ಸಾರಾಂಶ
ಕನ್ನಡಪ್ರಭ ವಾರ್ತೆ ಅಥಣಿ
ಆರೋಗ್ಯವಂತ ಮತ್ತು ಸದೃಢ ಭಾರತವನ್ನು ಕಟ್ಟಲು ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿರಬೇಕು. ಆರೋಗ್ಯದ ಪರಿಕಲ್ಪನೆ ಪ್ರತಿಯೊಬ್ಬರಿಗೆ ಇದ್ದಾಗ ಆರೋಗ್ಯವಂತ ಸಮಾಜವನ್ನು ಕಟ್ಟಲು ಸಾಧ್ಯ ಎಂದು ಎಬಿವಿಪಿ ಅಧ್ಯಕ್ಷ ಡಾ.ರಾವಸಾಬ ಅಂಬಿ ಹೇಳಿದರು.ತಾಲೂಕಿನ ಖಿಳೇಗಾವಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ವಿವಿಧ ಕಾಲೇಜಿನ ಎಬಿವಿಪಿ ವಿದ್ಯಾರ್ಥಿಗಳಿಂದ ಹಮ್ಮಿಕೊಳ್ಳಲಾಗಿದ್ದ ಶ್ರದ್ಧಾ ಕೇಂದ್ರದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸ್ವಚ್ಛತಾ ಶ್ರಮದಾನದ ಪರಿಕಲ್ಪನೆಯು ಭಾರತದಲ್ಲಿ ಬಹಳ ಹಿಂದಿನಿಂದಲೂ ಪ್ರಚಲಿತದಲ್ಲಿದೆ. ಶ್ರಮದಾನವು ಕಾರ್ಮಿಕರ ಘನತೆಗೆ ಸಂಬಂಧಿಸಿದೆ ಮತ್ತು ಎಲ್ಲಾ ಶ್ರಮವು ಸಮಾನ, ಸಾಮಾಜಿಕವಾಗಿ ಅವಶ್ಯಕವಾಗಿದೆ ಎಂಬ ಹೆಚ್ಚು ಆಳವಾದ ಪ್ರತಿಪಾದನೆಗೆ ಸಂಬಂಧಿಸಿದೆ. ಮಹಾತ್ಮ ಗಾಂಧೀಜಿಯವರು ಸ್ವಚ್ಛತೆ ಮಾತ್ರ ಮುಖ್ಯವಲ್ಲ, ಸಮಾನ ಸ್ಥಾನಮಾನದ ಆಧಾರದ ಮೇಲೆ ಸಾಮಾಜಿಕ ವ್ಯವಸ್ಥೆಯೇ ಶ್ರಮದಾನದ ಮೂಲತತ್ವ ಎಂದು ನಂಬಿದ್ದರು. ಮಹಾತ್ಮ ಗಾಂಧೀಜಿಯವರ ಕನಸಿನ ಭಾರತ ನಿರ್ಮಾಣಕ್ಕಾಗಿ ಇಂದಿನ ಪ್ರಧಾನಿ ನರೇಂದ್ರ ಮೋದಿಯವರು ಸ್ವಚ್ಛತಾ ಅಭಿಯಾನಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಪ್ರತಿಯೊಬ್ಬರು ಸ್ವಚ್ಛತೆಯ ಪರಿಕಲ್ಪನೆಯನ್ನು ನಮ್ಮ ಬದುಕಿನಲ್ಲಿ ರೂಡಿಸಿಕೊಳ್ಳಬೇಕು. ಆರೋಗ್ಯವಂತ ಸಮಾಜವನ್ನು ಕಟ್ಟಲು ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ಕರೆ ನೀಡಿದರು.
ಅಥಣಿ ಸರ್ಕಾರಿ ಪ್ರಥಮ ದರ್ಜೆಯ ಕಾಲೇಜು, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ಎಸ್ಎಸ್ಎಂಎಸ್ ಮಹಾವಿದ್ಯಾಲಯದ 250ಕ್ಕೂ ಅಧಿಕ ಎನ್ಎಸ್ಎಸ್ ವಿದ್ಯಾರ್ಥಿ/ ವಿದ್ಯಾರ್ಥಿನಿಯರು ಸ್ವಚ್ಛತಾ ಶ್ರಮದಾನ ಮಾಡುವ ಮೂಲಕ ದೇವಸ್ಥಾನದ ಆವರಣ ಸ್ವಚ್ಛಗೊಳಿಸಿದರು. ಈ ವೇಳೆ ಡಾ.ಹರೀಶ್, ಪ್ರೊ.ಸುರೇಖಾ ದೇವರೆಡ್ಡಿ, ರಾವಸಾಬ ಅಂಬಿ ಸೇರಿದಂತೆ ದೇವಸ್ಥಾನದ ಅಭಿವೃದ್ಧಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.