ಸುಮಾರು 30 ಸಾವಿರಕ್ಕೂ ಹೆಚ್ಚು ಜನಸಂಖ್ಯೆಹೊಂದಿರುವ ಮುಂಡರಗಿ ಪಟ್ಟಣದಲ್ಲಿ 23 ವಾರ್ಡುಗಳಿವೆ. ಸ್ವಚ್ಛ ಭಾರತ ಮಿಷನ್ ಯೋಜನೆ ಜಾರಿಗೂ ಪೂರ್ವದಲ್ಲಿ ಸಾವಿರಾರು ಕುಟುಂಬಗಳು ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಿಕೊಂಡಿದ್ದಾರೆ.

ಶರಣು ಸೊಲಗಿಮುಂಡರಗಿ: ಸರ್ಕಾರ ಬಯಲು ಬಹಿರ್ದೆಸೆ ಮುಕ್ತ ಮಾಡಬೇಕೆಂದು ಸ್ವಚ್ಛ ಭಾರತ ಮಿಷನ್ ಯೋಜನೆಯಡಿಯಲ್ಲಿ ಲಕ್ಷಾಂತರ ರು. ಖರ್ಚಿನಲ್ಲಿ ಸಾವಿರಾರು ಶೌಚಾಲಯಗಳನ್ನು ನಿರ್ಮಿಸಿದ್ದರೂ ಪಟ್ಟಣದ ಪ್ರತಿ ಪ್ರಮುಖ ರಸ್ತೆಗಳಲ್ಲಿ ಈಗಲೂ ಬಯಲು ಬಹಿರ್ದೆಸೆ ಮಾಡುವುದು ಕಂಡುಬರುತ್ತಿದೆ.ಕೇಂದ್ರ ಸರ್ಕಾರ ದೇಶವನ್ನು ಸಂಪೂರ್ಣವಾಗಿ ಬಯಲು ಬಹಿರ್ದೆಸೆ ಮುಕ್ತ ಮಾಡಬೇಕೆನ್ನುವ ಉದ್ದೇಶದಿಂದ 2014ರ ಅ. 2ರಿಂದ ಸ್ವಚ್ಛ ಭಾರತ ಮಿಷನ್ ಯೋಜನೆ ಪ್ರಾರಂಭಿಸಿ ಈ ಯೋಜನೆಯ ಅಡಿಯಲ್ಲಿ ವೈಯಕ್ತಿಕ ಶೌಚಾಲಯಗಳ ನಿರ್ಮಾಣಕ್ಕಾಗಿ ಹಣ ನೀಡುವ ಮೂಲಕ ಜನತೆ ತಮ್ಮ ತಮ್ಮ ಮನೆಗಳಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ಅವಕಾಶ ಮಾಡಿಕೊಟ್ಟು ಅದಕ್ಕಾಗಿ ₹12 ಸಾವಿರ ಹಾಗೂ ₹20 ಸಾವಿರ ಹಣಕಾಸಿನ ನೆರವನ್ನೂ ನೀಡುತ್ತಾ ಬರಲಾಗಿದೆ.ಸುಮಾರು 30 ಸಾವಿರಕ್ಕೂ ಹೆಚ್ಚು ಜನಸಂಖ್ಯೆಹೊಂದಿರುವ ಮುಂಡರಗಿ ಪಟ್ಟಣದಲ್ಲಿ 23 ವಾರ್ಡುಗಳಿವೆ. ಸ್ವಚ್ಛ ಭಾರತ ಮಿಷನ್ ಯೋಜನೆ ಜಾರಿಗೂ ಪೂರ್ವದಲ್ಲಿ ಸಾವಿರಾರು ಕುಟುಂಬಗಳು ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಿಕೊಂಡಿದ್ದಾರೆ. 