ಸ್ವಚ್ಛತೆಯಿಂದ ರೋಗಗಳನ್ನು ದೂರವಿಡಲು ಸಾಧ್ಯ: ಡಾ.ಪದ್ಮಜಾ

| Published : Jun 22 2024, 12:54 AM IST / Updated: Jun 22 2024, 12:55 AM IST

ಸ್ವಚ್ಛತೆಯಿಂದ ರೋಗಗಳನ್ನು ದೂರವಿಡಲು ಸಾಧ್ಯ: ಡಾ.ಪದ್ಮಜಾ
Share this Article
  • FB
  • TW
  • Linkdin
  • Email

ಸಾರಾಂಶ

ಎಲೆಚಾಕನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಉಚಿತ ಆರೋಗ್ಯ ಶಿಬಿರ ನಡೆಯಿತು.

ಕನ್ನಡಪ್ರಭ ವಾರ್ತೆ ಮಂಡ್ಯ

ನಾವು ವಾಸ ಮಾಡುವ ಸುತ್ತಮುತ್ತಲ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡರೆ ಸಾಂಕ್ರಾಮಿಕ ರೋಗಗಳಿಂದ ದೂರವಿರಲು ಸಾಧ್ಯ. ಪ್ರತಿಯೊಬ್ಬರೂ ಸ್ವಚ್ಛಗೆ ಆದ್ಯತೆ ನೀಡಬೇಕೆಂದು ತೂಬಿನಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಪದ್ಮಜಾ ಸ್ವಾಮಿ ತಿಳಿಸಿದರು. ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯ, ರಾಷ್ಟ್ರೀಯ ಸೇವಾ ಯೋಜನೆ, ಪಿಇಎಸ್ ಕಾನೂನು ಕಾಲೇಜು ಇವರ ವತಿಯಿಂದ ತಾಲೂಕಿನ ಎಲೆಚಾಕನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆದ ಸ್ವಚ್ಛ ಪರಿಸರ, ಆರೋಗ್ಯ ಶಿಬಿರ, ಗ್ರಾಮಸ್ಥರಿಗೆ ಆರೋಗ್ಯ ತಪಾಸಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಎನ್‌ಎಸ್‌ಎಸ್ ಘಟಕದ ವಿದ್ಯಾರ್ಥಿಗಳು ನಮ್ಮೂರಿಗೆ ಬಂದು ಗ್ರಾಮವನ್ನು ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಅವರೊಂದಿಗೆ ನಾವೂ ಸೇರಿಕೊಂಡು ಗ್ರಾಮವನ್ನು ಸ್ವಚ್ಛಗೊಳಿಸುವ ಪ್ರಯತ್ನ ಮಾಡಬೇಕು. ಕೇವಲ ಸ್ವಚ್ಛಗೊಳಿಸುವುದಷ್ಟೇ ಅವರ ಜವಾಬ್ದಾರಿ ಆಗಿಲ್ಲ. ಜೊತೆಗೆ ಜಾಗೃತಿಯನ್ನೂ ಮೂಡಿಸುತ್ತಿದ್ದಾರೆ ಎಂದು ಹೇಳಿದರು. ಪರಿಸರ ಸ್ವಚ್ಛವಾಗಿದಲ್ಲಿ ಯಾವುದೇ ಕಾಯಿಲೆ ಬರುವುದಿಲ್ಲ. ಎಲ್ಲದ್ದಕ್ಕೂ ಗ್ರಾಮ ಪಂಚಾಯಿತಿಯವರು ಬರುತ್ತಾರೆ. ಅವರು ಮಾಡುತ್ತಾರೆ. ಇಲ್ಲವೇ ಸರ್ಕಾರದವರು ಬರುತ್ತಾರೆ. ಅವರೇ ಎಲ್ಲವನ್ನೂ ನೋಡಿಕೊಳ್ಳುತ್ತಾರೆ ಎಂದುಕೊಳ್ಳುವುದು ಸರಿಯಲ್ಲ. ನಾವು ನಮ್ಮ ಮನೆಯ ಸುತ್ತಲ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.