ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರನಗರದ ಸರ್ಕಾರಿ ಬಾಪಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಇಬ್ಬರು ಉಪನ್ಯಾಸಕರ ನಡುವೆ ಕಸಾಪ ಚುನಾವಣೆಯ ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಮಂಗಳವಾರ ಕಾಲೇಜಿನ ಪ್ರಾಂಶುಪಾಲರ ಕೊಠಡಿಯಲ್ಲಿ ಸಿಬ್ಬಂದಿಯ ಸಮ್ಮುಖದಲ್ಲಿ ಪರಸ್ಪರ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೈಕೈ ಮಿಲಾಯಿಸಿ, ಇಬ್ಬರೂ ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಜಿಲ್ಲಾ ಕಸಾಪ ನಿಕಟ ಪೂರ್ವ ಅಧ್ಯಕ್ಷರಾಗಿದ್ದ ಜೆ.ಜಿ.ನಾಗರಾಜ್ ಹಾಗೂ ನಾಗನಂದ ಕೆಂಪರಾಜ್ ಇಬ್ಬರು ಕನ್ನಡ ಉಪನ್ಯಾಸಕರು. ಜಿಲ್ಲೆಯಲ್ಲಿ ಕ.ಸಾ.ಪ ಅಧ್ಯಕ್ಷರಾದ ಮೇಲೆ ಈ ಹಿಂದೆ ಯಾರು ಮಾಡಿರದಂತ ಕನ್ನಡ ಪರ ಕಾರ್ಯಕ್ರಮಗಳನ್ನು ನೀಡುವ ಮೂಲಕ ಗಡಿನಾಡಿನಲ್ಲಿ ಕನ್ನಡ ಭಾಷೆ ಬೆಳೆಸಿದವರು ಎಂಬ ಹೆಗ್ಗಳಿಕೆಗೆ ಇಬ್ಬರೂ ಪಾತ್ರರಾಗಿದ್ದಾರೆ. ಆದರೆ ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಎರಡನೇ ಭಾರಿ ಇಬ್ಬರು ಅಧ್ಯಕ್ಷರಾಗಲು ಮುಂದಾಗಿದ್ದ ಸಂದರ್ಭದಲ್ಲಿ ಆಪ್ತಮಿತ್ರರಾಗಿದ್ದ ಇವರಿಬ್ಬರ ನಡುವೆ ಭಿನ್ನಾಭಿಪ್ರಾಯಗಳು ಉಂಟಾದವು. ಇಬ್ಬರೂ ಸಾಮಾಜಿಕ ಜಾಲತಾಣಗಳಲ್ಲಿ ಮಾಡುತ್ತಿದ್ದ ಆರೋಪ ಪ್ರತ್ಯಾರೋಪಗಳು ನಗೆಪಾಟಿಲಿಗೆ ಗುರಿಯಾದರು. ಜೆ.ಜಿ.ನಾಗರಾಜ್ ತನ್ನ ವಿರೋಧಿಯಾಗಿದ್ದ ನಾಗನಂದ ಕೆಂಪರಾಜ್‌ರನ್ನು ಚುನಾವಣೆಯಲ್ಲಿ ಸೋಲಿಸುವಲ್ಲಿ ಯಶಸ್ವಿಯಾಗಿದ್ದರು.
ಪರಸ್ಪರ ಹೊಡೆದಾಟಮಂಗಳವಾರ ಬೆಳಗ್ಗೆ ಇಬ್ಬರು ಕಾಲೇಜಿನಲ್ಲಿ ಎದುರಾದಾಗ ಆಕಸ್ಮಿಕವಾಗಿ ಪರಸ್ಪರ ಡಿಕ್ಕಿ ಹೊಡೆದುಕೊಂಡಿದ್ದಾರೆ. ನಂತರ ನಾಗಾನಂದ ಕೆಂಪರಾಜ್ ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡುವಾಗ ಪರಸ್ಪರ ನಿಂದಿಸಿಕೊಂಡರು, ನಂತರ ತರಗತಿಗೆ ಹೋಗುತ್ತಿದ್ದ ನಾಗನಂದ ಕೆಂಪರಾಜ್ ಮೇಲೆ ನಾಗರಾಜ್ ಬ್ಯಾಗಿನಿಂದ ಹಲ್ಲೆ ಮಾಡಿದರೆಂದು ಹೇಳಲಾಗಿದೆ, ಆಗನಾಗಾನಂದ ಕೆಂಪರಾಜ್ ತಿರುಗಿಸಿ ಕೈಯಿಂದ ಕೆನ್ನೆಗೆ ಬಾರಿಸಿದರೆನ್ನಲಾಗಿದೆ.
ಈ ಘಟನೆ ನಡೆದಿರುವುದು ಪ್ರಾಂಶುಪಾಲ ಬಾಲಕೃಷ್ಣ ಹಾಗೂ ಇತರೆ ಉಪನ್ಯಾಸಕರ ಸಮ್ಮುಖದಲ್ಲಿಯೇ ನಡೆದಿದೆ. ಕೂಡಲೇ ಉಪನ್ಯಾಸಕರು ಮಧ್ಯಪ್ರವೇಶಿಸಿ ಇಬ್ಬರ ಜಗಳವನ್ನು ಬಿಡಿಸಿದ್ದಾರೆ. ನಂತರದಲ್ಲಿ ಜೆ.ಜಿ.ನಾಗರಾಜ್ ಮತ್ತು ನಾಗಾನಂದ ಕೆಂಪರಾಜ್ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.ನಗರದಲ್ಲಿ ಈ ವಿಷಯವು ಕಾಡ್ಗಿಚ್ಚಿನಂತೆ ಹಬ್ಬಿತು. ಅನೇಕ ಸಂಘಟನೆಗಳ ಮುಖಂಡರು ಆಸ್ಪತ್ರೆಗೆ ಧಾವಿಸಿ ಇಬ್ಬರನ್ನೂ ಕಂಡು ಬುದ್ದಿವಾದ ಹೇಳಿದರು, ಇವರಿಬ್ಬರ ವಿರುದ್ದ ಯಾವುದೇ ಪ್ರಕರಣವನ್ನು ದಾಖಲು ಮಾಡಬಾರದು, ಇದರಿಂದ ಇಬ್ಬರ ಕೆಲಸಗಳಿಗೂ ತೊಂದರೆಯಾಗಲಿದೆ. ಹಾಗಾಗಿ ಈ ಪ್ರಕರಣವನ್ನು ರಾಜೀ ಮೂಲಕ ಮುಕ್ತಾಯ ಮಾಡಬೇಕೆಂದು ಸಂಘಟನೆಗಳ ಮುಖಂಡರು ಮನವಿ ಮಾಡಿದ್ದಾರೆ.