ಸಾರಾಂಶ
ಎನ್. ನಾಗೇಂದ್ರಸ್ವಾಮಿ
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲಕೊಳ್ಳೇಗಾಲ ಕಬಿನಿ ಇಲಾಖೆಯಲ್ಲಿ ಕ್ಲೀನರ್ ಹುದ್ದೆಯಲ್ಲಿರುವ ವ್ಯಕ್ತಿಯೊಬ್ಬರು ಪರವಾನಗಿ ಹೊಂದಿದ್ದರೂ ಸಹ ಅವರಿಗೆ ಇಲಾಖಾ ವಾಹನ ನೀಡದೆ ಮತ್ತೋರ್ವ ವಾಹನ ಚಾಲಕರನ್ನು ನೇಮಿಸಿಕೊಂಡು ಇಲಾಖೆ ಬೊಕ್ಕಸಕ್ಕೆ ನಷ್ಟವುಂಟು ಮಾಡುತ್ತಿರುವ ಬೆಳವಣಿಗೆ ಕಬಿನಿ ಕಚೇರಿಯಿಂದ ತಡವಾಗಿ ಬೆಳಕಿಗೆ ಬಂದಿದೆ.ಕಾಮರಾಜ್ ಎಂಬವರು 2 ದಶಕಗಳಿಂದಲೂ ಕ್ಲೀನರ್ ಆಗಿ ಕಬಿನಿ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದು ಅವರು ಕಳೆದ 10 ವರ್ಷಗಳ ಹಿಂದೆಯೇ ತರಬೇತಿ ಹೊಂದಿದ ವಾಹನ ಚಾಲಕರಾಗಿದ್ದಾರೆ. ವಾಹನ ಚಾಲನೆ ತರಬೇತಿ ಹೊಂದಿದ್ದರೂ ಸಹ ಈಗಿನ ಅಧಿಕಾರಿಗಳು ಅವರಿಗೆ ಇಲಾಖಾ ವಾಹನ ನೀಡದೆ ಅನ್ಯ ವ್ಯಕ್ತಿಯನ್ನು ನೇಮಿಸಿಕೊಂಡು ಆತನಿಗೆ 10ರಿಂದ 15ಸಾವಿರ ತನಕ ಸಂಬಳ ಪಾವತಿಸುವ ಮೂಲಕ ಸರ್ಕಾರದ ಬೊಕ್ಕಸಕ್ಕೆ ಪ್ರತಿ ವರ್ಷ ಲಕ್ಷಾಂತರ ನಷ್ಟವುಂಟು ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಇತ್ತ ಇಲಾಖೆಯ ನೌಕರ (ಕ್ಲೀನರ್) ವಾಹನ ಪರವಾನಗಿ ಇದ್ದರೂ ಸಂಬಂಧಪಟ್ಟ ಕಬಿನಿ ಇಲಾಖೆಯ ಎಂಜಿನಿಯರ್ ಕೆಲಸ ನೀಡದ ಹಿನ್ನೆಲೆ ಅವರು ಕಚೇರಿಗೆ ಆಗಮಿಸಿ ಹಾಜರಾತಿ ಪುಸ್ತಕಕ್ಕೆ ಸಹಿ ಹಾಕಿ ಕಚೇರಿಯ ಸಮೀಪದಲ್ಲಿ ಕೈಕಟ್ಟಿ ಕೂರುವಂತಾಗಿದೆ. ಏನಿದು ಬೆಳವಣಿಗೆ?: ಕಬಿನಿ ಕಚೇರಿಯಲ್ಲಿ ಕಳೆದ ಎರಡೂವರೆ ದಶಕಗಳಿಗೂ ಹೆಚ್ಚು ಕಾಲ ಕಾಮರಾಜು ಎಂಬ ಡಿ ಗ್ರೂಪ್ ನೌಕರರೊಬ್ಬರು ಕ್ಲೀನರ್ ಆಗಿ ನೇಮಕಗೊಂಡು ಕೆಲಸ ನಿರ್ವಹಿಸಿರುತ್ತಾರೆ. ಅವರು ಇಲಾಖಾ ಲಾರಿಯಲ್ಲಿ ಕ್ಲೀನರ್ ಆಗಿದ್ದರು. ಆದರೆ ಇಲಾಖೆ ಲಾರಿಗಳು ಕೆಟ್ಟು ನಿಂತ ಕಾರಣ ಹಿಂದಿನ ಅಧಿಕಾರಿಗಳು 2015 ರಿಂದ ಹಾಲಿ ಕ್ಲೀನರ್ ಅವರಿಗೆ ಚಾಲನೆಗೆ ವಾಹನ ಪರವಾನಗಿ ಇರುವ ಕಾರಣ ಆತನನ್ನೆ ಚಾಲಕನನ್ನಾಗಿ ನೇಮಿಸಿಕೊಂಡು ಇಲಾಖಾ ವಾಹನ ನೀಡಲಾಗಿತ್ತು. ಆದರೆ 2022ರ ನಂತರ ಬಂದ ಎಂಜಿನಿಯರ್ ರಮೇಶ್ ಎಂಬವರು ಕಾಮರಾಜುಗೆ ವಾಹನ ನೀಡದ ಕಾರಣ, ಬೇಸತ್ತ ಅವರು ಇತ್ತ ವಾಹನ ಚಾಲನೆಗೂ ಅವಕಾಶವಿಲ್ಲದೆ, ಅತ್ತ ಕ್ವೀನರ್ ಕೆಲಸವೂ ಇಲ್ಲದ ಕಾರಣ ಕೇವಲ ಕೈಕಟ್ಟಿ ಕೂರುವಂತಾಗಿದೆ. ಇದು ಅಧಿಕಾರಿಗಳ ನಿರ್ಲಕ್ಷ್ಯಕ್ಕಿಡಿದ ಕೈಗನ್ನಡಿಯಾಗಿದ್ದು ಇನ್ನಾದರೂ ಇತ್ತ ಹಿರಿಯ ಅಧಿಕಾರಿಗಳು ಗಮನಹರಿಸಬೇಕಿದೆ.