ಸ್ವಚ್ಛತೆ ಮಾಯ: ಸಾಂಕ್ರಾಮಿಕ ರೋಗದ ಆತಂಕ

| Published : Oct 12 2025, 01:01 AM IST

ಸಾರಾಂಶ

ತಾಲೂಕಿನ ಪ್ರಮುಖ ಮೀನುಗಾರಿಕಾ ಸ್ಥಳ ಎನಿಸಿಕೊಂಡಿರುವ ಟೊಂಕಾ ಮೀನುಗಾರಿಕಾ ಬಂದರು ಕಸದ ರಾಶಿಯಿಂದ ತುಂಬಿದೆ. ಇಲ್ಲಿ ಓಡಾಡಲು ಅಸಹ್ಯ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಗಬ್ಬು ವಾಸನೆಯಲ್ಲಿ ಕಾರ್ಮಿಕರು ಕೆಲಸ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.

ಹೊನ್ನಾವರದ ಕಾಸರಕೋಡ ಟೊಂಕಾ ಮೀನುಗಾರಿಕಾ ಬಂದರು ಸಂಪೂರ್ಣ ಗಲೀಜು

ಪ್ರಸಾದ್ ನಗರೆ

ಕನ್ನಡಪ್ರಭ ವಾರ್ತೆ ಹೊನ್ನಾವರ

ತಾಲೂಕಿನ ಪ್ರಮುಖ ಮೀನುಗಾರಿಕಾ ಸ್ಥಳ ಎನಿಸಿಕೊಂಡಿರುವ ಟೊಂಕಾ ಮೀನುಗಾರಿಕಾ ಬಂದರು ಕಸದ ರಾಶಿಯಿಂದ ತುಂಬಿದೆ. ಇಲ್ಲಿ ಓಡಾಡಲು ಅಸಹ್ಯ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಗಬ್ಬು ವಾಸನೆಯಲ್ಲಿ ಕಾರ್ಮಿಕರು ಕೆಲಸ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.

ಕರಾವಳಿಯ ಆರ್ಥಿಕ ಚಟುವಟಿಕೆಯ ಪ್ರಮುಖ ಕೇಂದ್ರವಾದ ಹೊನ್ನಾವರದ ಕಾಸರಕೋಡ ಟೊಂಕಾ ಮೀನುಗಾರಿಕಾ ಬಂದರು ಈಗ ಸಂಪೂರ್ಣವಾಗಿ ಗಲೀಜಿನಿಂದ ಕೂಡಿದೆ. ಮೀನುಗಾರಿಕಾ ಇಲಾಖೆಯ ಘೋರ ನಿರ್ಲಕ್ಷ್ಯದಿಂದಾಗಿ ಬಂದರಿನಾದ್ಯಂತ ಕಸ ಮತ್ತು ತ್ಯಾಜ್ಯದ ರಾಶಿ ತುಂಬಿ, ಚರಂಡಿಗಳು ತುಂಬಿದ್ದು ಅದರಲ್ಲಿ ರೋಗವನ್ನು ಹರಡಬಲ್ಲ ಕ್ರೀಮಿಗಳು ಸಹ ಉತ್ಪಾದನೆ ಆಗಿದ್ದು ಜನರಿಗೆ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯು ಸೃಷ್ಟಿಯಾಗಿದೆ. ಬಂದರಿನ ಸಮೀಪದಲ್ಲಿ ಅಸಹ್ಯಕರ ವಾತಾವರಣ ಸೃಷ್ಟಿಸಿದೆ.

