ಹತ್ತನೇ ವರ್ಷದ ಸ್ವಚ್ಛತಾ ಅಭಿಯಾನ ಸಪ್ತಾಹ ಅಂಗವಾಗಿ ಕುಶಾಲನಗರದ ವಿವಿಧೆಡೆ ದೇವಾಲಯಗಳು ಹಾಗೂ ಕಾವೇರಿ ನದಿ ತಟಗಳ ಸ್ವಚ್ಛತಾ ಕಾರ್ಯಕ್ರಮಗಳು ಜರುಗಿದವು.
ಕುಶಾಲನಗರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಹತ್ತನೇ ವರ್ಷದ ಸ್ವಚ್ಛತಾ ಅಭಿಯಾನ ಸಪ್ತಾಹ ಅಂಗವಾಗಿ ಕುಶಾಲನಗರದ ವಿವಿಧೆಡೆ ದೇವಾಲಯಗಳು ಹಾಗೂ ಕಾವೇರಿ ನದಿ ತಟಗಳ ಸ್ವಚ್ಛತಾ ಕಾರ್ಯಕ್ರಮಗಳು ಜರುಗಿದವು.
ಕುಶಾಲನಗರದ ಮಾದಾಪಟ್ಟಣ ಬಳಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್ ಎದುರುಗಡೆ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಕಾರ್ಯಕ್ರಮ ನಡೆಯಿತು.ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ, ಕುಶಾಲನಗರ ಪುರಸಭೆ ಮತ್ತು ಕುಶಾಲನಗರ ಸರಕಾರಿ ಪಾಲಿಟೆಕ್ನಿಕ್ ಎನ್ ಎಸ್ ಎಸ್ ತಂಡದ ಸಹಯೋಗದೊಂದಿಗೆ ಕಾವೇರಿ ನದಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ನದಿ ತಟದಲ್ಲಿ ನಿರ್ಮಾಣಗೊಂಡಿದ್ದ ಸೋಪಾನ ಕಟ್ಟೆಯಲ್ಲಿ ತುಂಬಿದ್ದ ಮಣ್ಣು ತೆರವುಗೊಳಿಸಲಾಯಿತು. ನದಿ ತಟದ ಪೊದೆಗಳನ್ನು ಮತ್ತು ಎಲ್ಲೆಂದರಲ್ಲಿ ರಾಶಿ ಬಿದ್ದಿರುವ ತ್ಯಾಜ್ಯಗಳನ್ನು ತೆರವುಗೊಳಿಸಲಾಯಿತು. ಕುಶಾಲನಗರ ಪುರಸಭೆಯ ಜೆಸಿಬಿ ಯಂತ್ರ ಸಹಕಾರದೊಂದಿಗೆ ನದಿ ತಟವನ್ನು ಶುಚಿಗೊಳಿಸಲಾಯಿತು.ಈ ಸಂದರ್ಭ ಮಾತನಾಡಿದ ಕಾವೇರಿ ಮಹಾ ಆರತಿ ಬಳಗದ ಸಂಚಾಲಕಿ ವನಿತಾ ಚಂದ್ರಮೋಹನ್, ನದಿ ತಟಗಳನ್ನು ಸ್ವಚ್ಛವಾಗಿ ಇಡುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಕೈಜೋಡಿಸಬೇಕು. ಮಲಿನ ನೀರು ತ್ಯಾಜ್ಯ ವಸ್ತುಗಳನ್ನು ನದಿಗೆ ನೇರವಾಗಿ ಸೇರದಂತೆ ಎಚ್ಚರ ವಹಿಸಬೇಕು ಎಂದು ಹೇಳಿದರು. ಕ್ಷೇತ್ರದ ಮೂಲಕ ರಾಜ್ಯದ ಎಲ್ಲೆಡೆ ಒಂದು ವಾರಗಳ ಕಾಲ ನಡೆಯುತ್ತಿರುವ ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮಗಳು ಯಶಸ್ವಿಯಾಗಿ ನೆರವೇರಲಿ ಎಂದು ಶುಭ ಕೋರಿದರು.
ಈ ಸಂದರ್ಭ ಯೋಜನೆಯ ಕುಶಾಲನಗರ ವಲಯ ಮೇಲ್ವಿಚಾರಕರಾದ ನಾಗರಾಜ್, ಸೇವಾ ಪ್ರತಿನಿಧಿ ಜಯಲಕ್ಷ್ಮಿ, ಉಪಾಧ್ಯಕ್ಷೆ ದಾಕ್ಷಾಯಿಣಿ, ಶೌರ್ಯ ತಂಡದ ಸ್ವಯಂಸೇವಕರು, ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಂಚಾಲಕರಾದ ಚಂದ್ರಮೋಹನ್, ಧರಣಿ, ಎನ್ಎಸ್ಎಸ್ ತಂಡದ ಸಹ ಸಂಚಾಲಕರಾದ ಕೆ ಪಿ ವಿನಯ್, ಪುರಸಭೆ ಪೌರಕಾರ್ಮಿಕರ ಮೇಲ್ವಿಚಾರಕರಾದ ಗಣೇಶ್ ಮತ್ತಿತರರು ಇದ್ದರು.ಶ್ರದ್ಧಾ ಕೇಂದ್ರ ಸ್ವಚ್ಛತಾ ಅಭಿಯಾನದ ಅಂಗವಾಗಿ ಕೂಡಿಗೆ ವಿಜಯನಗರ ಶ್ರೀ ದುರ್ಗಾಪರಮೇಶ್ವರಿ ದೇವಾಲಯ ಕುಶಾಲನಗರ ಎಚ್ಆರ್ ಪಿ ಶ್ರೀ ಸುಬ್ರಹ್ಮಣ್ಯ ದೇವಾಲಯ, ಕುಶಾಲನಗರ ಕೂಡ್ಲೂರು ದೊಡ್ಡಮ್ಮ ದೇವಾಲಯ ಮತ್ತಿತರ ಕಡೆ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಲಾಗಿತ್ತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕರಾದ ನಾಗರಾಜ್ ನೇತೃತ್ವದಲ್ಲಿ ಸೇವಾ ಪ್ರತಿನಿಧಿ ನಿರ್ಮಲ ಮತ್ತು ಸದಸ್ಯರು ಹಾಗೂ ಶೌರ್ಯ ತಂಡದ ಕಾರ್ಯಕರ್ತರು ಇದ್ದರು.