ಕಾರಾಗೃಹದ ಪಿ.ಸಿ.ಎಸ್. ಕೊಠಡಿ ಬಳಿ ಫೋನ್ ಮಾಡಲು ಸರತಿ ಸಾಲಿನಲ್ಲಿ ನಿಂತಿದ್ದ ವಿಚಾರಣಾಧೀನ ಕೈದಿಗಳಾದ ಮೋಹನಕುಮಾರ ಹಾಗೂ ರಂಗಸ್ವಾಮಿ ನಡುವೆ ಮೊದಲು ಯಾರು ಫೋನ್ ಕರೆ ಮಾಡಬೇಕು ಎಂಬ ವಿಚಾರಕ್ಕೆ ಮಾತಿನ ಚಕಮಕಿ ನಡೆದಿದೆ. ಕೆಲವೇ ಕ್ಷಣಗಳಲ್ಲಿ ವಾಗ್ವಾದ ತಾರಕಕ್ಕೇರಿ ಇಬ್ಬರೂ ಪರಸ್ಪರ ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಮುಂದಾದ ಜೈಲು ಸಿಬ್ಬಂದಿ ಮೇಲೆಯೂ ಹಲ್ಲೆ ನಡೆದಿರುವ ಘಟನೆ ನಗರದ ಸಂತೇಪೇಟೆಯಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಹಾಸನ

ಸರದಿಯಲ್ಲಿ ಫೋನ್ ಮಾಡುವ ವಿಚಾರಕ್ಕೆ ವಿಚಾರಣಾಧೀನ ಕೈದಿಗಳ ನಡುವೆ ಆರಂಭವಾದ ಸಣ್ಣ ಜಗಳ ಭಾರೀ ಮಾರಾಮಾರಿಗೆ ಕಾರಣವಾಗಿದ್ದು, ಪರಿಸ್ಥಿತಿ ನಿಯಂತ್ರಿಸಲು ಮುಂದಾದ ಜೈಲು ಸಿಬ್ಬಂದಿ ಮೇಲೆಯೂ ಹಲ್ಲೆ ನಡೆದಿರುವ ಘಟನೆ ನಗರದ ಸಂತೇಪೇಟೆಯಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ನಡೆದಿದೆ.

ಕಾರಾಗೃಹದ ಪಿ.ಸಿ.ಎಸ್. ಕೊಠಡಿ ಬಳಿ ಫೋನ್ ಮಾಡಲು ಸರತಿ ಸಾಲಿನಲ್ಲಿ ನಿಂತಿದ್ದ ವಿಚಾರಣಾಧೀನ ಕೈದಿಗಳಾದ ಮೋಹನಕುಮಾರ ಹಾಗೂ ರಂಗಸ್ವಾಮಿ ನಡುವೆ ಮೊದಲು ಯಾರು ಫೋನ್ ಕರೆ ಮಾಡಬೇಕು ಎಂಬ ವಿಚಾರಕ್ಕೆ ಮಾತಿನ ಚಕಮಕಿ ನಡೆದಿದೆ. ಕೆಲವೇ ಕ್ಷಣಗಳಲ್ಲಿ ವಾಗ್ವಾದ ತಾರಕಕ್ಕೇರಿ ಇಬ್ಬರೂ ಪರಸ್ಪರ ಕೈ ಕೈ ಮಿಲಾಯಿಸಿಕೊಂಡಿದ್ದಾರೆ.

ಘಟನೆಯ ಮಾಹಿತಿ ತಿಳಿದು ಜಗಳ ಬಿಡಿಸಲು ಜೈಲು ಮುಖ್ಯ ವೀಕ್ಷಕರಾದ ಪರಶುರಾಮ ಹಾಗೂ ವೀರೇಶ್ ಸಂಗಮದ್ ಸೇರಿದಂತೆ ಸಿಬ್ಬಂದಿ ಮುಂದಾಗಿದ್ದಾರೆ. ಈ ಸಂದರ್ಭ ಪರಿಸ್ಥಿತಿ ಮತ್ತಷ್ಟು ಉದ್ವಿಘ್ನಗೊಂಡಿದ್ದು, ಶಶಿಧರ, ರಾಕೇಶ, ಯಲ್ಲಾಲಿಂಗ, ಆಕಾಶ, ಉಮೇಶ, ಸಾಯಿನಾಥ, ನಿರೂಪ್, ಭರತ ಹಾಗೂ ಚೇತನ್ ಸೇರಿದಂತೆ ಒಂಬತ್ತು ಮಂದಿ ವಿಚಾರಣಾಧೀನ ಕೈದಿಗಳು ಪಿ.ಸಿ.ಎಸ್. ಕೊಠಡಿಯೊಳಗೆ ನುಗ್ಗಿದ್ದಾರೆ. ನಂತರ ಈ ಕೈದಿಗಳ ಗುಂಪು ರಂಗಸ್ವಾಮಿ ಮೇಲೆ ಹಲ್ಲೆ ನಡೆಸಿದೆ. ಹಲ್ಲೆ ತಡೆಯಲು ಮುಂದಾದ ಜೈಲು ಸಿಬ್ಬಂದಿಗಳಾದ ವೀರೇಶ್ ಸಂಗಮದ್, ಶಿವಕುಮಾರ ಹಾಗೂ ಪರಶುರಾಮ ಎಚ್. ಅವರಿಗೂ ಪ್ರತಿರೋಧ ಎದುರಾಗಿದೆ. ಹಲ್ಲೆ ನಡೆಸಿದ ಆರೋಪಿಗಳು ಜೈಲು ವೀಕ್ಷಕ ವೀರೇಶ್ ಸಂಗಮದ್ ಅವರನ್ನು ತಳ್ಳಿ ಕೆಳಗೆ ಬೀಳಿಸಿ ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ.

ಘಟನೆಯಲ್ಲಿ ಗಾಯಗೊಂಡ ವೀರೇಶ್ ಸಂಗಮದ್ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಘಟನೆಗೆ ಸಂಬಂಧಿಸಿದ ಕೆಲ ಆರೋಪಿಗಳು ರೌಡಿಶೀಟರ್‌ ಮಂಜೇಶ್ ಕೊಲೆ ಪ್ರಕರಣದ ಆರೋಪಿಗಳಾಗಿದ್ದು, ಸದ್ಯ ವಿಚಾರಣಾಧೀನ ಕೈದಿಗಳಾಗಿ ಜಿಲ್ಲಾ ಕಾರಾಗೃಹದಲ್ಲಿದ್ದರು ಎಂದು ತಿಳಿದುಬಂದಿದೆ.ಜೈಲಿನೊಳಗಿನ ಈ ಗಲಾಟೆ ಹಾಗೂ ಸಿಬ್ಬಂದಿ ಮೇಲಿನ ಹಲ್ಲೆ ಪ್ರಕರಣ ಸಂಬಂಧ ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.