ಸ್ವಚ್ಛ ಕೊಡಗು ಸುಂದರ ಕೊಡಗು ಸ್ವಚ್ಛತಾ ಅಭಿಯಾನವು ನಗರದ ಮುಖ್ಯರಸ್ತೆಯಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಮಡಿಕೇರಿಯ ಸಂತ ಜೋಸೆಫರ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲಾ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಂದ ‘ಸ್ವಚ್ಛ ಕೊಡಗು ಸುಂದರ ಕೊಡಗು’ ಸ್ವಚ್ಛತಾ ಅಭಿಯಾನವು ನಗರದ ಮುಖ್ಯರಸ್ತೆಯಲ್ಲಿ ಶನಿವಾರ ನಡೆಯಿತು.

ನಗರದ ರಾಜಾಸೀಟು ಮುಂಭಾಗದಲ್ಲಿ ನಗರ ಪೊಲೀಸ್ ಅಧಿಕಾರಿ ರಾಧಾ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು. ನಂತರ ನಗರದ ಮುಖ್ಯರಸ್ತೆಗಳ ಇಕ್ಕೆಲಗಳಲ್ಲಿ ತ್ಯಾಜ್ಯ ಕಸವನ್ನು ಹೆಕ್ಕಿ ವಿಲೇವಾರಿ ಮಾಡಲಾಯಿತು.

ಬಳಿಕ ನಗರದ ಜನರಲ್ ತಿಮ್ಮಯ್ಯ ಸ್ಮಾರಕ ಭವನಕ್ಕೆ ತೆರಳಿದ ವಿದ್ಯಾರ್ಥಿಗಳು ಅಲ್ಲಿಯೂ ಸ್ವಚ್ಛತಾ ಅಭಿಯಾನ ಕೈಗೊಂಡರು.

ಸಂತ ಜೋಸೆಫರ ಗೈಡ್ ಶಿಕ್ಷಕಿ ಎನ್.ಪಿ.ಪ್ರೇಮ, ಶಿಕ್ಷಕಿಯರಾದ ಡಯನಾ ಚಂಗಪ್ಪ, ಪ್ರದೀಪ್, ಸ್ಕೌಟ್ಸ್‍ನ ಜಿಲ್ಲಾ ಸಹಾಯಕ ಆಯುಕ್ತರಾದ ಗಣೇಶ್, ಸಂತ ಜೋಸೆಫರ ಆಂಗ್ಲ ಮಾಧ್ಯಮ ಶಾಲಾ ಮುಖ್ಯ ಶಿಕ್ಷಕಿ ಪಿಲೋಮಿನಾ ಡಿ’ಸೋಜ, ಜಿಲ್ಲಾ ಸಂಘಟಕರಾದ ದಮಯಂತಿ, ಸಂತ ಜೋಸೆಫರ ಶಾಲಾ ಶಿಕ್ಷಕರಾದ ಮೋಹಿನಿ ಸಿ.ಸಿ., ದಿವ್ಯ, ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ್ ಪಾಲ್ಗೊಂಡಿದ್ದರು.

ಈ ಸಂದರ್ಭ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಮಡಿಕೇರಿಯನ್ನು ಸ್ವಚ್ಛವಾಗಿ ಇರಿಸಿ ಎಂಬ ಫಲಕಗಳನ್ನು ಹಿಡಿದು ಸ್ವಚ್ಛತೆಯ ಘೋಷವಾಕ್ಯಗಳನ್ನು ಮೊಳಗಿಸಿದರು. ರಾಜ್ಯ ಸಂಸ್ಥೆಯ ಮುಖ್ಯ ಆಯುಕ್ತರಾದ ಪಿ.ಜಿ.ಆರ್.ಸಿಂಧ್ಯಾ ಅವರ ನಿರ್ದೇಶನದಂತೆ ಕೊಡಗು ಸ್ಕೌಟ್ಸ್ ಮತ್ತು ಗೈಡ್ಸ್ ಆಯುಕ್ತರಾದ ಕೆ.ಟಿ.ಬೇಬಿ ಮ್ಯಾಥ್ಯೂ ಅವರ ಮಾರ್ಗದರ್ಶನದಲ್ಲಿ ಈ ಅಭಿಯಾನ ಹಮ್ಮಿಕೊಳ್ಳಲಾಯಿತು.