ಪಟ್ಟಣದ ಐತಿಹಾಸಿಕ ಮೂಲನಂದೀಶ್ವರ ದೇವಸ್ಥಾನ ಹಿಂಭಾಗದ ಬಸವತೀರ್ಥದಲ್ಲಿ ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಪುರಸಭೆ, ವಿಜಯಪುರದ ಸುದರ್ಶನ ಸೇವಾ ಸಂಘದ ಸಹಯೋಗದಲ್ಲಿ ಭಾನುವಾರ ಸ್ವಚ್ಛತಾ ಶ್ರಮದಾನ ನಡೆಸಿದರು.
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಪಟ್ಟಣದ ಐತಿಹಾಸಿಕ ಮೂಲನಂದೀಶ್ವರ ದೇವಸ್ಥಾನ ಹಿಂಭಾಗದ ಬಸವತೀರ್ಥದಲ್ಲಿ ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಪುರಸಭೆ, ವಿಜಯಪುರದ ಸುದರ್ಶನ ಸೇವಾ ಸಂಘದ ಸಹಯೋಗದಲ್ಲಿ ಭಾನುವಾರ ಸ್ವಚ್ಛತಾ ಶ್ರಮದಾನ ನಡೆಸಿದರು.ಸುಮಾರು ಐದು ಗಂಟೆಗಳ ಕಾಲ ಶ್ರಮದಾನ ನಡೆಸಿದ ಸ್ವಯಂಸೇವಕರು, ಹೊಂಡದಲ್ಲಿದ್ದ ಕಸ, ಧಾರ್ಮಿಕ ಹಾಗೂ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ತೆರವುಗೊಳಿಸಿ ಸ್ವಚ್ಛಗೊಳಿಸಿದರು.
ಸ್ಥಳೀಯ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಶ್ರಮದಾನಕ್ಕೆ ಚಾಲನೆ ನೀಡಿ ಮಾತನಾಡಿ, ವೈಯಕ್ತಿಕ ಜೀವನದಲ್ಲಿ ಸ್ವಾವಲಂಬಿಗಳಾಗಿರುವ ಸುದರ್ಶನ ಸೇವಾ ಸಂಘದ ಸದಸ್ಯರು ತಿಂಗಳ ಕೊನೆಯ ಭಾನುವಾರ ಒಂದು ದಿನವನ್ನು ಸಮಾಜಸೇವೆಗೆ ಮೀಸಲಿಟ್ಟು ಶ್ರಮದಾನ ಮಾಡುತ್ತಿರುವುದು ಶ್ಲಾಘನೀಯ. ಹೋರಾಟ, ಪ್ರತಿಭಟನೆಗಳ ಮೂಲಕ ಹಕ್ಕು ಪಡೆಯುವ ಸಂಘಟನೆಗಳ ನಡುವೆ ಶ್ರಮದಾನದ ಮೂಲಕ ಸಾಮಾಜಿಕ ಸೇವೆ ಸಲ್ಲಿಸುವ ಸಂಸ್ಥೆಗಳ ಅಗತ್ಯವಿದೆ. ಸುದರ್ಶನ ಸೇವಾ ಸಂಘದ ಸಮಾಜಮುಖಿ, ಧಾರ್ಮಿಕ ಹಾಗೂ ಪರಿಸರ ಕಾಳಜಿ ಮಾದರಿ ಹೆಜ್ಜೆ ಗುರುತಾಗಲಿ ಎಂದರು.ಬಸವನಬಾಗೇವಾಡಿಯ ಜೇನುಗೂಡು ಸಂಸ್ಥೆಯಿಂದ ಪ್ರತಿ ಶ್ರಾವಣದಲ್ಲಿ ಐತಿಹಾಸಿಕ ಬಸವತಿರ್ಥದ ಸ್ವಚ್ಚತಾ ಕಾರ್ಯ ಮಾಡುತ್ತಾರೆ. ಮಳೆ ಕೊರತೆಯಿಂದ ಬಸವತೀರ್ಥ ಬತ್ತಿರುವುದರಿಂದ ತಳಮಟ್ಟದ ಸ್ವಚ್ಛತೆಗೆ ಅವಕಾಶ ದೊರೆತಿದೆ. ಐತಿಹಾಸಿಕ ಸ್ಥಳಗಳ ಸ್ವಚ್ಛತೆ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಜನರು ತೀರ್ಥಗಳಲ್ಲಿ ಧಾರ್ಮಿಕ ಸಾಮಗ್ರಿ, ಪ್ಲಾಸ್ಟಿಕ್ ಸೇರಿದಂತೆ ಯಾವುದೇ ತ್ಯಾಜ್ಯ ಹಾಕಬಾರದು. ತ್ಯಾಜ್ಯ ತಡೆಯಲು ಬಸವತೀರ್ಥದ ಸುತ್ತಲೂ ಎತ್ತರದ ತಂತಿಬೇಲಿ ಅಳವಡಿಸುವಂತೆ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲಹೆ ನೀಡಿದರು.ಬಸವನಬಾಗೇವಾಡಿ ಪುರಸಭೆ ಮುಖ್ಯಾಧಿಕಾರಿ ಶಬ್ಬೀರ ರೇವೂರಕರ ಮಾತನಾಡಿ, ಧಾರ್ಮಿಕ ಹಾಗೂ ಐತಿಹಾಸಿಕ ಸ್ಥಳಗಳ ಸ್ವಚ್ಛತೆಗೆ ಮುಂದಾಗಿರುವುದು ಇತರ ಸಂಘಟನೆಗಳಿಗೆ ಮಾದರಿಯಾಗಿದೆ. ಸ್ವಚ್ಛ ಭಾರತ್ ಅಭಿಯಾನ ಯಶಸ್ಸಿಗೆ ಇಂತಹ ಸಂಘಟನೆಗಳ ಕೊಡುಗೆ ಮಹತ್ವದ್ದಾಗಿದೆ. ಸಂಘದ ಸೇವಾ ಕಾರ್ಯಗಳಿಗೆ ಪುರಸಭೆಯಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.