ಕಾಕ್ರೋಚ್‌ ಜನತಾ ಪಾರ್ಟಿ ಹೆಸರಿನ ಸಂಘಟನೆಯಿಂದ ಜೆನ್‌ ಝೀಗಳ ದಾರಿತಪ್ಪಿಸುವ ಕೆಲಸ ನಡೆಯುತ್ತಿದೆ. ದೇಶದಲ್ಲಿ ಅಸ್ಥಿರತೆ ಉಂಟುಮಾಡುವ ಇವರ ಉದ್ದೇಶ ಅರ್ಥಮಾಡಿಕೊಂಡು ದೇಶ ನಿರ್ಮಾಣಕ್ಕೆ ಪೂರಕವಾದ ಸನ್ಮಾರ್ಗದಲ್ಲಿ ನಡೆಯಬೇಕು ಎಂದು ಸಂಸದ ಬಿ.ವೈ. ರಾಘವೇಂದ್ರ ಯುವಕರಲ್ಲಿ ಮನವಿ ಮಾಡಿದರು.

ಕನ್ನಡ್ರಭ ವಾರ್ತೆ ಜಮಖಂಡಿ

ಕಾಕ್ರೋಚ್‌ ಜನತಾ ಪಾರ್ಟಿ ಹೆಸರಿನ ಸಂಘಟನೆಯಿಂದ ಜೆನ್‌ ಝೀಗಳ ದಾರಿತಪ್ಪಿಸುವ ಕೆಲಸ ನಡೆಯುತ್ತಿದೆ. ದೇಶದಲ್ಲಿ ಅಸ್ಥಿರತೆ ಉಂಟುಮಾಡುವ ಇವರ ಉದ್ದೇಶ ಅರ್ಥಮಾಡಿಕೊಂಡು ದೇಶ ನಿರ್ಮಾಣಕ್ಕೆ ಪೂರಕವಾದ ಸನ್ಮಾರ್ಗದಲ್ಲಿ ನಡೆಯಬೇಕು ಎಂದು ಸಂಸದ ಬಿ.ವೈ. ರಾಘವೇಂದ್ರ ಯುವಕರಲ್ಲಿ ಮನವಿ ಮಾಡಿದರು. ನಗರದ ಕಡಪಟ್ಟಿ ದೇವಸ್ಥಾನ ಆವರಣದಲ್ಲಿ ಶುಕ್ರವಾರ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ 6ನೇ ದಿನದ ಸಮಾರಂಭದಲ್ಲಿ ಮದ್ವೀರಶೈವ ಸದ್ಭಾವನಾ ಸಂಸ್ಥೆಯಿಂದ ಪ್ರಕಟಗೊಂಡ 2027ನೇ ದಿನದರ್ಶಿಕೆ ಬಿಡುಗಡೆಗೊಳಿಸಿ ಮಾತನಾಡಿದರು, ಯುವಶಕ್ತಿ ದೇಶದ ಭವಿಷ್ಯವಾಗಿದೆ. ಯುವಜನರು ತಪ್ಪುದಾರಿ ಹಿಡಿಯದಂತೆ ಅವರಿಗೆ ಆಧ್ಯಾತ್ಮಿಕ ಚಿಂತನೆ, ಧಾರ್ಮಿಕ ಸಂಸ್ಕಾರ, ಮಹನೀಯರ ಆದರ್ಶಗಳನ್ನು ಪರಿಚಯಿಸುವುದು ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಯುವಜನರು ಮಾನಸಿಕ ಒತ್ತಡ ಹಾಗೂ ಖಿನ್ನತೆಯ ಸಮಸ್ಯೆ ಎದುರಿಸುತ್ತಿದ್ದಾರೆ. ಆತ್ಮವಿಶ್ವಾಸ, ಸಕಾರಾತ್ಮಕ ಚಿಂತನೆ, ಜೀವನ ಮೌಲ್ಯಗಳನ್ನು ಬೆಳೆಸುವ ಕೆಲಸ ಆಗಬೇಕು. ಯುವಶಕ್ತಿಯನ್ನು ರಾಷ್ಟ್ರ ನಿರ್ಮಾಣದಲ್ಲಿ ತೊಡಗಿಸುವುದು ಸಮಾಜದ ಎಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು. ಹಂಪಸಾಗರ ನವಲಿ ಹಿರೇಮಠದ ಅಭಿನವ ಶಿವಲಿಂಗ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಧಾರ್ಮಿಕ ಆದರ್ಶಗಳು ಮನುಷ್ಯನನ್ನು ಉತ್ತಮ ವ್ಯಕ್ತಿಯನ್ನಾಗಿ ರೂಪಿಸಿ ಸಮಾಜದಲ್ಲಿ ಶಾಂತಿ, ಸಾಮರಸ್ಯ ಮತ್ತು ಸಹಬಾಳ್ವೆ ಬೆಳೆಸುತ್ತವೆ ಎಂದು ಹೇಳಿದರು. ಗ್ರಾಮೀಣ ಪ್ರದೇಶಗಳಲ್ಲಿ ಭಕ್ತಿ ಮತ್ತು ಶ್ರದ್ಧೆ ಇಂದಿಗೂ ಉಳಿದುಕೊಂಡಿವೆ. ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಯುವಜನರಿಗೆ ಪ್ರತಿನಿತ್ಯ ಉಪಯುಕ್ತ ಸಂದೇಶಗಳನ್ನು ನೀಡುವುದರಿಂದ ಅವರು ಸಮಾಜಮುಖಿಯಾಗಿ ಬೆಳೆಯಲು ಸಾಧ್ಯ. ಧರ್ಮವು ಸಮಾಜದ ಜೀವನಕ್ರಮ, ಸಂಸ್ಕೃತಿ ಹಾಗೂ ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ. ಸಮಾಜವನ್ನು ಸಮಗ್ರವಾಗಿ ಗಮನಿಸಿದಾಗ ಧಾರ್ಮಿಕ ಪರಂಪರೆ ಮತ್ತು ಅದರ ಪ್ರಾತಿನಿಧ್ಯದ ಮಹತ್ವ ಎದ್ದು ಕಾಣುತ್ತದೆ ಎಂದು ವಿಧಾನ ಪರಿಷತ್‌ ಉಪ ಸಭಾಪತಿ ಉಮಾಶ್ರೀ ಹೇಳಿದರು.

ನೇತೃತ್ವ ವಹಿಸಿದ ಗುಳೇದಗುಡ್ಡ ಅಮರೇಶ್ವರ ಮಠದ ಡಾ. ನೀಲಕಂಠ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಕಾಯಕ ಧರ್ಮಕ್ಕೆ ವೀರಶೈವ ಸಿದ್ಧಾಂತದಲ್ಲಿ ಮಹತ್ವದ ಸ್ಥಾನವಿದೆ. ಸತ್ಯ, ಪ್ರಾಮಾಣಿಕತೆ ಹಾಗೂ ಕರ್ತವ್ಯ ನಿಷ್ಠೆಯಿಂದ ಬದುಕಬೇಕು ಎಂದು ತಿಳಿಸಿದರು.

ಶಾಸಕ ಜಗದೀಶ ಗುಡಗುಂಟಿ, ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಉಪಸ್ಥಿತರಿದ್ದರು. ಮುತ್ತಿಕಂತಿ ಹಿರೇಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಮ್ಮುಖ ವಹಿಸಿದ್ದರು.

ನಜರ್ ಸಮರ್ಪಣೆ: ಸಮಾರಂಭದ ಕೊನೆಯ ಹಂತದಲ್ಲಿ ಶ್ರೀ ಶಿವಾಚಾರ್ಯರಿಂದ ಸಿಬ್ಬಂದಿ ವರ್ಗದವರಿಂದ ಮತ್ತು ಧರ್ಮಾಭಿಮಾನಿಗಳಿಂದ, ಹಗಲು ದೀವಟಿಗೆಯ ಮೇಘರಾಜ ಚಕ್ರಸಾಲಿ ಇವರಿಂದ ಆಕರ್ಷಕ ನಜರ್ (ಗೌರವ) ಸಮರ್ಪಣೆ ಜರುಗಿತು. ಮಳಲಿ ಸಂಸ್ಥಾನ ಮಠದ ಡಾ. ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು ನಜರ ಕಾರ್ಯಕ್ರಮವನ್ನು ನಿರೂಪಿಸಿದರು.