2014ರಲ್ಲಿ ಈ ಯೋಜನೆ ಜಾರಿಗೆ ಬಂದ ನಂತರ 2018ರ ವರೆಗೆ ಪುರಸಭೆ ವ್ಯಾಪ್ತಿಯಲ್ಲಿ ಮೊದಲ ಹಾಗೂ ಎರಡನೇ ಹಂತದಲ್ಲಿ ಸೇರಿ ಸುಮಾರು 1500ರಕ್ಕೂ ಹೆಚ್ಚು ಕುಟುಂಬಗಳು ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಿಕೊಂಡಿದ್ದಾರೆ. ಪಟ್ಟಣದ ವಿವಿಧ ವಾರ್ಡುಗಳಲ್ಲಿ ಸೇರಿ ಒಟ್ಟು ಸುಮಾರು 16 ಸಾಮೂಹಿಕ ಶೌಚಾಲಯಗಳಿದ್ದು, ಅವುಗಳಲ್ಲಿ ಸುಮಾರು 10 ಶೌಚಾಲಯಗಳು ನಿತ್ಯವೂ ಕಾರ್ಯನಿರ್ವಹಿಸುತ್ತಿದ್ದು, 3 ಶೌಚಾಲಯಗಳು ದುರಸ್ತಿಯಲ್ಲಿದ್ದು, ಉಳಿದ 3 ಶೌಚಾಲಯಗಳು ನಿರ್ಮಾಣದ ಕೊನೆಯ ಹಂತದಲ್ಲಿವೆ.

ಬಯಲು ಬಹಿರ್ದೆಸೆ: ಪುರಸಭೆ ವ್ಯಾಪ್ತಿಯಲ್ಲಿ ಸಾವಿರಾರು ವೈಯಕ್ತಿಕ ಹಾಗೂ 10 ಸಾಮೂಹಿಕ ಶೌಚಾಲಯಗಳು ಕಾರ್ಯನಿರ್ವಹಿಸುತ್ತಿದ್ದರೂ ಗದಗ ಮುಂಡರಗಿ ರಸ್ತೆ, ಘಟ್ಟಿರಡ್ಡಿಹಾಳ ರಸ್ತೆ, ರಾಮೇನಹಳ್ಳಿ ರಸ್ತೆ, ಶಿರೋಳ ರಸ್ತೆ, ಬ್ಯಾಲವಾಡಗಿ ರಸ್ತೆ, ಎಸ್.ಎಸ್. ಪಾಟೀಲ ನಗರ, ಹೆಸರೂರು ರಸ್ತೆ ಆಶ್ರಯ ಕಾಲನಿ, ಹೊಸ ಎಪಿಎಂಸಿ ರಸ್ತೆ, ಹಳೆ ಎಪಿಎಂಸಿ ಆವರಣ, ತುಂಗಭದ್ರಾ ನಗರ, ಕೊಪ್ಪಳ ರಸ್ತೆ ಸೇರಿದಂತೆ ಪಟ್ಟಣದ ವಿವಿಧ ಭಾಗಗಳಲ್ಲಿನ ರಸ್ತೆಗಳಲ್ಲಿ ಬೆಳಗಿನ ಜಾವ ತೆರಳಿದರೆ ಮಹಿಳೆಯರು, ಪುರುಷರು ಹಾಗೂ ಮಕ್ಕಳು ಸೇರಿದಂತೆ ಅನೇಕರು ರಸ್ತೆಗಳ ಅಕ್ಕಪಕ್ಕದಲ್ಲಿ, ರಸ್ತೆ ಪಕ್ಕದ ಜಮೀನುಗಳಲ್ಲಿ, ಜಲಮಂಡಳಿ ಕಛೇರಿ ಆವರಣ, ತೋಟಗಾರಿಕೆ ಕಚೇರಿ ಆವರಣ ಹಾಗೂ ಕೃಷಿ ಇಲಾಖೆ ಕಚೇರಿ ಅಕ್ಕಪಕ್ಕ ಬಯಲು ಬಹಿರ್ದೆಸೆ ಮಾಡುತ್ತಿರುವುದು ಕಂಡುಬರುತ್ತಿದೆ.