ಕೊಳಗಲ್ಲು ಗ್ರಾಮದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ; ಪೊಲೀಸ್ ಅಧಿಕಾರಿಗಳಿಗೆ ಗಾಯ

| Published : Apr 09 2024, 12:46 AM IST

ಕೊಳಗಲ್ಲು ಗ್ರಾಮದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ; ಪೊಲೀಸ್ ಅಧಿಕಾರಿಗಳಿಗೆ ಗಾಯ
Share this Article
  • FB
  • TW
  • Linkdin
  • Email

ಸಾರಾಂಶ

ಕಲ್ಲು ತೂರಾಟದಲ್ಲಿ ತೀವ್ರವಾಗಿ ಗಾಯಗೊಂಡಿರುವ ಸಿಪಿಐ ಸತೀಶ್‌, ಪಿಎಸ್‌ಐ ಸಂತೋಷ್‌ ಡಬ್ಬಿನ್‌ ಹಾಗೂ ಇತರೆ ಪೊಲೀಸ್ ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಳ್ಳಾರಿ: ತಾಲೂಕಿನ ಕೊಳಗಲ್ಲು ಗ್ರಾಮದಲ್ಲಿ ಎರ್ರಿತಾತಾ ಮೂರ್ತಿ ಪ್ರತಿಷ್ಠಾಪನೆಗೆ ಸಂಬಂಧಿಸಿದಂತೆ ಎರಡು ಗುಂಪುಗಳ ಮಧ್ಯೆ ಭಾನುವಾರ ರಾತ್ರಿ ಘರ್ಷಣೆ ನಡೆದಿದ್ದು, ಘಟನೆಯಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಸೇರಿದಂತೆ ಐವರಿಗೆ ಗಾಯಗಳಾಗಿವೆ.

ಕಲ್ಲು ತೂರಾಟದಲ್ಲಿ ತೀವ್ರವಾಗಿ ಗಾಯಗೊಂಡಿರುವ ಸಿಪಿಐ ಸತೀಶ್‌, ಪಿಎಸ್‌ಐ ಸಂತೋಷ್‌ ಡಬ್ಬಿನ್‌ ಹಾಗೂ ಇತರೆ ಪೊಲೀಸ್ ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಗ್ರಾಮದಲ್ಲಿ ಮೂರ್ತಿ ಪ್ರತಿಷ್ಠಾಪನೆ, ದೇವಸ್ಥಾನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಗ್ರಾಮದ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿತ್ತು. ಗ್ರಾಮದಲ್ಲಿ ಬಂದೋಬಸ್ತ್‌ ಏರ್ಪಡಿಸಲು ಧಾವಿಸಿದ ಪೊಲೀಸರು ಸಮಾಧಾನ ಪಡಿಸಲು ಮುಂದಾದ ವೇಳೆ ಎರಡು ಗುಂಪಿನ ಕಡೆಯವರು ಪಿಎಸ್‌ಐ ಸಂತೋಷ್‌ ಡಬ್ಬಿನ್‌ ಅವರ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆ.

ಕರ್ತವ್ಯದಲ್ಲಿದ್ದ ಇನ್ನುಳಿದ ಪೊಲೀಸರನ್ನು ತಡೆದು ಕಲ್ಲುಗಳನ್ನು ತೂರಿದ್ದಾರೆ. ಇದರಿಂದ ಸಿಪಿಐ ಸತೀಶ್‌, ಎಸ್‌ಐ ಕರಿವೀರಪ್ಪ, ಸಿಬ್ಬಂದಿ ಮುಸ್ತಾಫ್ ಎಂಬವರಿಗೆ ಗಾಯಗಳಾಗಿವೆ. ಘಟನೆ ಹಿನ್ನಲೆಯಲ್ಲಿ ಎರಡು ಗುಂಪಿನ 24 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಬಳ್ಳಾರಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಗ್ರಾಮದಲ್ಲಿ144 ಸೆಕ್ಷನ್‌ ಜಾರಿಗೊಳಿಸಲಾಗಿದೆ. ಸ್ಥಳದಲ್ಲಿ ಎರಡು ಡಿಎಆರ್‌, ಕೆಎಸ್‌ಆರ್‌ಪಿ ತುಕಡಿ ಮತ್ತು ಪೊಲೀಸ್‌ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಸ್ಥಳಕ್ಕೆ ಎಸ್ಪಿ ಮತ್ತು ಎಎಸ್ಪಿ ಭೇಟಿ ಪರಿಶೀಲನೆ ನಡೆಸಿದ್ದಾರ

ಕೊಳಗಲ್ಲು ಗ್ರಾಮದಲ್ಲಿ ಎರ್ರಿತಾತಾ ದೇವಸ್ಥಾನದ ಆವರಣದಲ್ಲಿ ಹೊಸದಾಗಿ ದೇವಸ್ಥಾನ ನಿರ್ಮಾಣ ಹಾಗೂ ಎರ್ರಿತಾತಾ ಮೂರ್ತಿ ಪ್ರತಿಷ್ಠಾಪನೆ ಮಾಡದಂತೆ ಧಾರವಾಡ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ. ಆದರೂ, ಫೆ.23ರಂದು ರಾತ್ರಿ ಸಮಯದಲ್ಲಿ ಗ್ರಾಮದ ಕೆಲವರು ದೇವಸ್ಥಾನದಲ್ಲಿ ಎರ್ರಿತಾತಾ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದು, ಈ ವಿಚಾರವಾಗಿ ಏ.5ರಂದು ಧಾರವಾಡ ಹೈಕೋರ್ಟ್‌ ಆದೇಶದ ಮೇರೆಗೆ ಮೂರ್ತಿ ಪ್ರತಿಷ್ಠಾಪನೆ ಮಾಡಿದವರಿಂದಲೇ ತೆರವುಗೊಳಿಸಿದೆ. ಈ ವಿಚಾರವಾಗಿ ಗ್ರಾಮದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿತ್ತು. ಈ ನಡುವೆ ಏ.7ರಂದು ಗ್ರಾಮದಲ್ಲಿ ಪರ ಮತ್ತು ವಿರೋಧದ ಎರಡು ಗುಂಪುಗಳು ನಡುವೆ ಪರಸ್ಪರ ಕಲ್ಲು ತೂರಾಟ ನಡೆದಿದೆ.