ತ್ರಿಶಂಕು ಸ್ಥಿತಿಯಲ್ಲಿ 5,8,9 ವರ್ಗದ ಮಕ್ಕಳು!

| Published : Mar 22 2024, 01:00 AM IST

ಸಾರಾಂಶ

ಶಿಕ್ಷಣ ಇಲಾಖೆಯ ತುಘಲಕ್‌ ದರ್ಬಾರ್‌ ಶೈಲಿಯ ಆಡಳಿತದಿಂದಾಗಿ ಶಾಲಾ ಪರೀಕ್ಷೆಗಳು ನ್ಯಾಯಾಲಯದ ಮೆಟ್ಟಿಲೇರಿದ್ದು, ಇದರಿಂದ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪಾಲಕರು ತ್ರಿಶಂಕು ಪರಿಸ್ಥಿತಿ ಎದುರಿಸುವಂತಾಗಿದೆ.

ಬಸವರಾಜ ಹಿರೇಮಠ

ಧಾರವಾಡ:

ಶಿಕ್ಷಣ ಇಲಾಖೆಯ ತುಘಲಕ್‌ ದರ್ಬಾರ್‌ ಶೈಲಿಯ ಆಡಳಿತದಿಂದಾಗಿ ಶಾಲಾ ಪರೀಕ್ಷೆಗಳು ನ್ಯಾಯಾಲಯದ ಮೆಟ್ಟಿಲೇರಿದ್ದು, ಇದರಿಂದ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪಾಲಕರು ತ್ರಿಶಂಕು ಪರಿಸ್ಥಿತಿ ಎದುರಿಸುವಂತಾಗಿದೆ. ವಿದ್ಯಾರ್ಥಿಗಳಂತೂ ಪರೀಕ್ಷೆಗಾಗಿ ಓದಿ ಇದೀಗ ಬರೆಯಲಾಗದೇ ತೊಳಲಾಟದಲ್ಲಿದ್ದಾರೆ.

ವಾರ್ಷಿಕ ಪರೀಕ್ಷೆಗಳು ಮುಗಿಯದೇ ಇದೀಗ ಐದು, ಎಂಟು, ಒಂಭತ್ತನೆ ತರಗತಿ ವಿದ್ಯಾರ್ಥಿಗಳು ಗೊಂದಲದಲ್ಲಿದ್ದಾರೆ. ಎರಡು ಪರೀಕ್ಷೆ ಬರೆದ ಅವರು ಇನ್ನುಳಿದ ಪರೀಕ್ಷೆಗಳಿಗೂ ಸರ್ವ ಸನ್ನದ್ಧರಾಗಿದ್ದರು. ಈಗ ಪರೀಕ್ಷೆಗಳು ನಡೆಯುತ್ತಿಲ್ಲವಾದ ಕಾರಣ ತೀವ್ರ ತಳಮಳದಲ್ಲಿದ್ದಾರೆ. ಮುಂದಿನ ಪರೀಕ್ಷೆಗೆ ಓದುವ ಮನಸ್ಸು ಕಳೆದುಕೊಂಡ ಮಕ್ಕಳು ಪಾಲಕರಿಗೆ, ಶಿಕ್ಷಕರಿಗೆ ಪರೀಕ್ಷೆ ಯಾವಾಗ ಎಂಬ ಪ್ರಶ್ನೆಯೊಂದಿಗೆ ಕಾಲ ಕಳೆಯುವಂತಾಗಿದೆ. ಅದರಲ್ಲೂ 9ನೇ ತರಗತಿ ವಿದ್ಯಾರ್ಥಿಗಳಂತೂ ಹೆಚ್ಚಿನ ಸಮಸ್ಯೆಗೆ ಒಳಗಾಗಿದ್ದಾರೆ. ಪರೀಕ್ಷೆ ಮುಗಿಸಿ ಎಸ್ಸೆಸ್ಸೆಲ್ಸಿ ವಿಶೇಷ ತರಬೇತಿಗೆ ಸಿದ್ಧರಾಗಬೇಕಿತ್ತು. ಅದು ಆಗುತ್ತಿಲ್ಲ.