ಚರಂಡಿಯಲ್ಲಿ ನೀರು ನಿಂತು ಸೊಳ್ಳೆಗಳ ಆವಾಸ ಸ್ಥಾನವಾಗಿರುತ್ತವೆ. ಇದರಿಂದ ಡೆಂಘೀ, ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಬಹುದು. ಒಮ್ಮೆ ಜ್ವರ, ಅಥವಾ ಆರೋಗ್ಯ ಸಮಸ್ಯೆ ಬಂದರೆ ಜ್ವರ ಎಂದು ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ಆ ಬಗ್ಗೆ ಗಮನ ಹರಿಸುವುದು ಉತ್ತಮ ಎಂದು ಕಿವಿಮಾತು ಹೇಳಿದರು. ತಜ್ಞ ವೈದ್ಯರನ್ನು ಸಂಪರ್ಕಿಸಿ ಎರಡು ಅಥವಾ ಮೂರು ದಿನಗಳ ಕಾಲ ಜ್ವರ ಬಿಡದಿದ್ದರೆ ಮತ್ತೆ ವೈದ್ಯರನ್ನು ಸಂಪರ್ಕಿಸಬೇಕು. ಅವರು ಹೇಳಿದಂತೆ ಪದೇ ಪದೇ ರಕ್ತ ಪರೀಕ್ಷೆ ಮಾಡಿಸಬೇಕು. ರಕ್ತದಲ್ಲಿ ಪ್ಲೇಟ್‌ಲೆಟ್ಸ್‌ಗಳು ಕಡಿಮೆಯಾಗಿವೆ ಎಂಬುದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತೇವೆ. ಅದರಿಂದ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ ಎಂದು ವಿವರಿಸಿದರು. ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಇದರಿಂದ ಸೊಳ್ಳೆಗಳು ಉತ್ಪತ್ತಿಯನ್ನು ತಡೆಯಬಹುದು. ಮಕ್ಕಳಿಗೆ ತುಂಬು ತೋಳಿನ ಬಟ್ಟೆಗಳನ್ನು ತೊಡಿಸಬೇಕು. ಮನೆಯ ಕಿಟಕಿಗಳಿಗೆ ಸೊಳ್ಳೆ ಪರದೆಗಳನ್ನು ಅಳವಡಿಸಬೇಕು. ಸೊಳ್ಳೆಗಳಿಂದ ರಕ್ಷಣೆ ಪಡೆಯಲು ಏನೆಲ್ಲಾ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕೋ ಅವೆಲ್ಲವನ್ನೂ ಚಾಚೂ ತಪ್ಪದೇ ಪಾಲಿಸಬೇಕು. ಇದರಿಂದಲೂ ಆರೋಗ್ಯ ಕಾಪಾಡಿಕೊಳ್ಳಲು ಸಹಾಯವಾಗುತ್ತದೆ ಎಂದು ಅಭಿಪ್ರಾಯಿಸಿದರು. ತಂಬಾಕು ಉತ್ಪನ್ನಗಳಿಂದ ದೂರ ಇರಬೇಕು. ಮಕ್ಕಳಿಗೂ ಸಹ ತಂಬಾಕು ಉತ್ಪನ್ನಗಳಿಂದ ದೂರ ಇರುವಂತೆ ತಿಳುವಳಿಕೆ ಮೂಡಿಸಬೇಕು. ಬೀಡಿ-ಸಿಗರೇಟು ಸೇವಿಸುವವರಿಗೆ ಅಷ್ಟೇ ಅಲ್ಲದೆ, ಅದರಿಂದ ಬರುವಂತಹ ಹೊಗೆಯ ಸೇವನೆಯಿಂದಲೂ ಪಕ್ಕದಲ್ಲಿದ್ದವರೂ ತೊಂದರೆ ಅನುಭವಿಸಬೇಕಾಗುತ್ತದೆ ಎಂಬುದನ್ನು ಎಲ್ಲರೂ ತಿಳಿದುಕೊಳ್ಳುವುದು ಅಗತ್ಯ ಎಂದು ಕಿವಿಮಾತು ಹೇಳಿದರು. ಎಲೆಚಾಕನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷೆ ಸರಸ್ವತಿ ಅಧ್ಯಕ್ಷತೆ ವಹಿಸಿದ್ದರು. ತೂಬಿನಕೆರೆ ಆರೋಗ್ಯ ನಿರೀಕ್ಷಕ ಚಂದ್ರಶೇಖರ್, ಪ್ರಾಥಮಿಕ ಆರೋಗ್ಯ ಅಧಿಕಾರಿ ಪುಷ್ಪಲತಾ, ಪಿಇಎಸ್ ಕಾನೂನು ಕಾಲೇಜು ಸಹಾಯಕ ಪ್ರಾಧ್ಯಾಪಕ ಎಂ.ಪಿ. ಪ್ರಮೋದ್‌ಕುಮಾರ್, ಪಿಡಿಒ ಪಿ. ಸ್ವಾಮಿ ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.