ಬಳಕೆ ಮಾಡುತ್ತಿಲ್ಲ: ಪಟ್ಟಣದ 23 ವಾರ್ಡುಗಳಲ್ಲಿ ಸ್ವಚ್ಛ ಭಾರತ ಮಿಷನ್ ಯೋಜನೆಯಡಿಯಲ್ಲಿ ಸಾವಿರಾರು ಜನ ವೈಯಕ್ತಿಕ ಶೌಚಾಲಯಗಳನ್ನು ಮಾಡಿಕೊಂಡಿದ್ದರೂ ಅನೇಕರು ಅವುಗಳನ್ನು ಬಳಕೆ ಮಾಡದೇ ಕೀಲಿ ಹಾಕಿದ್ದಾರೆ. ಇನ್ನು ಕೆಲವೆಡೆ ಸ್ಟೋರ್‌ ರೂಂಗಳನ್ನಾಗಿ ಮಾಡಿ ನಿತ್ಯವೂ ಬಯಲು ಬಹಿರ್ದೆಸೆಗೆ ಹೋಗುತ್ತಾರೆ. ಬಯಲಿಗೆ ಹೋಗುವುದನ್ನು ತಪ್ಪಿಸಿ ಶೌಚಾಲಯ ಬಳಕೆ ಮಾಡಿಕೊಳ್ಳುವಂತೆ ಪುರಸಭೆ ಕಠಿಣ ಕ್ರಮ ಕೈಗೊಳ್ಳಬೇಕೆನ್ನುವುದು ಪರಿಸರಪ್ರಿಯರ ಅಭಿಪ್ರಾಯವಾಗಿದೆ.

ಸ್ವಚ್ಛತೆಯ ಕೊರತೆ: ಪಟ್ಟಣದ ತಹಸೀಲ್ದಾರ್ ಕಚೇರಿ ಎದುರಿನಲ್ಲಿರುವ ಸಾಮೂಹಿಕ ಶೌಚಾಲಯದ ಎದುರಿನಲ್ಲಿ ಸಾಕಷ್ಟು ಕಸ ಹಾಗೂ ಮುಳ್ಳಿನ ಗಿಡಗಳು ಹುಟ್ಟಿವೆ. ರಾತ್ರಿ ಸಮಯದಲ್ಲಿ ಮಹಿಳೆಯರು ಹುಳು ಹುಪ್ಪಡಿಗಳ ಭಯದಿಂದ ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡಬೇಕಾಗಿದೆ. ಅಲ್ಲದೇ ಹಳೆ ಎಪಿಎಂಸಿ ಹತ್ತಿರ ಪೆಟ್ರೋಲ್ ಬಂಕ್ ಸಮೀಪವಿರುವ ಶೌಚಾಲಯದಲ್ಲಿ ಸ್ವಚ್ಛತೆಯ ಕೊರತೆಯಿಂದ ಗಬ್ಬು ವಾಸನೆ ಬೀರುತ್ತಿದೆ. ಇವುಗಳ ಸ್ವಚ್ಛತೆಗೆ ಹಾಗೂ ಕಸ ತೆಗೆಸಲು ಪುರಸಭೆ ಕ್ರಮ ಕೈಗೊಳ್ಳಬೇಕಿದೆ.

ಸ್ವಚ್ಛ ಭಾರತ ಮಿಷನ್ ಯೋಜನೆಯಡಿಯಲ್ಲಿ ಸಾವಿರಾರು ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಯಾರು ಶೌಚಾಲಯವಿದ್ದೂ ಬಳಕೆ ಮಾಡುತ್ತಿಲ್ಲವೋ ಅವರಿಗೆ ತಿಳಿವಳಿಕೆ ನೀಡಿ ಬಳಕೆಗೆ ಹಚ್ಚಲಾಗುವುದು. ದುರಸ್ತಿಯಲ್ಲಿರುವ ಸಾಮೂಹಿಕ ಶೌಚಾಲಯಗಳನ್ನು ಶೀಘ್ರವಾಗಿ ರಿಪೇರಿ‌ ಮಾಡಿಸಿ ಬಳಕೆಗೆ‌ ಅನುಕೂಲ ಮಾಡಿಕೊಡಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ ತಿಳಿಸಿದರು.