ಮೀನುಗಾರಿಕೆ ಇಲಾಖೆ ಕುರುಡಾಯಿತೆ?:

ಕೋಟಿಗಟ್ಟಲೆ ವಹಿವಾಟು ನಡೆಯುವ ಈ ಬಂದರಿನಲ್ಲಿ ತ್ಯಾಜ್ಯ ನಿರ್ವಹಣೆ ವ್ಯವಸ್ಥೆ ಸಂಪೂರ್ಣ ಕುಸಿದಿದೆ. ಎಲ್ಲೆಂದರಲ್ಲಿ ಮೀನು ತ್ಯಾಜ್ಯ, ಪ್ಲಾಸ್ಟಿಕ್ ಸೇರಿದಂತೆ ಹಳೆಯ ವಸ್ತುಗಳು, ಕಸದ ರಾಶಿಗಳು ಬಿದ್ದಿವೆ. ಇದರ ಜೊತೆಗೆ, ಬಂದರಿನ ಹಲವು ಪ್ರದೇಶಗಳು ನಿಯಂತ್ರಣವಿಲ್ಲದೆ ಬೆಳೆದ ಗಿಡಗಂಟಿಗಳು ಮತ್ತು ಪೊದೆಗಳಿಂದ ಆವೃತವಾಗಿವೆ.

ಇದೇ ಕಸದ ರಾಶಿ ಮತ್ತು ಪೊದೆಗಳು ಪ್ರಸ್ತುತ ಹಾವುಗಳು, ಕೀಟಗಳು ಮತ್ತು ವಿಷ ಜಂತುಗಳ ಸುರಕ್ಷಿತ ನೆಲೆಯಾಗಿ ಮಾರ್ಪಟ್ಟಿವೆ. ಮೀನುಗಾರಿಕಾ ಬಂದರು ದಿನವಿಡೀ ಚಟುವಟಿಕೆಯಿಂದ ಕೂಡಿರುತ್ತದೆ. ಇಲ್ಲಿ ನೂರಾರು ಮೀನುಗಾರರು ಮತ್ತು ಕೂಲಿ ಕಾರ್ಮಿಕರು ಮೀನು ಹಿಡಿಯುವ, ಸ್ವಚ್ಛಗೊಳಿಸುವ ಹಾಗೂ ಸಾಗಾಟದ ಕೆಲಸ ಮಾಡುತ್ತಾರೆ. ಹಾಳು ಕೊಂಪೆಯಾದ ಈ ಪರಿಸರದಲ್ಲಿ ಕೆಲಸ ಮಾಡುವಾಗ ಕಾರ್ಮಿಕರಿಗೆ ಹಾವು ಅಥವಾ ಇತರ ವಿಷ ಜಂತುಗಳಿಂದ ಕಡಿತವಾಗಿ ಜೀವ ಹಾನಿಯಾಗುವ ಸಾಧ್ಯತೆಯೂ ಹೆಚ್ಚಿದೆ.

ಕಾರ್ಮಿಕರು ಪ್ರತಿದಿನ ಜೀವ ಭಯದಲ್ಲಿ ಕೆಲಸ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದರೂ, ಮೀನುಗಾರಿಕಾ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಣ್ಣು ಹಾಯಿಸದೆ ಕಂಡೂ ಕಾಣದಂತೆ ವರ್ತಿಸುತ್ತಿದ್ದಾರೆ ಎಂದು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಕ್ಷಣವೇ ಬಂದರಿನ ಸಂಪೂರ್ಣ ಪ್ರದೇಶವನ್ನು ಸ್ವಚ್ಛಗೊಳಿಸಿ, ಕಸ ಮತ್ತು ತ್ಯಾಜ್ಯ ವಿಲೇವಾರಿ ಮಾಡಲು ಶಾಶ್ವತ ವ್ಯವಸ್ಥೆ ಕಲ್ಪಿಸಬೇಕು. ಕಾರ್ಮಿಕರ ಸುರಕ್ಷತೆ ಖಚಿತಪಡಿಸಿಕೊಳ್ಳಲು ಗಿಡಗಂಟಿಗಳನ್ನು ತೆರವುಗೊಳಿಸಿ, ಸೂಕ್ತ ನೈರ್ಮಲ್ಯವನ್ನು ಕಾಪಾಡಲು ಮೀನುಗಾರಿಕಾ ಇಲಾಖೆ ಹಾಗೂ ಸ್ಥಳೀಯ ಆಡಳಿತ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಬಂದರು ಅವಲಂಬಿತರು ಮತ್ತು ಕಾರ್ಮಿಕ ಸಂಘಟನೆಗಳು ಆಗ್ರಹಿಸಿವೆ.