ಸುಸಜ್ಜಿತ ಆಸ್ಪತ್ರೆಗೆ ಪಾದಯಾತ್ರೆ ಮೂಲಕ ಹಕ್ಕೊತ್ತಾಯ

| Published : Nov 10 2023, 01:04 AM IST / Updated: Nov 10 2023, 01:05 AM IST

ಸಾರಾಂಶ

ಘಟ್ಟದ ಮೇಲೆ, ಘಟ್ಟದ ಕೆಳಗೆ ಎರಡು ಪ್ರತ್ಯೇಕ ಸುಸಜ್ಜಿತ ಆಸ್ಪತ್ರೆ, ವೈದ್ಯಕೀಯ ಕಾಲೇಜು ನಿರ್ಮಾಣ ಆಗುವವರೆಗೂ ಹೋರಾಟ ಕೈಬಿಡುವುದಿಲ್ಲ

ಕಾರವಾರ:

ಉತ್ತರ ಕನ್ನಡ ಜಿಲ್ಲೆಯಲ್ಲಿ ೨ ಕಡೆ ಸುಸಜ್ಜಿತ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜು ನಿರ್ಮಿಸುವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ನಾವು ಗೆಲ್ಲುವವರೆಗೂ ಹೋರಾಟ ನಿರಂತರವಾಗಿರಬೇಕು. ಅದಕ್ಕೆ ನೀವೆಲ್ಲ ಕೈ ಜೋಡಿಸಬೇಕು ಎಂದು ಅನಂತಮೂರ್ತಿ ಹೆಗಡೆ ಬ್ಯಾಗದ್ದೆ ಚ್ಯಾರಿಟೇಬಲ್ ಟ್ರಸ್ಟ್‌ ಸಂಸ್ಥಾಪಕ ಅನಂತಮೂರ್ತಿ ಹೆಗಡೆ ಹೇಳಿದರು.

ಸುಸಜ್ಜಿತ ಆಸ್ಪತ್ರೆ, ವೈದ್ಯಕೀಯ ಕಾಲೇಜು ನಿರ್ಮಿಸಬೇಕೆಂದು ಆಗ್ರಹಿಸಿ ಶಿರಸಿಯಿಂದ ಆರಂಭವಾದ ಪಾದಯಾತ್ರೆ ಗುರುವಾರ ಕಾರವಾರ ತಲುಪಿದ್ದು, ಜಿಲ್ಲಾಧಿಕಾರಿ ಕಚೇರಿಗೆ ಹೊರಭಾಗದಲ್ಲಿ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದರು.

ಹಿಂದೆ ರಾಜಕಾರಣಿಗಳು ಮಾಡಿದ ತಪ್ಪಿನಿಂದ ನಮ್ಮ ಜಿಲ್ಲೆ ಎಲ್ಲ ವಿಷಯದಲ್ಲೂ ಹಿಂದುಳಿದಿದೆ. ಸ್ಥಳೀಯ ಯುವಕ ಯುವತಿಯರು ಉದ್ಯೋಗಕ್ಕೆಂದು ಹೊರ ಜಿಲ್ಲೆ, ರಾಜ್ಯಗಳಿಗೆ ಹೋಗುತ್ತಾರೆ. ಅಲ್ಲಿ ಅವರನ್ನು ತುಚ್ಛ್ಯವಾಗಿ ಕಾಣುತ್ತಾರೆ. ಕೈಗಾರಿಕೆಗಳಿದ್ದರೆ ಈ ಪರಿಸ್ಥಿತಿ ಆಗುತ್ತಿರಲಿಲ್ಲ. ಉತ್ತರ ಕನ್ನಡದಲ್ಲಿ ಹೇರಳವಾಗಿ ಜಾಗವಿದೆ. ಕೈಗಾರಿಕೆ ಸ್ಥಾಪನೆಗೆ ಸಾಕಷ್ಟು ಅವಕಾಶವಿದೆ. ಆದರೆ ಈ ಜಿಲ್ಲೆಯನ್ನು ಆಳಿದವರು ಒಂದು ಕೈಗಾರಿಕೆ ತರಲು ಪ್ರಯತ್ನ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕೋವಿಡ್ ನಂತರ ಹೃದಯಾಘಾತ ಹೆಚ್ಚಳವಾಗಿದೆ. ತಕ್ಷಣದಲ್ಲಿ ಚಿಕಿತ್ಸೆ ಬೇಕು ಎಂದರೆ ಒಂದೇ ಒಂದು ಸುಸಜ್ಜಿತ ಆಸ್ಪತ್ರೆಯಿಲ್ಲ. ದೂರದ ಮಂಗಳೂರು, ಹುಬ್ಬಳ್ಳಿ, ಗೋವಾ ಭಾಗಕ್ಕೆ ಹೋಗಬೇಕು. ಮಾರ್ಗಮಧ್ಯದಲ್ಲೇ ಮೃಪಟ್ಟಿರುತ್ತಿದ್ದಾರೆ. ಜಿಲ್ಲೆಯ ಜನರ ಸಮಸ್ಯೆ ಅರಿತು ಪಾದಯಾತ್ರೆ ನಡೆಸಿದ್ದೇವೆ. ಕೇವಲ ಆಸ್ಪತ್ರೆ ನಿರ್ಮಿಸಿದರೆ ಪ್ರಯೋಜನವಿಲ್ಲ. ವೈದ್ಯಕೀಯ ಕಾಲೇಜು ನಿರ್ಮಾಣವಾಗಬೇಕು. ಕಾಲೇಜು ನಿರ್ಮಾಣವಾದರೆ ತಜ್ಞವೈದ್ಯರು, ಅಗತ್ಯ ಉಪಕರಣಗಳು ಬರುತ್ತದೆ. ಘಟ್ಟದ ಮೇಲೆ, ಘಟ್ಟದ ಕೆಳಗೆ ಎರಡು ಪ್ರತ್ಯೇಕ ಸುಸಜ್ಜಿತ ಆಸ್ಪತ್ರೆ, ವೈದ್ಯಕೀಯ ಕಾಲೇಜು ನಿರ್ಮಾಣ ಆಗುವವರೆಗೂ ಹೋರಾಟ ಕೈಬಿಡುವುದಿಲ್ಲ ಎಂದರು.ಸ್ಕೋಡ್‌ವೆಸ್ ಸಂಸ್ಥೆಯ ಅಧ್ಯಕ್ಷ ವೆಂಕಟೇಶ ನಾಯ್ಕ ಮಾತನಾಡಿ, ಈ ರೀತಿಯ ಪ್ರಯತ್ನ ಜಿಲ್ಲೆಗೆ ಅವಶ್ಯಕತೆ ಇದೆ. ಹೆಚ್ಚಿನ ಪ್ರಮಾಣದಲ್ಲಿ ಇರುವ ಕೃಷಿಕರು, ಬಡವರಿಗೆ ಸುಸಜ್ಜಿತ ಆಸ್ಪತ್ರೆಯಿಂದ ಸಾಕಷ್ಟು ಅನುಕೂಲವಾಗಲಿದೆ. ಸಣ್ಣ ಸಣ್ಣ ರೋಗಕ್ಕೂ ನೂರಾರು ಕಿಮೀ ಹೋಗಬೇಕಾದ ಅನಿವಾರ್ಯತೆ ನಮ್ಮ ಜಿಲ್ಲೆಯ ಜನರಿಗಿದೆ. ಈ ಸಮಸ್ಯೆ ಬಗೆಹರಿಯಬೇಕಾದರೆ ಅನಂತಮೂರ್ತಿ ಹೇಳಿದಂತೆ ಘಟಕದ ಮೇಲೆ ಮತ್ತು ಕೆಳಗೆ ೨ ಆಸ್ಪತ್ರೆ ಆಗಬೇಕು ಎಂದು ಆಗ್ರಹಿಸಿದರು.

