ಸಾರಾಂಶ
ಮುಳಬಾಗಿಲು: ನಗರದ ಕೆಜಿಎಫ್ ರಸ್ತೆಯ ಪೊಲೀಸ್ ಠಾಣೆ ಮುಂಭಾಗದ ಚರಂಡಿಯಲ್ಲಿ ಕೊಳಚೆ ನೀರು ಸರಾಗವಾಗಿ ಹರಿಯದೆ ನಿಂತುಹೋಗಿದೆ. ಇದರಿಂದ ಸೊಳ್ಳೆಗಳು ಮತ್ತು ಕ್ರಿಮಿ ಕೀಟಗಳು ಹೆಚ್ಚಾಗಿ ಉತ್ಪತ್ತಿಯಾಗುತ್ತಿದ್ದು, ಸಾಂಕ್ರಾಮಿಕ ರೋಗಗಳು ಹರಡುವ ಭಯ ಎದುರಾಗಿದೆ. ಚರಂಡಿ ಮೇಲೆ ಕಲ್ಲು ಚಪ್ಪಡಿಗಳನ್ನು ಸಹ ಹಾಕದೆ ಹಾಗೆಯೇ ಬಿಟ್ಟಿರುವುದರಿಂದ ಅಪಾಯದ ಮುನ್ಸೂಚನೆ ಕಾಡುತ್ತಿದೆ. ಜನತೆಗೆ ರಕ್ಷಣೆ ನೀಡುವ ರಕ್ಷಕರಿಗೆ ಆರೋಗ್ಯ ರಕ್ಷಣೆ ಇಲ್ಲದಂತಾಗಿದ್ದು, ಸಾರ್ವಜನಿಕರು ಸೇರಿದಂತೆ ಪೊಲೀಸರಿಗೆ ಅನಾರೋಗ್ಯ ಭಯ ಎದುರಾಗಿದೆ. ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದ್ದು, ಇದೇ ರೀತಿ ನಗರದ ಹಲವಾರು ರಸ್ತೆಗಳ ಬಳಿ ಇರುವ ಚರಂಡಿಗಳಲ್ಲಿ ಕೊಳಚೆ ನೀರು ನಿಂತಿದೆ. ಬೇಸಿಗೆಕಾಲ ಬಂದಿರುವುದರಿಂದ ರೋಗಗಳು ಹರಡುವುದಕ್ಕೆ ಮುಂಚಿತವಾಗಿ ನಗರಸಭೆ ಅಧಿಕಾರಿಗಳು ಎಚ್ಚೆತ್ತುಕೊಂಡು, ಪೊಲೀಸ್ ಠಾಣೆ ಮುಂಭಾಗದ ಚರಂಡಿ ಸೇರಿದಂತೆ ನಗರದ ಹಲವಾರು ಕಡೆ ಇರುವ ಚರಂಡಿಗಳನ್ನು ಸ್ವಚ್ಛತೆ ಮಾಡಿ, ಸಾಂಕ್ರಾಮಿಕ ರೋಗಗಳು ಹರಡದಂತೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.