ಕನ್ನಡ ನಾಡು ನುಡಿಗೆ ತಮ್ಮನ್ನು ಅರ್ಪಿಸಿಕೊಂಡ, ವಿಶೇಷವಾಗಿ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಹೋರಾಟ ಮಾಡಿದ್ದ ಜಯದೇವಿ ತಾಯಿ ಲಿಗಾಡೆ ಹೆಸರಿನಲ್ಲಿರುವ ಅನುದಾನಿತ ಪ್ರೌಢಶಾಲೆಯ ಜಾಗವು ರಾತ್ರೋರಾತ್ರಿ ವಿವಾದಕ್ಕೆ ಈಡಾಗಿ ಮಕ್ಕಳು ಪೆಂಡಾಲ್‌ನಲ್ಲಿ ಶಿಕ್ಷಣ ಪಡೆಯುವಂತಾಗಿದೆ.
ಧಾರವಾಡ:
ಕನ್ನಡ ನಾಡು ನುಡಿಗೆ ತಮ್ಮನ್ನು ಅರ್ಪಿಸಿಕೊಂಡ, ವಿಶೇಷವಾಗಿ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಹೋರಾಟ ಮಾಡಿದ್ದ ಜಯದೇವಿ ತಾಯಿ ಲಿಗಾಡೆ ಹೆಸರಿನಲ್ಲಿರುವ ಅನುದಾನಿತ ಪ್ರೌಢಶಾಲೆಯ ಜಾಗವು ರಾತ್ರೋರಾತ್ರಿ ವಿವಾದಕ್ಕೆ ಈಡಾಗಿ ಮಕ್ಕಳು ಪೆಂಡಾಲ್‌ನಲ್ಲಿ ಶಿಕ್ಷಣ ಪಡೆಯುವಂತಾಗಿದೆ.ಧಾರವಾಡದ ಕಿಲ್ಲಾ ಸಮೀಪ ಇರುವ 1966ರಲ್ಲಿ ಆರಂಭವಾಗಿರುವ, ಸರ್ಕಾರದಿಂದ ಅನುದಾನ ಪಡೆಯುತ್ತಿರುವ ಜಯದೇವಿ ತಾಯಿ ಲಿಗಾಡೆ ಶಾಲೆಯು ಭಾರತೀಯ ವಿದ್ಯಾಕೇಂದ್ರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಶಾಲೆಯ ಆಟದ ಮೈದಾನದಲ್ಲಿದ್ದ ತರಗತಿಯ ಕಟ್ಟಡವೊಂದನ್ನು ಜಾಗೆಯ ಮಾಲೀಕರು ಎನಿಸಿಕೊಂಡವರು ರಾತ್ರೋರಾತ್ರಿ ಕೆಡವಿದ್ದು, ಮಂಗಳವಾರ ಪ್ರೌಢಶಾಲಾ ಮಕ್ಕಳು ಅಕ್ಷರಶಃ ಪೆಂಡಾಲ್ ಹಾಕಿಕೊಂಡು ಮೈದಾನದಲ್ಲಿ ಅಭ್ಯಾಸ ಮಾಡುವಂತಾಯಿತು.
ಸೋಮವಾವರಷ್ಟೇ ತರಗತಿಯಲ್ಲಿ ಶಿಕ್ಷಣ ಪಡೆದ ಮಕ್ಕಳು ಮಂಗಳವಾರ ಬೆಳಗ್ಗೆ ಎನ್ನುವಷ್ಟರಲ್ಲಿ ಜೆಸಿಬಿಯಿಂದ ತೆರವುಗೊಂಡ ಶಾಲಾ ಕಟ್ಟಡ ಪಳಯುಳಿಕೆಗಳು ಮಕ್ಕಳು ಹಾಗೂ ಶಿಕ್ಷಕರಿಗೆ ಅಚ್ಚರಿ ಮೂಡಿಸಿವೆ. 5ರಿಂದ 10ನೇ ತರಗತಿಯ ಈ ಶಾಲೆಯಲ್ಲಿ 186 ವಿದ್ಯಾರ್ಥಿನಿಯರಿದ್ದಾರೆ. ಶಾಲೆಯ ಪಕ್ಕದಲ್ಲಿಯೇ ಇದ್ದ ಸುಮಾರು ಎರಡುವರೆ ಗುಂಟೆ ಜಾಗೆಯಲ್ಲಿ ಒಂದು ಕಟ್ಟಡವಿತ್ತು. ಅಲ್ಲಿಯೇ 9ನೇ ತರಗತಿಯ ವಿದ್ಯಾರ್ಥಿನಿಯರು ವ್ಯಾಸಾಂಗ ಮಾಡುತ್ತಿದ್ದರು. ಆದರೆ, ಕೆಲ ತಿಂಗಳ ಹಿಂದೆ ಇದು ತಮ್ಮ ಜಾಗ ಎಂದು ಅನಿಲ್ ವೈದ್ಯ ಎಂಬುವರು ಶಾಲಾ ಆಡಳಿತ ಮಂಡಳಿಗೆ ಹೇಳಿದ್ದರು. ಕಳೆದ ತಿಂಗಳು ಈ ಜಾಗೆಯನ್ನು ಹನುಮಂತಗೌಡ ಎಂಬುವರಿಗೆ ಮಾರಾಟ ಸಹ ಮಾಡಿದ್ದರು. ಇದೀಗ ಹನುಮಂತಗೌಡ ಅಲ್ಲಿದ್ದ ಕಟ್ಟಡವನ್ನು ರಾತ್ರೋರಾತ್ರಿ ಜೆಸಿಬಿ ಬಳಸಿ ತೆರವುಗೊಳಿಸಿದ್ದಾರೆ. ಇದರಿಂದಾಗಿ ಈ ಮಕ್ಕಳೆಲ್ಲ ಬೀದಿಗೆ ಬೀಳುವ ಸ್ಥಿತಿ ನಿರ್ಮಾಣವಾಗಿದೆ.ಈ ಶಾಲೆಯಲ್ಲಿ ಕಲಿಯುತ್ತಿರುವ ಬಹುತೇಕ ವಿದ್ಯಾರ್ಥಿನಿಯರು ದಲಿತ ಸಮುದಾಯಕ್ಕೆ ಸೇರಿದವರು. ಅಲ್ಲದೇ ಅವರ ಪೈಕಿ ಬಹುತೇಕರು ವಲಸೆ ಕಾರ್ಮಿಕರ ಮಕ್ಕಳು. ಇಂತಹ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಶಿಕ್ಷಣ ನೀಡುತ್ತಿರುವ ಈ ಶಾಲೆಗೆ ಸ್ವಂತ ಕಟ್ಟಡವೂ ಇಲ್ಲ. ಇಂತಹ ವೇಳೆಯಲ್ಲಿಯೇ ಈ ಭೂಮಿಯನ್ನು ಖರೀದಿಸಿದ್ದ ಹನುಮಂತಗೌಡ, ಕೆಲ ದಿನಗಳ ಹಿಂದೆ ಕಟ್ಟಡವನ್ನು ತೆರವುಗೊಳಿಸಲು ಬಂದಿದ್ದರು. ಆಗ ಆಡಳಿತ ಮಂಡಳಿಯವರು ಆಟದ ಮೈದಾನ ಎನ್ನುವ ಹಳೆಯ ದಾಖಲೆಗಳನ್ನು ತೋರಿಸಿದ್ದರು.
ಆದರೆ, ಅದಾಗಲೇ ಈ ಜಾಗೆ ತಮ್ಮ ಹೆಸರಿಗೆ ವರ್ಗಾವಣೆಯಾಗಿದೆ ಎಂದು ಹನುಮಂತಗೌಡ ಹೇಳಿದ್ದಕ್ಕೆ ಆಡಳಿತ ಮಂಡಳಿಯವರು ಸುಮ್ಮನಾಗಿ, ತಮ್ಮ ಕಟ್ಟಡ ನಿರ್ಮಾಣವಾಗುವ ವರೆಗೆ ಅನುಕೂಲ ಮಾಡಿಕೊಡಿ ಎಂದು ಮನವಿ ಸಹ ಮಾಡಿದ್ದರು. ಇದೇ ವೇಳೆ ಈ ಜಾಗೆಯ ಬಗ್ಗೆ ನ್ಯಾಯಾಲಯಕ್ಕೂ ದಾಖಲೆಗಳನ್ನು ಸಲ್ಲಿಸಿದ್ದರು. ಅಷ್ಟರಲ್ಲಿಯೇ ರಾತ್ರೋರಾತ್ರಿ ಕಟ್ಟಡ ತೆರವುಗೊಳಿಸಿದ್ದು ವಿದ್ಯಾರ್ಥಿನಿಯರಿಗೆ ತರಗತಿ ಇಲ್ಲದೇ ತೀವ್ರ ಸಮಸ್ಯೆಯಾಗಿದೆ ಎಂದು ಭಾರತೀಯ ವಿದ್ಯಾ ಕೇಂದ್ರದ ಅಧ್ಯಕ್ಷ ಮಹೇಶ ಶೆಟ್ಟಿ ಮಾಹಿತಿ ನೀಡಿದರು.ಇದೀಗ ಆಡಳಿತ ಮಂಡಳಿ ವತಿಯಿಂದ ಉಪನಗರ ಠಾಣೆ ಪೊಲೀಸರಿಗೆ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮಂಗಳವಾರ ದೂರು ಸಲ್ಲಿಸಿದ್ದು, ಈ ಬಗ್ಗೆ ಇನ್ನಷ್ಟೇ ವಿಚಾರಣೆ ನಡೆಯಬೇಕಿದೆ.