ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಮನುಷ್ಯರಿಗೆ ಗುಣಮಟ್ಟದ ಆಹಾರ ಎಷ್ಟು ಮುಖ್ಯವೋ ಶುದ್ಧ ಕುಡಿಯುವ ನೀರು ಸಹ ಅಷ್ಟೇ ಮುಖ್ಯ ಎಂದು ಮನ್ಮುಲ್ ಉಪಾಧ್ಯಕ್ಷ ಎಂ.ಎಸ್. ರಘುನಂದನ್ ತಿಳಿಸಿದರು.ತಾಲೂಕಿನ ಸಿದ್ದೇಗೌಡನಕೊಪ್ಪಲು ಗ್ರಾಮದ ಡೇರಿ ಆವರಣದಲ್ಲಿ ಮಂಡ್ಯ ಜಿಲ್ಲಾ ಹಾಲು ಒಕ್ಕೂಟದಿಂದ ಸ್ಥಾಪಿಸಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿ ಮಾತನಾಡಿ, ಕುಡಿಯುವ ನೀರಿನ ಅಗತ್ಯವನ್ನು ಮನಗಂಡು ಗ್ರಾಮೀಣ ಭಾಗದ ರೈತರಿಗೆ ಶುದ್ಧ ಕುಡಿಯುವ ನೀರೊದಗಿಸಬೇಕೆಂಬ ದೃಷ್ಟಿಯಿಂದ ಒಕ್ಕೂಟದ ವತಿಯಿಂದ ಶುದ್ಧ ನೀರಿನ ಘಟಕವನ್ನು ಸ್ಥಾಪಿಸಲಾಗುತ್ತಿದೆ ಎಂದರು.
ಗ್ರಾಮೀಣ ಭಾಗದ ಜನರಿಗೆ ಶುದ್ಧ ಕುಡಿಯುವ ನೀರು ಸಿಗದೆ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಮ್ಮ ಒಕ್ಕೂಟ ಯಾವ್ಯಾವ ಗ್ರಾಮಗಳಲ್ಲಿ ಶುದ್ಧ ನೀರಿನ ಘಟಕ ಇಲ್ಲವೋ ಅಂತಹ ಗ್ರಾಮಗಳನ್ನು ಗುರುತಿಸಿ ಪ್ರತೀ ವರ್ಷ 13 ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿ ರೈತರಿಗೆ ಅನುಕೂಲ ಮಾಡಲು ಯೋಜನೆ ರೂಪಿಸಿದೆ ಎಂದರು.ಒಕ್ಕೂಟದ ವತಿಯಿಂದ ಸ್ಥಾಪಿಸಲಾಗಿರುವ ಆರ್.ಕೆ. ಟ್ರಸ್ಟ್‌ನಿಂದ ಜಿಲ್ಲಾದ್ಯಂತ 13 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಈ ಪೈಕಿ ಮೊದಲ ಬಾರಿಗೆ ಸಿದ್ದೇಗೌಡನದೊಡ್ಡಿ ಗ್ರಾಮದಲ್ಲಿ ಉದ್ಘಾಟನೆ ಮಾಡುತ್ತಿದ್ದೇವೆ ಎಂದರು.
ಈ ಘಟಕ ಸ್ಥಾಪನೆಗೆ ನಮ್ಮ ಒಕ್ಕೂಟದ ಎಂಜಿನಿಯರ್‌ಗಳ ತಂಡ ತುಂಬಾ ಅಚ್ಚುಕಟ್ಟಾಗಿ ಕೆಲಸ ಮಾಡಿದೆ. ಜೊತೆಗೆ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಮಂಜೇಶ್ ಅವರೂ ಸಹ ಸಹಕಾರ ನೀಡಿದ್ದಾರೆ ಎಂದು ಶ್ಲಾಸಿದರು.ಈ ವೇಳೆ ಮನ್ಮುಲ್ ಮಾಜಿ ಅಧ್ಯಕ್ಷ ಬಿ.ಆರ್. ರಾಮಚಂದ್ರ ಮಾತನಾಡಿ, ಸಿದ್ದೇಗೌಡನದೊಡ್ಡಿ ಗ್ರಾಮದಲ್ಲಿ ಸ್ಥಾಪನೆಯಾಗಿರುವ ಶುದ್ಧ ನೀರಿನ ಘಟಕವನ್ನು ಸುತ್ತಮುತ್ತಲ ಮೂರು ಗ್ರಾಮಗಳ ಗ್ರಾಮಸ್ಥರು ಉಪಯೋಗಿಸಿಕೊಳ್ಳಲು ಅವಕಾಶ ಇದೆ. ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಒಕ್ಕೂಟದ ಅಭಿವೃದ್ಧಿಗೆ ಪ್ರತಿಯೊಬ್ಬ ಹಾಲು ಉತ್ಪಾದಕರು ಶುದ್ಧ ಗುಣಮಟ್ಟದ ಹಾಲನ್ನು ನೀಡುವುದರೊಂದಿಗೆ ಮತ್ತಷ್ಟು ಅಭಿವೃದ್ಧಿಗೆ ಸಹಕಾರ ನೀಡಬೇಕು. ಪ್ರತಿಯೊಬ್ಬ ರೈತರು ತಮ್ಮ ಜಾನುವಾರುಗಳಿಗೆ ವಿಮೆಯನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು. ಮನ್ಮುಲ್ ವತಿಯಿಂದ ನೀಡಲಾಗುವ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಗಿರೀಶ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಚಿಕ್ಕತಾಯಮ್ಮ, ಜೆಡಿಎಸ್ ತಾಲೂಕು ಕಾರ್ಯಾಧ್ಯಕ್ಷ ವಸಂತರಾಜು, ವ್ಯವಸ್ಥಾಪಕ ಇಂಜಿನಿಯರ್ ಶಿವಕುಮಾರ್, ಉಪ ವ್ಯವಸ್ಥಾಪಕ ಡಾ. ಮಂಜೇಶ್‌ಗೌಡ, ಪ್ರಬಾರ ಕಾರ್‍ಯದರ್ಶಿ ಡಿ. ನಟರಾಜು, ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರು, ಗ್ರಾಮಸ್ಥರು ಸಮಾರಂಭದಲ್ಲಿ ಭಾಗವಹಿಸಿದ್ದರು.