ಆಟೋರಿಕ್ಷಾ ಚಾಲಕರ, ಮಾಲಕರ ಸಂಘದ ಶಿವರಾಜ ಮೇಸ್ತ ಮಾತನಾಡಿ, ಈ ರೋಗಿಯನ್ನು ಅರ್ಧ ಗಂಟೆ ಮೊದಲು ಕರೆತಂದಿದ್ದರೆ ಏನಾದರು ಮಾಡಬಹುದಿತ್ತು ಎಂದು ವೈದ್ಯರು ಹೇಳಿದ ಸಾಕಷ್ಟು ಉದಾಹರಣೆಗಳಿವೆ. ವೇಳೆಗೆ ಸರಿಯಾಗಿ ಚಿಕಿತ್ಸೆ ಸಿಗದೇ ನಮ್ಮ ಜಿಲ್ಲೆಯ ಜನರು ಮೃತಪಡುತ್ತಿದ್ದಾರೆ. ದಕ್ಷಿಣ ಕನ್ನಡದಲ್ಲಿ ಮಾರಿಗೊಂದು ಆಸ್ಪತ್ರೆಯಿದೆ. ಉತ್ತರ ಕನ್ನಡದಲ್ಲಿ ಒಂದೇ ಒಂದು ಸುಸಜ್ಜಿತ ಆಸ್ಪತ್ರೆಯಿಲ್ಲ. ಈ ಹೋರಾಟವನ್ನು ಇಷ್ಟಕ್ಕೆ ಬಿಡಬಾರದು. ಅನಂತಮೂರ್ತಿ ಹೆಗಡೆ ನಾಂದಿ ಹಾಡಿದ್ದಾರೆ. ನಾವು ಹೋರಾಟದ ಕೆಲಸವನ್ನು ಮುಂದಕ್ಕೆ ತೆಗದುಕೊಂಡು ಹೋಗಬೇಕು ಎಂದು ಕರೆ ನೀಡಿದರು.

ಸುಸಜ್ಜಿತ ಆಸ್ಪತ್ರೆ, ವೈದ್ಯಕೀಯ ಕಾಲೇಜು ನಿರ್ಮಾಣ ಮಾಡುವಂತೆ ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.ಉದ್ಯಮಿ ಜಾರ್ಜ್ ಫರ್ನಾಂಡಿಸ್, ಹೋರಾಟಗಾರ ರಾಘು ನಾಯ್ಕ, ಬಸವರಾಜ ಓಶಿಮಠ, ಸುನೀಲ ಸೋನಿ ಮುಂತಾದವರು ಇದ್ದರು.