ಸಾರಾಂಶ
ಧಾರವಾಡ: ಶಾಸ್ತ್ರೀಯ ನೃತ್ಯ ಕಲೆಯು ಭಾರತೀಯ ಪರಂಪರೆಯ ಹಿರಿಮೆ ಹೆಚ್ಚಿಸಿದೆ. ಭಾರತೀಯ ಪರಂಪರೆ-ಸಂಸ್ಕೃತಿಯ ಅಸ್ಮಿತೆಯಾಗಿದೆ ಎಂದು ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಕಾರ್ಯಾಧ್ಯಕ್ಷ ಈರೇಶ ಅಂಚಟಗೇರಿ ಹೇಳಿದರು.
ನಗರದ ಸೃಜನಾ ರಂಗಮಂದಿರದಲ್ಲಿ ಭರತ ನೃತ್ಯ ಅಕಾಡೆಮಿ ಹಾಗೂ ಶ್ರೀಕುಮಾರೇಶ್ವರ ಕಲ್ಚರಲ್ ಸೊಸೈಟಿ ಆಶ್ರಯದಲ್ಲಿ ಏರ್ಪಡಿಸಿದ್ದ ಪರಿಮಳಾ ನೃತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿದ ಅವರು, ಭಾರತೀಯ ಸಂಸ್ಕೃತಿ-ಪರಂಪರೆಯನ್ನು ೨೮ ವರ್ಷಗಳಿಂದ ಮುನ್ನಡೆಸಿಕೊಂಡು ಬಂದಿರುವ ವಿದ್ವಾನ್ ರಾಜೇಂದ್ರ ಟೊಣಪಿ ಅವರ ಕಾರ್ಯ ಶ್ಲಾಘನೀಯವಾದುದು ಎಂದರು.ಧಾರವಾಡ ರೋಟರಿ ಕ್ಲಬ್ ಅಧ್ಯಕ್ಷ ಡಾ. ರಿತೇಶ ಉಪನಾಳ ಮಾತನಾಡಿ, ಮನುಷ್ಯನ ಏಕಾಗ್ರತೆಗೆ ಅಗತ್ಯವಿರುವ ಅಂಶಗಳು ಪಾದ ಮತ್ತು ಹಸ್ತಗಳಲ್ಲಿ ಅಡಗಿವೆ. ಭರತ ನಾಟ್ಯ ಕಲೆಯಿಂದ ಈ ಅಂಗಾಂಗಗಳ ಕ್ರಿಯಾಶೀಲತೆಯಿಂದ ಮನುಷ್ಯನ ಏಕಾಗ್ರತೆ ಜಾಗೃತಗೊಳ್ಳುತ್ತದೆ. ಹೀಗಾಗಿ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮಕ್ಕಳು ಓದಿನಲ್ಲೂ ಹೆಚ್ಚು ಕ್ರಿಯಾಶೀಲತೆಯಿಂದ ಮುಂದಿರುತ್ತಾರೆ ಎಂದು ಹೇಳಿದರು.
ನೃತ್ಯ ಗುರು ವಿದ್ವಾನ ರಾಜೇಂದ್ರ ಟೊಣಪಿ ಮಾತನಾಡಿ, ಮಕ್ಕಳು ಕಠಿಣ ಪರಿಶ್ರಮದಿಂದ ಕಲಿತಾಗ ಮಾತ್ರ ಸಾಧನೆ ಮಾಡಲು ಸಾಧ್ಯ. ಕಲೆಯಿಂದ ವಿದ್ಯೆಗೆ ಯಾವುದೇ ಹಾನಿಯಾಗಲಾರದು. ಅವರ ಏಕಾಗ್ರತೆ ಹೆಚ್ಚಿಸುವಲ್ಲಿ ಪೂರಕವಾಗಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಶ್ರೀಕುಮಾರೇಶ್ವರ ಕಲ್ಚರಲ್ ಸೊಸೈಟಿ ಅಧ್ಯಕ್ಷ ಮಲ್ಲಿಕಾರ್ಜುನ ಚಿಕ್ಕಮಠ ಮಾತನಾಡಿ, ಸಾಕ್ಷರತೆ ಹೆಚ್ಚಾದಂತೆ ಭಾರತೀಯ ಸಂಸ್ಕೃತಿ ನಶಿಸುತ್ತಿರುವುದು ವಿಷಾದನೀಯ. ಆದರೆ, ನೃತ್ಯ, ಸಂಗೀತ ಹಾಗೂ ನಾಟಕಗಳಂತಹ ಲಲಿತ ಕಲೆಗಳ ಮುಖಾಂತರ ಭಾರತೀಯ ಸಂಸ್ಕೃತಿ ಉಳಿಸಿ, ಬೆಳೆಸುವ ಸಾಧ್ಯತೆ ಇದೆ. ಇದಕ್ಕೆ ಗುರು ಎಂಬ ಪದ ಪ್ರಯೋಗವೇ ಸಾಕ್ಷಿಯಾಗಿದೆ. ಇದನ್ನು ಪಾಲಕರು ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.
