ರಾಜ ಕಾಲುವೆ ಸ್ವಚ್ಛಮಾಡಿ, ಅನಾಹುತ ತಪ್ಪಿಸಿ

| Published : May 23 2024, 01:18 AM IST / Updated: May 23 2024, 11:31 AM IST

ಸಾರಾಂಶ

ಕಳೆದ ಒಂದೂವರೆ ತಿಂಗಳಿಂದ ನಿರಂತರವಾಗಿ ಚುನಾವಣೆಯ ಕೆಲಸ ಮುಂದಿಟ್ಟುಕೊಂಡಿದ್ದ ನಗರಸಭೆಯ ಅಧಿಕಾರಿಗಳು, ಯಾವುದೇ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಆದ್ಯತೆ ನೀಡಿಲ್ಲ

ಶಿವಕುಮಾರ ಕುಷ್ಟಗಿ 

ಗದಗ :  ಬೇಸಿಗೆ ಮಳೆ ಆಗಾಗ್ಗೆ ಅಬ್ಬರಿಸುತ್ತಿದೆ. ಇನ್ನೇನು ಮಳೆಗಾಲ ಪ್ರಾರಂಭಿಕ ಹಂತದಲ್ಲಿದೆ, ಮಳೆಗಾಲದಲ್ಲಿ ದೊಡ್ಡ ಪ್ರಮಾಣದಲ್ಲಿ ಅನಾಹುತ ಸೃಷ್ಟಿಸುವ ರಾಜಕಾಲುವೆಗಳೆಲ್ಲ ಹೂಳು, ಕಸ, ಸೇರಿದಂತೆ ವಿವಿಧ ತ್ಯಾಜ್ಯಗಳಿಂದ ತುಂಬಿ ಹೋಗಿದ್ದು, ಸಕಾಲದಲ್ಲಿಯೇ ಅವುಗಳ ಸ್ವಚ್ಛತೆಗೆ ಆದ್ಯತೆ ನೀಡಬೇಕಾದ ನಗರಸಭೆಯ ಅಧಿಕಾರಿಗಳು ಮಾತ್ರ ಈ ಸಮಸ್ಯೆ ಗಂಭೀರವಾಗಿ ಪರಿಗಣಿಸಿದಂತಿಲ್ಲ.

ಕಳೆದ ಒಂದೂವರೆ ತಿಂಗಳಿಂದ ನಿರಂತರವಾಗಿ ಚುನಾವಣೆಯ ಕೆಲಸ ಮುಂದಿಟ್ಟುಕೊಂಡಿದ್ದ ನಗರಸಭೆಯ ಅಧಿಕಾರಿಗಳು, ಯಾವುದೇ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಆದ್ಯತೆ ನೀಡಿಲ್ಲ, ಚರಂಡಿಗಳ ಸ್ವಚ್ಛತೆ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಬಂದಿದ್ದರೂ ಚುನಾವಣೆ ನೆಪ ಹೇಳಿ ಸಾಗ ಹಾಕುತ್ತಿದ್ದರು.

ಆದರೆ, ಲೋಕಸಭೆ ಚುನಾವಣೆ ಮತದಾನ ಮುಗಿದು ಕೆಲ ವಾರಗಳು ಕಳೆದರೂ, ನಗರಸಭೆ ಸಿಬ್ಬಂದಿ ಮಾತ್ರ ಚುನಾವಣಾ ಮೂಡ್‌ನಿಂದ ಹೊರ ಬಂದಿಲ್ಲ. ಹೀಗಾಗಿ ಹಲವು ತಿಂಗಳಿಂದ ಅವಳಿ ನಗರದಲ್ಲಿ ಚರಂಡಿ ಹಾಗೂ ರಾಜ ಕಾಲುವೆಗಳ ಸ್ವಚ್ಛತೆ ನಿರ್ವಹಣೆ ಬಗ್ಗೆ ನಗರಸಭೆ ಅಧಿಕಾರಿಗಳು ಗಮನ ಹರಿಸಿಲ್ಲ ಎನ್ನುವುದು ಅವಳಿ ನಗರವನ್ನೊಮ್ಮೆ ಸಂಚರಿಸಿದರೆ ತಿಳಿದು ಬರುತ್ತದೆ.

