15 ದಿನಕ್ಕೊಮ್ಮೆ ರುದ್ರಭೂಮಿಯಲ್ಲಿ ಸ್ವಚ್ಛತಾ ಕಾರ್ಯ

| Published : Nov 01 2024, 12:05 AM IST

ಸಾರಾಂಶ

ದಾವಣಗೆರೆ ಮಹಾನಗರ ಪಾಲಿಕೆಯ ವಿವಿಧ ಕೆಲಸ-ಕಾರ್ಯಗಳಿಗೆ ನೆರವು, ಸಹಕಾರ ನೀಡುವ ಉದ್ದೇಶದಿಂದ ಹೆಲ್ಪ್ ಡೆಸ್ಕ್ ನ್ನು ಬುಧವಾರ ಮೇಯರ್ ಕೆ. ಚಮನ್ ಸಾಬ್, ಉಪ ಮೇಯರ್ ಸೋಗಿ ಶಾಂತಕುಮಾರ್, ಸದಸ್ಯ ಎ. ನಾಗರಾಜ್, ಜಿ.ಎಸ್.‌ ಮಂಜುನಾಥ್ ಗಡಿಗುಡಾಳ್ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ಮಹಾನಗರ ಪಾಲಿಕೆಯ ವಿವಿಧ ಕೆಲಸ-ಕಾರ್ಯಗಳಿಗೆ ನೆರವು, ಸಹಕಾರ ನೀಡುವ ಉದ್ದೇಶದಿಂದ ಹೆಲ್ಪ್ ಡೆಸ್ಕ್ ನ್ನು ಬುಧವಾರ ಮೇಯರ್ ಕೆ. ಚಮನ್ ಸಾಬ್, ಉಪ ಮೇಯರ್ ಸೋಗಿ ಶಾಂತಕುಮಾರ್, ಸದಸ್ಯ ಎ. ನಾಗರಾಜ್, ಜಿ.ಎಸ್.‌ ಮಂಜುನಾಥ್ ಗಡಿಗುಡಾಳ್ ಉದ್ಘಾಟಿಸಿದರು.

ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿನ ಕೈಗೊಂಡ ಠರಾವಿನಂತೆ ಹೆಲ್ಪ್ ಡೆಸ್ಕ್ ಪ್ರಾರಂಭಿಸಲಾಯಿತು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೇಯರ್ ಕೆ. ಚಮನ್ ಸಾಬ್, ಗಾಂಧಿನಗರದ ರುದ್ರಭೂಮಿಯಲ್ಲಿ ಸಾಕಷ್ಟು ಸ್ವಚ್ಛತೆಯ ಕೊರತೆ ಇದೆ ಎಂದು ಜನರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಪ್ರತಿ ವಾರ ಅಥವಾ 15 ದಿನಕ್ಕೊಮ್ಮೆ ನಗರದ ಇತರೆ ರುದ್ರಭೂಮಿಯಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಪೌರ ಕಾರ್ಮಿಕರ ಕೊರತೆಯಿಂದ ಸ್ವಚ್ಛತಾ ಕೆಲಸಕ್ಕೆ ಸಾಕಷ್ಟು ಸಮಸ್ಯೆ ಆಗುತ್ತಿದ್ದು, 440 ಪೌರ ಕಾರ್ಮಿಕರನ್ನು ಹೊರಗುತ್ತಿಗೆ ಆಧಾರದ ಲ್ಲಿ ನೇಮಕಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭೇಟಿ ಸಂದರ್ಭದಲ್ಲಿ ಕೋರಿದಾಗ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಪೌರ ಕಾರ್ಮಿಕರ ನೇಮಕದಲ್ಲೇ 20 ಜನ ಮಾರ್ಷಲ್ ಗಳನ್ನೂ ನೇಮಕ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಖಾಲಿ ನಿವೇಶನಗಳನ್ನು ಮೊದಲು ಪಾಲಿಕೆಯಿಂದ ಸ್ವಚ್ಛಗೊಳಿಸಲಾಗುವುದು. ನಂತರದಲ್ಲಿ ದಂಡ ವಿಧಿಸಲಾಗುವುದು. ಖಾಲಿ ನಿವೇಶನ ದಲ್ಲಿ ಸ್ವಚ್ಛತೆ ಕಾಪಾಡದಿದ್ದರೆ ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಸಿದರು.

ಮಹಾನಗರ ಪಾಲಿಕೆಯ ಹಲವಾರು ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದಾಗ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ. ಮುಖ್ಯಮಂತ್ರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ನಗರ ಪಾಲಿಕೆ ಅಭಿನಂದನೆ ಸಲ್ಲಿಸುತ್ತದೆ ಎಂದು ತಿಳಿಸಿದರು.

ಮಹಾನಗರ ಪಾಲಿಕೆ ಸದಸ್ಯ ಎ. ನಾಗರಾಜ್ ಮಾತನಾಡಿ, ಮೇಯರ್ ಅವರು ಅಧಿಕಾರ ವಹಿಸಿಕೊಂಡ ನಂತರದಲ್ಲಿ ಸ್ವಚ್ಛತೆಗೆ ಅತಿ ಹೆಚ್ಚಿನ ಗಮನ ನೀಡುತ್ತಿದ್ದಾರೆ. ರುದ್ರಭೂಮಿ ಸ್ವಚ್ಛತೆ ಮೊದಲ ಹೆಜ್ಜೆಯಾಗಿದೆ.‌ ಹಸಿರು ದಾವಣಗೆರೆ ನಿರ್ಮಾಣಕ್ಕೆ ಪೂರಕವಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಎಸ್. ಮಲ್ಲಿಕಾರ್ಜುನ್ ಬಹಳಷ್ಟು ಸಹಕಾರ ನೀಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭೇಟಿ ಸಾಕಷ್ಟು ಫಲಪ್ರದವಾಗಿದೆ ಎಂದು ತಿಳಿಸಿದರು.