ಬಿ.ಎಚ್.ಎಂ. ಗುರುಶಾಂತಶಾಸ್ತ್ರಿ
ಕಂಪ್ಲಿ: ಪಟ್ಟಣದಲ್ಲಿ ಕೆಲವು ಶುದ್ಧ ಕುಡಿಯುವ ನೀರಿನ ಘಟಕಗಳು ಹಲವು ತಿಂಗಳುಗಳಿಂದ ಸ್ಥಗಿತಗೊಂಡಿದ್ದರೂ ಅವುಗಳನ್ನು ದುರಸ್ತಿಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಕೂಡಲೇ ದುರಸ್ತಿ ಕಾರ್ಯ ಕೈಗೊಂಡು ಘಟಕಗಳನ್ನು ಮರುಪ್ರಾರಂಭಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.ಇತ್ತೀಚಿನ ದಿನಗಳಲ್ಲಿ ಬಿಸಿಲಿನ ತಾಪಮಾನ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಅವಶ್ಯಕತೆ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ಜನತೆಗೆ ಅತ್ಯಾವಶ್ಯಕವಾಗಿರುವ ಮೂಲಭೂತ ಸೌಕರ್ಯಗಳಲ್ಲಿ ಒಂದಾದ ಶುದ್ಧ ಕುಡಿಯುವ ನೀರಿನ ಪೂರೈಕೆಯಲ್ಲಿ ಅಧಿಕಾರಿಗಳು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಿತ್ತು. ಆದರೆ ಪಟ್ಟಣದಲ್ಲಿ ಕೆಲವು ಘಟಕಗಳು ಬೀಗ ಜಡಿದುಕೊಂಡಿರುವುದು ಹಾಗೂ ಕೆಲವು ಕೆಟ್ಟು ನಿಂತಿರುವುದು ಅಧಿಕಾರಿಗಳ ನಿರ್ಲಕ್ಷ್ಯವನ್ನು ಸ್ಪಷ್ಟವಾಗಿ ತೋರಿಸುತ್ತಿದೆ.
ಪಟ್ಟಣದ ಉದ್ಭವ ಮಹಾ ಗಣಪತಿ ದೇವಸ್ಥಾನ, ಸಂತೆ ಮಾರುಕಟ್ಟೆ, ಚಪ್ಪರದಹಳ್ಳಿ, ಕೋಟೆ, ಮಾರುತಿ ನಗರ, ಶುಗರ್ ಫ್ಯಾಕ್ಟರಿ, 23ನೇ ವಾರ್ಡ್, 4ನೇ ವಾರ್ಡ್ ಹಾಗೂ ಕೆಇಬಿ ಪ್ರದೇಶ ಸೇರಿದಂತೆ ಪುರಸಭೆ ವ್ಯಾಪ್ತಿಯಲ್ಲಿ ಸ್ಲಂ ಬೋರ್ಡ್ ಮತ್ತು ಆರ್‌ಡಬ್ಲ್ಯುಎಸ್ ಅಡಿಯಲ್ಲಿ ಒಟ್ಟು 11 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಲಾಗಿದೆ. ಆದರೆ ಈ ಘಟಕಗಳಲ್ಲಿ ಕೆಲವು ನಿರ್ವಹಣೆಯ ಕೊರತೆಯಿಂದ ಬಳಕೆಗೆ ಅನರ್ಹವಾಗಿವೆ.ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಬಳಿಯ ಶುದ್ಧ ಕುಡಿಯುವ ನೀರಿನ ಘಟಕ ಗುತ್ತಿಗೆ ಪಡೆದವರ ನಿರ್ಲಕ್ಷ್ಯದಿಂದ ಕಾರ್ಯನಿರ್ವಹಿಸದೇ ಹಲವು ತಿಂಗಳುಗಳಾಗಿವೆ. ಜತೆಗೆ ಎಂಡಿ ಕ್ಯಾಂಪ್ ಹಾಗೂ 4ನೇ ವಾರ್ಡ್‌ನಲ್ಲಿ ಇರುವ ಎರಡು ಘಟಕಗಳು ಕೆಟ್ಟು ನಿಂತಿದ್ದು, ಇವುಗಳ ದುರಸ್ತಿ ಕಾರ್ಯ ಇನ್ನೂ ಪ್ರಾರಂಭವಾಗಿಲ್ಲ. ಒಟ್ಟಾರೆ ಪಟ್ಟಣದಲ್ಲಿ ಕನಿಷ್ಠ ಮೂರು ಘಟಕಗಳು ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಅವುಗಳು ಇದ್ದು ಇಲ್ಲದಂತಾಗಿರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಖಾಸಗಿ ಘಟಕಗಳ ಅವಲಂಬನೆ ಹೆಚ್ಚಳ: ಸರ್ಕಾರಿ ಘಟಕಗಳು ಕಾರ್ಯನಿರ್ವಹಿಸದ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಿಗಳು ಖಾಸಗಿ ಶುದ್ಧ ಕುಡಿಯುವ ನೀರಿನ ಘಟಕಗಳ ಮೊರೆ ಹೋಗಬೇಕಾದ ಪರಿಸ್ಥಿತಿ ಉಂಟಾಗಿದೆ. ಇದರಿಂದ ಜನರು ಹೆಚ್ಚುವರಿ ಹಣ ಖರ್ಚು ಮಾಡಿ ನೀರನ್ನು ಖರೀದಿಸಬೇಕಾಗಿ ಬರುತ್ತಿದೆ. ಇದು ಸಾಮಾನ್ಯ ಜನರಿಗೆ ಆರ್ಥಿಕ ಹೊರೆ ತಂದಿದ್ದು, ಅಧಿಕಾರಿಗಳ ನಿರ್ಲಕ್ಷ್ಯವೇ ಈ ಸಮಸ್ಯೆಗೆ ಪ್ರಮುಖ ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ತಕ್ಷಣ ಕ್ರಮಕ್ಕೆ ಆಗ್ರಹ: ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತು ಕೆಟ್ಟು ನಿಂತಿರುವ ಘಟಕಗಳನ್ನು ತಕ್ಷಣ ದುರಸ್ತಿಗೊಳಿಸಿ ಮರುಪ್ರಾರಂಭಿಸಬೇಕು. ಗುತ್ತಿಗೆ ಪಡೆದು ನಿರ್ವಹಣೆ ಮಾಡದೇ ಇರುವವರ ವಿರುದ್ಧ ಕಠಿಣ ಕ್ರಮ ಕೈಗೊಂಡು, ಅಗತ್ಯವಿದ್ದಲ್ಲಿ ಹೊಸ ಗುತ್ತಿಗೆದಾರರಿಗೆ ಟೆಂಡರ್ ನೀಡಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಅಲ್ಲದೇ ಪಟ್ಟಣದಲ್ಲಿ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದ ವಾರ್ಡ್‌ಗಳು ಹಾಗೂ ಪ್ರದೇಶಗಳನ್ನು ಗುರುತಿಸಿ, ಹೊಸ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸುವ ಮೂಲಕ ಜನರಿಗೆ ಅನುಕೂಲ ಕಲ್ಪಿಸಬೇಕು. ಈಗಿರುವ ಘಟಕಗಳು ಮತ್ತೆ ಸ್ಥಗಿತಗೊಳ್ಳದಂತೆ ಸಮರ್ಪಕ ನಿರ್ವಹಣೆ ಕೈಗೊಳ್ಳುವ ಮೂಲಕ ಜನರ ಮೂಲಭೂತ ಹಕ್ಕನ್ನು ಸಮರ್ಪಕವಾಗಿ ಪೂರೈಸುವ ಕಾರ್ಯ ನಿರ್ವಹಿಸಬೇಕು ಎಂದು ಪಟ್ಟಣದ ಜನತೆ ಒತ್ತಾಯಿಸಿದ್ದಾರೆ.ಎಂ.ಡಿ. ಕ್ಯಾಂಪ್‌ನ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ನಿಂತು ಹಲವು ವರ್ಷಗಳೇ ಕಳೆದಿದೆ. ಇದರಿಂದಾಗಿ ಸ್ಥಳೀಯರಿಗೆ ಶುದ್ಧ ಕುಡಿಯುವ ನೀರಿನ ಪೂರೈಕೆಯಾಗುತ್ತಿಲ್ಲ. ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಕುಡಿಯುವ ನೀರಿನ ಘಟಕ ದುರಸ್ತಿಗೊಳಿಸಿ ಅನುಕೂಲತೆ ಕಲ್ಪಿಸಬೇಕು ಎನ್ನುತ್ತಾರೆ ಕಾನೂನು ವಿದ್ಯಾರ್ಥಿ ಶಾಂತಕುಮಾರ್.
ಪಟ್ಟಣದಲ್ಲಿ ಒಟ್ಟು 11 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, ಅದರಲ್ಲಿ 8 ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಇನ್ನುಳಿದ ಮೂರರಲ್ಲಿ ಎರಡು ಘಟಕಗಳು ಕೆಟ್ಟು ನಿಂತಿದ್ದು, ಅವುಗಳನ್ನು ಶೀಘ್ರವೇ ದುರಸ್ತಿಗೊಳಿಸಲಾಗುವುದು. ಸರ್ಕಾರಿ ಆಸ್ಪತ್ರೆ ಮುಂಭಾಗದಲ್ಲಿನ ಘಟಕವನ್ನು ಪಡೆದ ಗುತ್ತಿಗೆದಾರರು ಅದನ್ನು ನಿರ್ವಹಿಸುತ್ತಿಲ್ಲ. ಈ ಬಗ್ಗೆ ಕ್ರಮ ಕೈಗೊಂಡು ಬೇರೆ ಗುತ್ತಿಗೆದಾರರಿಗೆ ನೀಡಲಾಗುವುದು ಎನ್ನುತ್ತಾರೆ ಕಂಪ್ಲಿ ಪುರಸಭೆ ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನ.