ಸ್ವಚ್ಛಂದವಾದ ಪರಿಸರ ಸಿಗುವುದು ಇಂದು ವಿರಳ: ಉಪಲೋಕಾಯುಕ್ತ ಬಿ.ವೀರಪ್ಪ

| Published : Jul 24 2024, 12:17 AM IST

ಸ್ವಚ್ಛಂದವಾದ ಪರಿಸರ ಸಿಗುವುದು ಇಂದು ವಿರಳ: ಉಪಲೋಕಾಯುಕ್ತ ಬಿ.ವೀರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಬೆಟ್ಟಗುಡ್ಡ, ಗಿಡಮರಗಳಿಂದ ಕೂಡಿದ ಸ್ವಚ್ಚಂದವಾದ ಪರಿಸರ ಸಿಗುವುದು ಇಂದು ವಿರಳ. ಅಂತಹ ಸ್ವಚ್ಛ ಪರಿಸರದಿಂದ ನಮಗೆ ಸಿಗುವ ತಂಪು ಅಮ್ಮನ ಮಡಿಲಿನಲ್ಲಿ ಮಲಗಿದಾಗ ಸಿಗುವಂತಹ ತಂಪನ್ನು ಮೀರಿಸುವಂತಿರುತ್ತದೆ. ಅಮ್ಮನ ಮಡಿಲಿನ ತಂಪನ್ನು ನೀಗಿಸುವ ಶಕ್ತಿ ಇರುವುದು ಪರಿಸರಕ್ಕೆ ಮಾತ್ರ. ಇಂದು ಬೆಂಗಳೂರಿನಲ್ಲಿ ನಾವು ಆಕ್ಸಿಜನ್ ಕೊಂಡುಕೊಳ್ಳುವಂತಹ ಪರಿಸ್ಥಿತಿಗೆ ತಲುಪುತ್ತಿದ್ದೇವೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಗಿಡ ಮರಗಳಿಂದ ಕೂಡಿರುವ ಸ್ವಚ್ಛ ಪರಿಸರದಿಂದ ಸಿಗುವ ತಂಪು ಅಮ್ಮನ ಮಡಿಲಿನಲ್ಲಿ ಸಿಗುವ ತಂಪನ್ನೂ ಮೀರಿಸುವಷ್ಟು ಶಕ್ತಿ ಹೊಂದಿದೆ ಎಂದು ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಹಾಗೂ ಉಪಲೋಕಾಯುಕ್ತ ಬಿ.ವೀರಪ್ಪ ಹೇಳಿದರು.

ತಾಲೂಕಿನ ಇಜ್ಜಲಘಟ್ಟ ಗ್ರಾಮದ ಬೆಟ್ಟದ ತಪ್ಪಲಿನಲ್ಲಿ ಬೆಂಗಳೂರಿನ ಮಾತೃ ಫೌಂಡೇಶನ್, ಅರಣ್ಯ ಇಲಾಖೆ ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಹಯೋಗದಲ್ಲಿ ವಿಶ್ವಪರಿಸರ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ 2 ಸಾವಿರ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಬೆಟ್ಟಗುಡ್ಡ, ಗಿಡಮರಗಳಿಂದ ಕೂಡಿದ ಸ್ವಚ್ಚಂದವಾದ ಪರಿಸರ ಸಿಗುವುದು ಇಂದು ವಿರಳ. ಅಂತಹ ಸ್ವಚ್ಛ ಪರಿಸರದಿಂದ ನಮಗೆ ಸಿಗುವ ತಂಪು ಅಮ್ಮನ ಮಡಿಲಿನಲ್ಲಿ ಮಲಗಿದಾಗ ಸಿಗುವಂತಹ ತಂಪನ್ನು ಮೀರಿಸುವಂತಿರುತ್ತದೆ ಎಂದರು.

ಅಮ್ಮನ ಮಡಿಲಿನ ತಂಪನ್ನು ನೀಗಿಸುವ ಶಕ್ತಿ ಇರುವುದು ಪರಿಸರಕ್ಕೆ ಮಾತ್ರ. ಇಂದು ಬೆಂಗಳೂರಿನಲ್ಲಿ ನಾವು ಆಕ್ಸಿಜನ್ ಕೊಂಡುಕೊಳ್ಳುವಂತಹ ಪರಿಸ್ಥಿತಿಗೆ ತಲುಪುತ್ತಿದ್ದೇವೆ. ಮನುಷ್ಯ ಯಾರಾದರೂ ಒಬ್ಬರಿಗೆ ಮಾತ್ರ ಆಶ್ರಯ ನೀಡಬಲ್ಲ. ಆದರೆ, ಒಂದು ಮರ ಅದೆಷ್ಟೊ ಜನರಿಗೆ ಆಶ್ರಯ ನೀಡುತ್ತದೆ ಎಂದರು.

ಮನುಷ್ಯನಿಗಿಂತ ಮರವೇ ಲೇಸು ಎಂಬುದನ್ನು ಅರಿತು ಪ್ರಕೃತಿ ಉಳಿಸುವ ಕೆಲಸಕ್ಕೆ ಮುಂದಾಗಬೇಕು. ವಕೀಲರು ನ್ಯಾಯಾಲಯಕ್ಕೆ ಮಾತ್ರ ಸೀಮಿತವಾಗದೆ ರಾಜ್ಯಾದ್ಯಂತ ಪರಿಸರ ಪ್ರೇಮ ಮೆರೆಯುವಂತಹ ಕೆಲಸಗಳನ್ನು ಮಾಡಬೇಕು ಎಂದರು.

ಮಾತೃ ಫೌಂಡೇಶನ್ ಪದಾಧಿಕಾರಿಗಳು ಬೆಂಗಳೂರಿನಲ್ಲಿದ್ದರೂ ಕೂಡ ತನ್ನ ಮಾತೃನೆಲವನ್ನು ಇಂತಹ ಪುಣ್ಯದ ಕಾಯಕದ ಮೂಲಕ ಗೌರವಿಸುತ್ತಿರುವುದು, ಬರದ ನಾಡನ್ನು ಹಸಿರು ನಾಡಗಿ ಮಾಡುವಂತಹ ಕೆಲಸಕ್ಕೆ ಮುಂದಾಗಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಭ್ರಷ್ಟಾಚಾರ ನಿಯಂತ್ರಿಸಲು ಪ್ರತಿಯೊಬ್ಬರ ಸಹಕಾರ ಅಗತ್ಯ. ಆದರೆ, ಇಂದು ದೇಶ ಭಕ್ತಿ ಮರೆಯಾಗಿ, ಸ್ವಾರ್ಥ, ಭ್ರಷ್ಟಾಚಾರ ಎಲ್ಲಾ ಕಡೆಗಳಲ್ಲಿ ತುಂಬಿ ತುಳುಕುತ್ತಿದೆ. ಇದನ್ನು ತೊಡೆದು ಹಾಕಲು ವಿದ್ಯಾರ್ಥಿಗಳು ದೇಶ ಪ್ರೇಮ ಮೆರೆಯುವ ಜೊತೆಗೆ ನಿಸ್ವಾರ್ಥವನ್ನು ಮೈಗೂಡಿಸಿಕೊಳ್ಳಬೇಕು ಎಂದರು.

ನಾನು ಹಲವು ಕಡೆ ಕೆರೆ, ಅರಣ್ಯ ಪ್ರದೇಶಗಳು ಒತ್ತುವರಿಯಾಗಿರುವುದನ್ನು ಕಂಡಿದ್ದೇನೆ. ಈ ಬೆಟ್ಟದ ಮೇಲೆ ಕಾಣುತ್ತಿರುವ ಕೆರೆ ಮತ್ತು ಅರಣ್ಯವು ಕೂಡ ಒತ್ತುವರಿಯಾಗಿರುವಂತೆ ಕಾಣುತ್ತಿದೆ. ಅರಣ್ಯಾಧಿಕಾರಿಗಳು, ಮತ್ಯಾವುದೇ ಇಲಾಖೆ ಅಧಿಕಾರಿಗಳಾಗಿರಲಿ ರಾಜಕಾರಣಿಗಳ ಒತ್ತಡಕ್ಕೆ ಮಣಿಯದೆ ಮುಲಾಜಿಲ್ಲದೆ ಒತ್ತುವರಿ ತೆರವುಗೊಳಿಸಿ ಪರಿಸರ ಉಳಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಹೈಕೋರ್ಟ್ ನ್ಯಾಯಾಧೀಶ ನ್ಯಾ.ಬಿ.ಎಂ.ಶ್ಯಾಮಪ್ರಸಾದ್ ಮಾತನಾಡಿ, ಪರಿಸರ ಉಳಿವಿನ ಜತೆಗೆ ರಕ್ಷಣೆಯ ಪ್ರಯತ್ನಗಳು ಜೀವಂತವಾಗಿಡಲು ವಿದ್ಯಾರ್ಥಿಗಳೇ ನಮಗೆ ಆಶಾಕಿರಣಯ ವರ್ಷದ 365 ದಿನಗಳಲ್ಲಿ ಅಷ್ಟು ದಿನವು ನಮ್ಮ ಬಗ್ಗೆ ಯೋಚಿಸಿತ್ತೇವೆ. ಇದರಲ್ಲಿ ಒಂದು ದಿನ ಪರಿಸರದ ಕಾಳಜಿ ಕಡೆಗೂ ಗಮನಿಸಿ ಪ್ರಕೃತಿ ಉಳಿಸುವ ಕೆಲಸವಾಗಲಿ ಎಂದರು.

ಒಂದು ಕೆಲಸ ಪೂರ್ಣಗೊಳಿಸದಿದ್ದರೆ ಅದಕ್ಕೆ ಸಾರ್ಥಕತೆ ಇರುವುದಿಲ್ಲ. ಆದ್ದರಿಂದ ಗಿಡ ನೆಟ್ಟು ಅಷ್ಟಕ್ಕೆ ಬಿಡದೆ ಪೋಷಣೆ ಮಾಡಬೇಕು. ಜೊತೆಗೆ ಪ್ರತಿವರ್ಷ ಇಂತಹ ಕಾರ್ಯಕ್ರಮ ನಿರಂತರವಾಗಿ ಸಾಗಲಿ ಎಂದರು.

ವಿಶ್ವಪರಿಸರ ದಿನದ ಅಂಗವಾಗಿ ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಮಾತೃ ಪೌಂಢೇಶನ್ ಪದಾಧಿಕಾರಿಗಳ ಜತೆಗೂಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎನ್‌ಎಸ್‌ಎಸ್‌ನ 50 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಜ್ಜಲಘಟ್ಟ ಗ್ರಾಮದ ಬೆಟ್ಟ ಹಾಗೂ ಬೆಟ್ಟದ ತಪ್ಪಲಿನಲ್ಲಿ ವಿವಿಧ ಬಗೆಯ 2 ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೆಟ್ಟರು. ಗಿಡಗಳನ್ನು ನೆಡುವ ಜೊತೆಗೆ ಆ ಗಿಡಗಳ ಕುರಿತಾಗಿ ಅರಣ್ಯ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಕೂಡ ಪಡೆದುಕೊಂಡರು.

ಹೈಕೋರ್ಟ್ ನ್ಯಾಯಾಧೀಶರಾದ ಸಂಜಯ್‌ಗೌಡ, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್‌ ಸುಬ್ಬಾರೆಡ್ಡಿ ಮತ್ತು ಡಿಸಿಎಫ್ ಶಂಕರೇಗೌಡ ಮಾತನಾಡಿದರು. ನಾಗಮಂಗಲದ ನ್ಯಾಯಾಧೀಶರಾದ ಯೋಗೇಶ್, ಸಿದ್ದಪ್ಪಾಜಿ, ನಾಗಮಂಗಲ ವಕೀಲರ ಸಂಘದ ಅಧ್ಯಕ್ಷ ಮಹದೇವ್, ಮಾತೃ ಫೌಂಡೇಶನ್ ಸಂಸ್ಥಾಪಕ ಹಾಗೂ ಹೈಕೋರ್ಟ್ ವಕೀಲ ಆರ್.ಚಂದ್ರುಕುಮಾರ್, ಹೈಕೋರ್ಟ್ ವಕೀಲರಾದ ರವಿಶಂಕರ್, ಮಿಥುನ್, ಹರೀಶ್, ಶ್ರೀಕಂಠೇಗೌಡ, ಆರ್.ಎಸ್.ರವಿ, ಪಾಂಡವಪುರ ಉಪ ವಿಭಾಗಾಧಿಕಾರಿ ನಂದೀಶ್, ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಶಿವಪ್ಪ, ಎಸಿಎಫ್ ಶಿವರಾಮು, ಆರ್‌ಎಫ್‌ಒ ಮಂಜುನಾಥ್, ತಾಲೂಕು ಕಸಾಪ ಅಧ್ಯಕ್ಷ ಚಂದ್ರಶೇಖರ್ ಸೇರಿದಂತೆ ಹಲವರು ಇದ್ದರು.