ಸಾರಾಂಶ
- ಕೆಎಸ್‌ಆರ್‌ಟಿಸಿ ಕಾಪೌಂಡ್ ಪಕ್ಕವೇ ರಾಶಿ ರಾಶಿ ತ್ಯಾಜ್ಯ, ಕೊಳಚೆ ನೀರು ಸಂಗ್ರಹ । ಸ್ವಚ್ಛತೆ ಹೊಣೆ ಯಾರದು?
- - - ಕನ್ನಡ ಪ್ರಭ ವಾರ್ತೆ ಹೊನ್ನಾಳಿಪಟ್ಟಣದ ನ್ಯಾಮತಿ ರಸ್ತೆಯ ಕೆಎಸ್‌ಆರ್‌ಟಿಸಿ ಕಾಪೌಂಡ್ ಪಕ್ಕದಲ್ಲಿ ಕಸದ ರಾಶಿ, ಕೊಳಚೆ ನೀರು ಸಂಗ್ರಹವಾಗಿದೆ. ಆದರೆ, ಪುರಸಭೆ ಅಧ್ಯಕ್ಷರು, ಮುಖ್ಯಾಧಿಕಾರಿ, ಸದಸ್ಯರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ಬಗ್ಗೆ ಮಾಹಿತಿ ಇದ್ದರೂ, ಕ್ರಮ ಜರುಗಿಸದೇ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಪರಿಣಾಮ ಪಟ್ಟಣದ ಜನತೆಗೆ ಕಿರಿಕಿರಿಯಾಗುತ್ತಿದೆ.
ಪಟ್ಟಣದದಿಂದ ಬೇರೆ ಪ್ರದೇಶಗಳಿಗೆ ಹೋಗುವ ಪ್ರಯಾಣಿಕರು, ಸಾರ್ವಜನಿಕರು, ಸ್ಥಳೀಯರು ಸೂಕ್ತ ಕ್ರಮಕ್ಕಾಗಿ ಪುರಸಭೆಗೆ ಹೋಗಿ ಹಲವಾರು ಬಾರಿ ಮನವಿ ಕೊಟ್ಟಿದ್ದಾರೆ. ಆದರೆ, ಯಾವ ಪ್ರಯೋಜನವೂ ಆಗಿಲ್ಲ. ಪುರಸಭೆ ಅಧಿಕಾರಿಗಳು ಜನರ ಹಿತವನ್ನೇ ಮರೆತು, ಜಾಣಗುರುಡು ಪ್ರದರ್ಶನ ಮಾಡುತ್ತಿದ್ದಾರೆ.ಪಟ್ಟಣದ ದುರ್ಗಿಗುಡಿ ಭಾಗದ ನಾಗರೀಕರ ಮನೆಗಳಿಂದ ಬರುವ ಕೊಳಚೆ ನೀರು ಸರಾಗವಾಗಿ ಹರಿಯದೇ ಸಮಸ್ಯೆ ಸೃಷ್ಟಿಯಾಗಿದೆ. ಹೊನ್ನಾಳಿ, ನ್ಯಾಮತಿ, ಶಿವಮೊಗ್ಗಕ್ಕೆ ಹೋಗುವ ಪ್ರಮುಖ ರಸ್ತೆ ಪಕ್ಕದಲ್ಲೇ ರಾಶಿ ರಾಶಿ, ಕೊಳಚೆ ನೀರು, ತ್ಯಾಜ್ಯ ವಸ್ತುಗಳು ಕಣ್ಣಿಗೆ ರಾಚುವಂತಿದ್ದು, ಪಟ್ಟಣದ ಸೌಂದರ್ಯಕ್ಕೂ ಧಕ್ಕೆಯಾಗುತ್ತಿದೆ. ಅಷ್ಟೇ ಅಲ್ಲದೇ, ಸೊಳ್ಳೆಗಳ ಆಶ್ರಯ ತಾಣವೂ ಆಗಿ ಮಾರ್ಪಟ್ಟಿದೆ.
ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಕಾಪೌಂಡ್ ಪಕ್ಕವೇ ಕಸದ ರಾಶಿ, ಕೊಳಚೆ ನೀರು ಸಂಗ್ರವಾಗಿದೆ. ಚರಂಡಿ ನೀರು ಮುಂದೆ ಹೋಗದಂತೆ ಕಳೆಗಿಡಗಳು ಬೆಳೆದಿವೆ. ಇದರಿಂದ ಕೊಳೆಚೆ ನೀರು ಮುಂದಕ್ಕೆ ಹರಿಯುತ್ತಿಲ್ಲ. ಕಸ-ಕಡ್ಡಿಗಳಿಂದ ತ್ಯಾಜ್ಯ ಸಂಗ್ರಹವಾಗಿ, ಹಂದಿಗಳು, ಬೀದಿನಾಯಿಗಳಿಗೆ ಈಜಾಡುವ ಕಾಲವೆಯಂತಾಗಿದೆ. ಸಾಂಕ್ರಾಮಿಕ ರೋಗಗಳು ಉತ್ಪತ್ತಿಯಾಗುವ ಸ್ಥಳವಾಗಿ ಪರಿಣಮಿಸಿದೆ. ಈ ರಸ್ತೆಯ ಮೂಲಕ ಪ್ರತಿದಿನ ಸಹಸ್ರಾರು ಜನರು, ವಿದ್ಯಾರ್ಥಿಗಳು, ಸಂಚರಿಸುತ್ತಾರೆ. ಅವರ ಆರೋಗ್ಯ ಹಾಗೂ ಪಟ್ಟಣದ ಸೌಂದರ್ಯ ಕಾಪಾಡಲು ಪುರಸಭೆ ಶೀಘ್ರ ಮುಂದಾಗಬೇಕಾಗಿದೆ.ಬಸ್ ನಿಲ್ದಾಣದಿಂದ ಪ್ರತಿನಿತ್ಯ ಆಸ್ಪತ್ರೆ, ಶಾಲಾ- ಕಾಲೇಜು, ನ್ಯಾಯಾಲಯ, ಎಲ್‌ಐಸಿ ಆಫೀಸ್, ಬ್ಯಾಂಕ್, ಅಗ್ನಿಶಾಮಕ ದಳ ಕಚೇರಿಗಳಿಗೆ ಅಧಿಕಾರಿಗಳು ಹೋಗಿಬರುತ್ತಾರೆ. ಹೀಗೆ ಸಂಚರಿಸುವಾಗಲೆಲ್ಲ ಕೊಳಕು ನೀರು, ಕಸದ ರಾಶಿ ದರ್ಶನ ಪಡೆದೇ, ಮೂಗು ಮುಚ್ಚಿಕೊಂಡೇ ಹೋಗುವಂತಾಗಿದೆ.
ಈ ಪ್ರದೇಶ ಸಮೀಪದಲ್ಲಿಯೇ ಹಿರೇಕಲ್ಮಠದ ಪ್ರದೇಶವಿದೆ. ಇಲ್ಲಿಯೇ ಶ್ರೀ ಚನ್ನಪ್ಪಸ್ವಾಮಿ ಮಠವೂ ಇದೆ. ನಾಡಿನ ನಾನಾ ಭಾಗಗಳಿಂದ ಮಠಕ್ಕೆ ಭಕ್ತರು ಬರುತ್ತಾರೆ. ಇಲ್ಲಿನ ಸ್ವಚ್ಛತೆ ಕಂಡು ಪುರಸಭೆಗೆ ಶಪಿಸೋದು ಮಾತ್ರ ತಪ್ಪುತ್ತಿಲ್ಲ.ಪುರಸಭೆ ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿಯೂ ಹೆಚ್ಚಾಗಿದೆ. ಸಾರ್ವಜನಿಕರು ನೇರವಾಗಿ ತಮ್ಮಕೆಲಸಗಳನ್ನು ಮಾಡಿಸಿಕೊಳ್ಳಲು ಕಚೇರಿಗೆ ಹೋದರೆ ಸುಲಭಕ್ಕೆ ಅಗುತ್ತಿಲ್ಲ ಎಂದು ಅನೇಕರು ಆಳಲನ್ನು ತೋಡಿಕೊಂಡಿದ್ದಾರೆ. ಈ ಎಲ್ಲ ಅವ್ಯವಸ್ಥೆಗಳನ್ನು ಸಂಬಂಧಿಸಿದ ಅಧಿಕಾರಿಗಳು ಗಮನಹರಿಸಿ, ಕ್ರಮ ಜರುಗಿಸಬೇಕಿದೆ. ಜನರ ನೆಮ್ಮದಿ ಕಾಪಾಡಬೇಕಿದೆ ಎಂಬುದು ನಾಗರಿಕರ ಒತ್ತಾಯವಾಗಿದೆ.