ಬದಲಾವಣೆ ಮೊದಲೇ ಮಾಡಬೇಕಿತ್ತು:

ಸಾಮಾನ್ಯ ಸಂದರ್ಭದಲ್ಲಿ ಇಷ್ಟೊತ್ತಿಗೆ 5,8 ಮತ್ತು 9ನೇ ತರಗತಿಗಳ ಪರೀಕ್ಷೆ ಮುಗಿಯಬೇಕಿತ್ತು. ಎಸ್ಸೆಸ್ಸೆಲ್ಸಿ ಪರೀಕ್ಷೆ ಮಾ. 25ರಂದು ಆರಂಭವಾಗಲಿದ್ದು, ಅಷ್ಟರಲ್ಲಿ ಉಳಿದ ನಾಲ್ಕು ವಿಷಯಗಳಲ್ಲಿ ಪರೀಕ್ಷೆ ಮುಗಿಸಬೇಕಿತ್ತು. ಆದರೆ, ನ್ಯಾಯಾಲಯದ ತೀರ್ಪು ಇನ್ನೂ ಬಾರದೇ ಇರುವುದರಿಂದ ಪರೀಕ್ಷೆಗಳನ್ನು ಹೇಗೆ ನಡೆಸಬೇಕೆಂಬುದು ಶಾಲೆಗಳಿಗೆ ತಿಳಿಯದಂತಾಗಿದೆ.ಶಿಕ್ಷಣ ಇಲಾಖೆ ಶೈಕ್ಷಣಿಕ ವರ್ಷದಲ್ಲಿ ಏನಾದರೂ ಬದಲಾವಣೆ ಮಾಡಬೇಕಿದ್ದರೆ, ಶೈಕ್ಷಣಿಕ ವರ್ಷ ಆರಂಭವಾಗುವ ಮೊದಲೇ ಆ ಬಗ್ಗೆ ಆದೇಶ ಹೊರಡಿಸಬೇಕು. ನ್ಯಾಯಾಲಯ ಕೂಡಾ ವಿದ್ಯಾರ್ಥಿ ಮತ್ತು ಪಾಲಕರಿಗೆ ಆಗುತ್ತಿರುವ ಅನಾನುಕೂಲಗಳನ್ನು ಗಮನದಲ್ಲಿಸಿಕೊಂಡು ಶೀಘ್ರ ಪ್ರಕರಣ ವಿಲೇವಾರಿ ಮಾಡಬೇಕೆಂದು ಖಾಸಗಿ ಶಾಲೆಯ ಪ್ರಾಚಾರ್ಯರೊಬ್ಬರು ಕನ್ನಡಪ್ರಭಕ್ಕೆ ತಿಳಿಸಿದರು.

ಏನಿದು ಬೋರ್ಡ್‌ ಸಮಸ್ಯೆ:

