್ಮಾನ ಮತ್ತು ವಿವಿದ ಆಟೋಟ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕರ್ತವ್ಯದ ವೇಳೆಯಲ್ಲಿ ಸಾರ್ವಜನಿಕರೊಂದಿಗೆ ಗುರುತಿಸುವ ಕೆಲಸವಾಗಬೇಕು. ಸಾರ್ವಜನಿಕರಿಂದ ಯಾವುದೇ ದೂರು ಬಾರದ ರೀತಿಯಲ್ಲಿ ಕರ್ತವ್ಯ ನಿರ್ವಹಿಸುವುದು ಸೂಕ್ತ ಎಂದರು.

ಪುರಸಭೆ ಮುಖ್ಯಾಧಿಕಾರಿ ಚಂದ್ರಕುಮಾರ್ ಎ. ಪ್ರಾಸ್ತಾವಿಕ ಮಾತನಾಡಿ, ಪೌರಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅನುದಾನ ಮತ್ತು ಆರೋಗ್ಯ ವಿಮೆ ಹಾಗೂ ಇತರ ಸೌಲಭ್ಯಗಳನ್ನು ಪೌರಕಾರ್ಮಿಕರಿಗೆ ಒದಗಿಸಿಕೊಡುವಲ್ಲಿ ಪೂರಕವಾಗಿ ಸ್ಪಂದಿಸಲಾಗುತ್ತದೆ ಎಂದು ಭರವಸೆ ನೀಡಿದರು.

ಪುರಸಭೆಯ ಹಿರಿಯ ಸದಸ್ಯ ಸಿ.ಕೆ. ಪ್ರಥ್ವಿನಾಥ್, ವಿ.ಆರ್. ರಜನಿಕಾಂತ್ ಮತ್ತು ಪುರಸಭೆಯ ನೂತನ ಉಪಾಧ್ಯಕ್ಷ ಫಸಿಯಾ ತಬ್ಸುಂ ಮಾತನಾಡಿದರು.

ಸೇವೆಯಿಂದ ನಿವೃತ್ತರಾದ ವಸಂತ್ ಮತ್ತು ವೇಲಾ ಹಾಗೂ ಮುಖ್ಯಾಧಿಕಾರಿ ಚಂದ್ರಕುಮಾರ್ ಎ. ಅವರನ್ನು ಸಮಿತಿ ವತಿಯಿಂದ ಸನ್ಮಾನಿಸಲಾಯಿತು.

ಇತ್ತೀಚೆಗೆ ನಗರದ ತಾಲೂಕು ಮೈದಾನದಲ್ಲಿ ಆಯೋಜಿಸಲಾಗಿದ್ದ ಪೌರಕಾರ್ಮಿಕರ ಕ್ರೀಡಾಕೂಟದ ವಿಜೇತ ಪೌರ ಸಿಬ್ಬಂದಿಗೆ ಬಹುಮಾನ ವಿತರಿಸಲಾಯಿತು.

ಪೌರಕಾರ್ಮಿಕರ ಸೇವಾ ಸಮಿತಿ ಅಧ್ಯಕ್ಷ ಇರ್ಫಾನ್, ಉಪಾಧ್ಯಕ್ಷ ಎಚ್.ಕೆ. ಸುಂದರ, ಕಾರ್ಯದರ್ಶಿ ವೇಲು ಮುರುಗ, ಪುರಸಭೆ ಸದಸ್ಯರಾದ ಪಟ್ಟಡ ರಂಜಿ ಪೂಣಚ್ಚ, ಮೊಹಮ್ಮದ್ ರಾಫಿ, ಡಿ.ಪಿ. ರಾಜೇಶ್, ಆಗಸ್ಟೀನ್ ಬೆನ್ನಿ, ಎಸ್.ಎಚ್. ಮತೀನ್, ಅಬ್ದುಲ್ ಜಲೀಲ್, ಎಚ್.ಪೂರ್ಣಿಮಾ, ನಾಮ ನಿರ್ದೇಶಿತ ಸದಸ್ಯರಾದ ಮೋಹನ್ ಕುಮಾರ್ ಜಿ.ಜಿ, ದಿನೇಶ್ ನಂಬಿಯಾರ್ ಮತ್ತಿತರರಿದ್ದರು.

ಮುಖ್ಯಾಧಿಕಾರಿ ಚಂದ್ರಕುಮಾರ್‌ ಸ್ವಾಗತಿಸಿದರು. ಪೌರ ಕಾರ್ಮಿಕರ ಸೇವಾ ಸಂಘದ ಅಧ್ಯಕ್ಷ ಇರ್ಫಾನ್ ನಿರೂಪಿಸಿ, ವಂದಿಸಿದರು.