ಡಾ. ಆರ್.ವಿ. ದೇಶಪಾಂಡೆ, ವಸ್ತ್ರವಿನ್ಯಾಸಕಿ ಮುಕ್ತಾ ವೆರ್ಣೇಕರ, ಶ್ರೀರಾಜಲಕ್ಷ್ಮೀ ದೇವಸ್ಥಾನ ಕಮಿಟಿ ಅಧ್ಯಕ್ಷ ಆರ್.ಎ. ಕನ್ನೂರ, ಭರತ ನೃತ್ಯ ಅಕಾಡೆಮಿ ಉಪಾಧ್ಯಕ್ಷ ಎಸ್.ಎಂ. ಪಾಟೀಲ, ವೈದ್ಯ ಡಾ. ಪ್ರಸನ್ ಬೈಂದೂರ, ಪ್ರಕಾಶ ಹಾವಣಗಿ, ಅಂದಾನೆಪ್ಪ ನರಗುಂದ ಉಪಸ್ಥಿತರಿದ್ದರು.ರವಿ ಕುಲಕರ್ಣಿ ನಿರೂಪಿಸಿದರು. ಪ್ರಕಾಶ ಬಾಳಿಕಾಯಿ ಸ್ವಾಗತಿಸಿದರು. ಅನನ್ಯ ಹಾವಣಗಿ ವಂದಿಸಿದರು. ಆರಂಭದಲ್ಲಿ ಭಾರತದ ಮಾಜಿ ಪ್ರಧಾನಿ ಡಾ. ಮನಮೋಹನ ಸಿಂಗ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಭರತ ನೃತ್ಯ ಅಕಾಡೆಮಿಯ ಯುವ ಕಲಾವಿದರು ವಿವಿಧ ಹಾಡುಗಳಿಗೆ ಅತ್ಯಂತ ಮನಮೋಹಕ ನೃತ್ಯ ಪ್ರಸ್ತುತಪಡಿಸಿದರು. ಹಿಮ್ಮೇಳದಲ್ಲಿ ಕೊಳಲು ವಿದ್ವಾನ್ ರಾಹುಲ್ ರಾಮ್, ಕೇರಳ, ರಿದಮ್ ಪ್ಯಾಡ್ ರಾಘವೇಂದ್ರ ರಂಗದೋಳ, ಶಿವಮೊಗ್ಗ, ಮೃದಂಗಂ ವಿದ್ವಾನ್ ಪದ್ಮರಾಜ್, ಕೇರಳ, ಗಾಯನ ನಟುವಾಂಗ ವಿದ್ವಾನ್ ರಾಜೇಂದ್ರ ಟೊಣಪಿ, ತಬಲಾ ಡಾ. ಅನಿಲ ಮೇತ್ರಿ ಸಾಥ್ ಸಂಗತ ನೀಡಿದರು.ಕಾರ್ಯಕ್ರಮದಲ್ಲಿ ಸಂತೋಷ ಮಹಾಲೆ, ಶಿವಾನಂದ ಹಂಜಿ, ಪ್ರವೀಣ ಶೆಟ್ಟಿ, ಡಾ. ಎ.ಎಲ್. ದೇಸಾಯಿ, ಡಾ. ಬಸವರಾಜ ಕಲೆಗಾರ, ರವಿ ಶಿಂಧೆ ಹಾಜರಿದ್ದರು.