ರಾಜ್ಯ ಶಾಲಾ ಶಿಕ್ಷಣ ಇಲಾಖೆ 2023ರ ಅಕ್ಟೋಬರ್‌ ತಿಂಗಳಲ್ಲಿ ಸುತ್ತೋಲೆ ಹೊರಡಿಸಿ ರಾಜ್ಯ ಪಠ್ಯಕ್ರಮ ಅನುಸರಿಸುವ ಶಾಲೆಗಳಲ್ಲಿ 5, 8 ಮತ್ತು 9ನೇ ವರ್ಗಗಳಿಗೆ ಬೋರ್ಡ್‌ ಪರೀಕ್ಷೆ ನಡೆಸಲಾಗುವುದು ಎಂದು ತಿಳಿಸಿತ್ತು. ಇದಕ್ಕೆ ಆಕ್ಷೇಪಣೆ ತೆಗೆದ ಖಾಸಗಿ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಗಳ ಸಂಘ ನ್ಯಾಯಾಲಯದ ಮೆಟ್ಟಿಲೇರಿತ್ತು. ಹೈಕೋರ್ಟ್‌ ಏಕ ಸದಸ್ಯ ಪೀಠವು ಮೊದಲು ಶಿಕ್ಷಣ ಇಲಾಖೆಯ ಸುತ್ತೋಲೆಗೆ ತಡೆಯಾಜ್ಞೆ ನೀಡಿದ ನಂತರ ಪರೀಕ್ಷೆಗೆ ಇನ್ನೆರೆಡು ದಿನ ಬಾಕಿ ಇರುವಂತೆ ದ್ವಿಸದಸ್ಯ ಪೀಠ ಸರ್ಕಾರದ ಸುತ್ತೋಲೆಯನ್ನು ಎತ್ತಿ ಹಿಡಿಯಿತು. ಇದರ ಫಲವಾಗಿ ಮಾ. 11ರಂದು ಬೋರ್ಡ್‌ ಪರೀಕ್ಷೆಗಳು ಆರಂಭಗೊಂಡು ಎರಡು ವಿಷಯಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆದ ನಂತರ ಸುಪ್ರೀಂಕೋರ್ಟ್‌ ಮತ್ತೆ ರಾಜ್ಯ ಸರ್ಕಾರದ ಸುತ್ತೋಲೆಗೆ ತಡೆ ಹಾಕಿತು. ಇದರಿಂದ ಪರೀಕ್ಷೆಗಳು ಸ್ಥಗಿತಗೊಂಡವು. ಸುಪ್ರೀಂಕೋರ್ಟ್‌ನ ಅಂತಿಮ ತೀರ್ಮಾನ ಇನ್ನೂ ಬರಬೇಕಿದ್ದು, ಅದುವರೆಗೆ ಏನು ಮಾಡಬೇಕೆಂಬುದು ರಾಜ್ಯದ ಶಿಕ್ಷಣ ಇಲಾಖೆ, ಶಿಕ್ಷಣ ಸಂಸ್ಥೆಗಳಿಗೆ ತಿಳಿಯದಂತಾಗಿ ಗೊಂದಲಮಯ ಪರಿಸ್ಥಿತಿ ನಿರ್ಮಾಣವಾಗಿದೆ.ಕೆಲವು ಖಾಸಗಿ ಸಂಸ್ಥೆಗಳು ಶಾಲಾ ಶಿಕ್ಷಣ ಇಲಾಖೆಯಿಂದ ಕನ್ನಡ ಮಾಧ್ಯಮದಲ್ಲಿ ಪರವಾನಗಿ ಪಡೆದು ಇಂಗ್ಲಿಷ್‌ ಮಾಧ್ಯಮ ತರಗತಿ ನಡೆಸುತ್ತಿವೆ. ಹೀಗಾಗಿ ಬೋರ್ಡ್‌ ಪರೀಕ್ಷೆ ನಡೆಸಿದರೆ, ಪರವಾನಗಿ ಪಡೆದ ಕನ್ನಡ ಮಾಧ್ಯಮದಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಇಂಗ್ಲಿಷ್‌ ಮಾಧ್ಯಮದ ವಿದ್ಯಾರ್ಥಿಗಳು ಹೇಗೆ ಬರೆಯುತ್ತಾರೆ ಎಂದು ನ್ಯಾಯಾಲಯದ ಮೊರೆ ಹೋಗಿದ್ದಾರೆ ಎಂದು ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ಕೆಲವು ಖಾಸಗಿ ಶಾಲೆಗಳು ಮಾಡುತ್ತಿರುವ ಅಕ್ರಮ ಕುರಿತು ಬೇಸರ ವ್ಯಕ್ತಪಡಿಸುತ್ತಾರೆ.ಒಟ್ಟಾರೆ, ಶಿಕ್ಷಣ ಇಲಾಖೆ ಹಾಗೂ ಖಾಸಗಿ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಗಳ ಸಂಘದ ಮಧ್ಯದ ಜಟಾಪಟಿಯಿಂದ ಮಕ್ಕಳು ಹಾಗೂ ಪಾಲಕರು ಸಮಸ್ಯೆ ಅನುಭವಿಸುವಂತಾಗಿರುವುದು ದುರಂತದ ಸಂಗತಿ.ಬೋರ್ಡ್‌ ಪರೀಕ್ಷೆ ಕುರಿತು ನಿತ್ಯ ವಿವಿಧ ಶಾಲೆಗಳಿಂದ ವಿಚಾರಣೆಗಳು ಬರುತ್ತಿವೆ. ಆದರೆ, ಈ ವಿಷಯ ನ್ಯಾಯಾಲಯದಲ್ಲಿದ್ದು ತೀರ್ಪಿನ ನಂತರವೇ ಪರೀಕ್ಷೆಗಳನ್ನು ನಡೆಸಬೇಕಿದೆ. ಪರೀಕ್ಷೆ ನಡೆಸಲು ಎಲ್ಲ ರೀತಿಯಲ್ಲೂ ಸಿದ್ಧರಾಗಿದ್ದು, ತೀರ್ಪು ಬಂದ ನಂತರವೇ ಪರೀಕ್ಷೆ ನಡೆಸಲಾಗುವುದು ಎಂದು ಡಿಡಿಪಿಐ ಎಸ್‌.ಎಸ್‌. ಕೆಳದಿಮಠ ಹೇಳಿದರು.