ಕೆಲೆವೆಡೆ ಗಂಭೀರ ಸಮಸ್ಯೆ

ಗದಗ-ಬೆಟಗೇರಿ ಅವಳಿ ನಗರದಲ್ಲಿ ಭೀಷ್ಮ ಕೆರೆ ಕೋಡಿಯಿಂದ ಹಿಡಿದು ಅಜಂತಾ ಹೋಟೆಲ್, ಕಮ್ಮಾರ ಸಾಲು, ಗೌರಿ ಶಂಕರ ಲಾಡ್ಜ್, ಡಿಸಿ ಮಿಲ್ ರಸ್ತೆ, ರೈಲ್ವೆ ಟ್ರ್ಯಾಕ್, ಎಎಸ್ಎಸ್ ಕಾಲೇಜ್, ಬಣ್ಣದ ನಗರ, ಹುಯಿಲಗೋಳ ರಸ್ತೆ ಮಾರ್ಗವಾಗಿ ರಾಜಕಾಲುವೆ ಹರಿಯುತ್ತದೆ. ಮತ್ತೊಂದು ಕನ್ಯಾಳ ಅಗಸಿಯಿಂದ ಆರಂಭಗೊಂಡು ಅಗಸಿ ಕೆರೆ, ಗಣೇಶ ನಗರ, ಶಿವರತ್ನ ಪ್ಯಾಲೇಸ್ ಮಾರ್ಗವಾಗಿ ಹರಿಯುತ್ತದೆ. ಇನ್ನೊಂದು ಎಪಿಎಂಸಿಯಿಂದ ಆರಂಭಗೊಳ್ಳುವ ರಾಜ ಕಾಲುವೆ ವಿಡಿಎಸ್ಟಿಸಿ ಶಾಲೆ ಹಿಂಭಾಗ, ಜಿಆರ್ ಹೋಟೆಲ್ ಹತ್ತಿರ, ಕೆಸಿ ಪಾರ್ಕ್ ಹಿಂದುಗಡೆ ಮಾರ್ಗವಾಗಿ ಹಾದು ಹೋಗುತ್ತದೆ. ಪ್ರತಿಯೊಂದು ರಾಜಕಾಲುವೆ 5 ರಿಂದ 6 ಕಿಮೀ ಉದ್ದ ಹರಿಯುತ್ತದೆ, ಅವಳಿ ನಗರದಲ್ಲಾಗುವ ಮಳೆಯ ನೀರು ಇದೇ ಕಾಲುವೆಗಳ ಮೂಲಕವೇ ಹಾಯ್ದು ಹೋಗಬೇಕು. ಆದರೆ ಇವುಗಳ ನಿರ್ವಹಣೆಯೇ ಸರಿಯಾಗಿಲ್ಲ. ಈ ಎಲ್ಲ ರಾಜಕಾಲುವೆಗಳು ದೊಡ್ಡ ಪ್ರಮಾಣದಲ್ಲಿ ದೊಡ್ಡ ದೊಡ್ಡವರೇ ಒತ್ತುವರಿ ಮಾಡಿದ್ದು, ರಾಜಕಾಲುವೆ ಸ್ವಚ್ಛಗೊಳಿಸಲು ಸಾಧ್ಯವಿಲ್ಲದಂತೆ ತಮ್ಮ ಪ್ರಭಾವ ಬಳಸಿ ರಾಜಕಾಲುವೆಗಳ ಮೇಲೆ ಅಂಗಡಿಗಳನ್ನು ನಿರ್ಮಿಸಿಕೊಂಡಿದ್ದಾರೆ.

ಬೆಟಗೇರಿ ಭಾಗದ ಬಳ್ಳಾರಿ ಅಂಡರ್ ಬ್ರಿಡ್ಜ್ನಲ್ಲಿ ಹಲವಾರು ವರ್ಷಗಳಿಂದ ನೀರು ನಿಂತು ಸಾರ್ವಜನಿಕರ ಸಂಚಾರಕ್ಕೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈಗಾಗಲೇ ಈ ಕುರಿತು ಅನೇಕ ಹೋರಾಟ ನಡೆಸಿದ್ದೇವೆ, ಮನವಿ ಮಾಡಿದ್ದೇವೆ ಆದರೂ ಅಧಿಕಾರಿಗಳು ಮಾತ್ರ ಇದಕ್ಕೆ ಶಾಶ್ವತ ಕ್ರಮ ತೆಗೆದುಕೊಳ್ಳುತ್ತಿಲ್ಲ, ಮಳೆಗಾಲ ಪ್ರಾರಂಭವಾಗುವ ಪೂರ್ವದಲ್ಲಿ ಎಲ್ಲ ರಾಜಕಾಲುವೆ ಸ್ವಚ್ಛಗೊಳಿಸಿ, ಮಳೆ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡಬೇಕು ಎಂದು ಬೆಟಗೇರಿ ರೇಲ್ವೆ ಹೋರಾಟ ಸಮಿತಿ ಅಧ್ಯಕ್ಷ ಗಣೇಶಸಿಂಗ್ ಬ್ಯಾಳಿ ಹೇಳಿದರು.

ಅವಳಿ ನಗರದಲ್ಲಿನ ರಾಜಕಾಲುವೆಗಳ ಹೂಳೆತ್ತುವ ಮತ್ತು ತ್ಯಾಜ್ಯ ವಿಲೇವಾರಿ ಕಾರ್ಯ ಆರಂಭಿಸಲಾಗುತ್ತದೆ. ನಗರದ ವಿವಿಧೆಡೆ ಇರುವ ತ್ಯಾಜ್ಯಗಳ ವಿಲೇವಾರಿಗೂ ಕ್ರಮ ತೆಗೆದುಕೊಳ್ಳಲಾಗಿದೆ. ರಾಜಕಾಲುವೆ ಒತ್ತುವರಿ, ಸ್ವಚ್ಛತೆ ಕುರಿತು ಗಮನ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪ್ರಭಾರ ಪೌರಾಯುಕ್ತ ಪ್ರಶಾಂತ ವರಗಪ್ಪನವರ ಹೇಳಿದರು.