- - -(ಬಾಕ್ಸ್) * ಮಾಸಡಿ ಗ್ರಾಮಸ್ಥರ ಪ್ರತಿಭಟನೆ ಪುರಸಭೆಗೆ ಮರೆತುಹೋಯಿತೇ?ಕೆಲ ದಿನಗಳ ಹಿಂದೆ ತಾಲೂಕಿನ ಮಾಸಡಿ ಗ್ರಾಮದ ಸಮೀಪ ಘಟತ್ಯಾಜ್ಯ ವಸ್ತುಗಳನ್ನು ವೈಜ್ಞಾನಿಕವಾಗಿ ಸಂಸ್ಕರಣೆ ಮಾಡದೇ ಎಲ್ಲೆಂದರಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ಗ್ರಾಮದ ಮಾರ್ಗದಲ್ಲಿ ವೈದ್ಯಕೀಯ ತ್ಯಾಜ್ಯವಸ್ತುಗಳು ಹಾಗೂ ಇತರೆ ತ್ಯಾಜ್ಯವಸ್ತುಗಳನ್ನು ವಾಹನದಲ್ಲಿ ಸರಿಯಾಗಿ ಮುಚ್ಚಿಕೊಳ್ಳೇದೇ ನೇರವಾಗಿ ಸಾಗಿಸುತ್ತಾರೆ. ಇದರಿಂದ ಮಾಸಡಿ ಗ್ರಾಮಸ್ಥರು ಪುರಸಭೆ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದ್ದಾರೆ. ಆದರೂ ಪುರಸಭೆ ಅಧಿಕಾರಿಗಳು ಪಟ್ಟಣದ ಸ್ಚಚ್ಛತೆ ಹಾಗೂ ಸಮರ್ಪಕ ತ್ಯಾಜ್ಯ ವಿಲೇವಾರಿ ನಿರ್ವಹಣೆಗೆ ಗಮಹರಿಸುತ್ತಿಲ್ಲ.
- - --3ಎಚ್.ಎಲ್.ಐ1.ಜೆಪಿಜಿ: ಹೊನ್ನಾಳಿ ಪಟ್ಟಣದ ನ್ಯಾಮತಿ ರಸ್ತೆಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸಮೀಪದ ಕಾಪೌಂಡ್ ಪಕ್ಕ ಕಸದ ರಾಶಿ, ಕೊಳಚೆ ನೀರು ನಿಂತಿರುವುದು. -3ಎಚ್.ಎಲ್.ಐ1ಎ.ಜೆಪಿಜಿ: ಹೊನ್ನಾಳಿ-ನ್ಯಾಮತಿ, ಶಿವಮೊಗ್ಗ ಪ್ರಮುಖ ರಸ್ತೆಯ ಪಕ್ಕದಲ್ಲಿ ರಾಶಿ ರಾಶಿ ಕೊಳೆತ ಕಸ ಸಂಗ್ರಹವಾಗಿರುವುದು.