ಸಾರಾಂಶ
- ಪಾಲಿಕೆ ವ್ಯಾಪ್ತಿ ವಾರ್ಡ್‌ಗಳಲ್ಲಿ ಮೇಯರ್, ಉಪ ಮೇಯರ್, ಆಯುಕ್ತೆ, ಸದಸ್ಯರಿಂದ ಖುದ್ದು ಪರಿಶೀಲನೆ, ಮಾಹಿತಿ ಸಂಗ್ರಹ
- - - ಕನ್ನಡಪ್ರಭ ವಾರ್ತೆ ದಾವಣಗೆರೆಇಡೀ ಮಹಾನಗರದ 45 ವಾರ್ಡ್‌ಗಳಲ್ಲೂ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಿದ್ದೇವೆ. ಈ ನಿಟ್ಟಿನಲ್ಲಿ ತಾವು ಸೇರಿದಂತೆ ಉಪ ಮೇಯರ್, ಸದಸ್ಯರು, ಆಯುಕ್ತರು, ಅಧಿಕಾರಿಗಳ ಸಮೇತ ವಾರ್ಡ್‌ಗಳಿಗೆ ಭೇಟಿ ನೀಡಿ, ಪರಿಶೀಲಿಸುತ್ತಿದ್ದೇವೆ ಎಂದು ನೂತನ ಮೇಯರ್ ಕೆ.ಚಮನ್ ಸಾಬ್ ಹೇಳಿದರು.
ನಗರದ 38ನೇ ವಾರ್ಡ್‌ನ ಎಂಸಿಸಿ ಬಿ ಬ್ಲಾಕ್ ವಿವಿಧ ಪ್ರದೇಶಕ್ಕೆ ಬುಧವಾರ ಉಪ ಮೇಯರ್, ವಾರ್ಡ್ ಸದಸ್ಯರು, ಆಯುಕ್ತರು, ಅಧಿಕಾರಿ, ಸಿಬ್ಬಂದಿ ಸಮೇತ ಭೇಟಿ ನೀಡಿ ಪರಿಶೀಲಿಸಿ ಅವರು ಮಾತನಾಡಿದರು. ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡುವ ಮೂಲಕ 38ನೇ ವಾರ್ಡ್ ಮಾದರಿಯಾಗಿದೆ ಎಂದರು.ಪ್ರತಿ ವಾರ್ಡ್‌ಗಳಿಗೆ ಖುದ್ದಾಗಿ ಭೇಟಿ ನೀಡಿ, ಪರಿಶೀಲಿಸುತ್ತಿದ್ದೇವೆ. ವಾರ್ಡ್‌ಗಳ ಸಮಸ್ಯೆಗಳನ್ನು ಅರಿಯುವ ಕೆಲಸ ಮಾಡಲಾಗುತ್ತಿದೆ. ವಾರ್ಡ್‌ಗಳಲ್ಲಿನ ಸ್ಥಿತಿಗತಿ ವಿವರ ಪಡೆಯಲಾಗುತ್ತಿದೆ. ಎಂಸಿಸಿ ಬಿ ಬ್ಲಾಕ್ ಸ್ವಚ್ಛತೆಯಲ್ಲಿ ಮಾದರಿ ವಾರ್ಡ್ ಆಗಿದೆ ಎಂದು ತಿಳಿಸಿದರು.
ಜನರ ಕುಂದುಕೊರತೆ ಆಲಿಸುವ ಜೊತೆಗೆ ಸ್ವಚ್ಛತೆ, ಕಸ ನಿರ್ವಹಣೆ, ರಸ್ತೆಗಳಲ್ಲಿ ಗುಂಡಿ ಬೀಳದಂತೆ ಎಚ್ಚರ ವಹಿಸಲಾಗುವುದು. ಈ ಭಾಗಕ್ಕೆ ಹೆಚ್ಚು ಅನುದಾನ ತಂದು, ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ಇಲ್ಲಿನ ಸದಸ್ಯ, ಆಡಳಿತ ಪಕ್ಷದ ನಾಯಕ ಜಿ.ಎಸ್. ಮಂಜುನಾಥ ಗಡಿಗುಡಾಳ್ ಮಾಡುತ್ತಿದ್ದಾರೆ. ಜನರೊಂದಿಗೆ ಒಡನಾಟ, ಅಭಿವೃದ್ಧಿ ಕಾರ್ಯ, ಶುಚಿತ್ವಕ್ಕೆ ಹೆಚ್ಚು ಆದ್ಯತೆ ನೀಡಲಾಗಿದೆ. ಇಲ್ಲಿಗೆ ಭೇಟಿ ನೀಡಿದಾಗ ಇದೆಲ್ಲಾ ಗೊತ್ತಾಗುತ್ತಿದೆ. ಮಾದರಿ ವಾರ್ಡ್ ಮಾತ್ರವಲ್ಲ, ಮಾದರಿ ಪಾಲಿಕೆ ಸದಸ್ಯ ಎಂಬ ಪ್ರಶಸ್ತಿಯನ್ನು ಈ ವಾರ್ಡ್ ಹಾಗೂ ಇಲ್ಲಿನ ಸದಸ್ಯರಿಗೆ ನೀಡಬಹುದು. ಅಷ್ಟು ಸ್ವಚ್ಛವಾಗಿ ವಾರ್ಡ್ ಇದೆ ಎಂದು ಮೇಯರ್ ಶ್ಲಾಘಿಸಿದರು.ವಾರ್ಡ್ ಸದಸ್ಯ ಜಿ.ಎಸ್. ಮಂಜುನಾಥ ಗಡಿಗುಡಾಳ್ ಮಾತನಾಡಿ, ವಾರ್ಡ್ ಸ್ವಚ್ಛತೆಗೆ ಪಾಲಿಕೆಯಷ್ಟೇ ಅಲ್ಲ, ಜನರ ಸಹಕಾರವೂ ಅತಿ ಮುಖ್ಯ ಕಾರಣವಾಗಿದೆ. ಕಸ ವಿಲೇವಾರಿಗೆ ತಮ್ಮ ವಾರ್ಡ್‌ನಲ್ಲಿ ಸಮಸ್ಯೆ ಇಲ್ಲ. ನಾಗರೀಕರು ಪಾಲಿಕೆ ನೀಡುವ ಸೂಚನೆ ತಪ್ಪದೇ ಪಾಲಿಸುತ್ತಾರೆ. ಇದರಿಂದಾಗಿಯೇ ವಾರ್ಡ್ ಇಷ್ಟೊಂದು ಶುಚಿತ್ವದಿಂದ ಇರಲು ಸಾಧ್ಯವಾಗಿದೆ. ಏನೇ ಸಮಸ್ಯೆ ಇದ್ದರೂ ಸ್ಪಂದಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಅವರು ಸಹ ವಾರ್ಡ್‌ಗಳ ಅಭಿವೃದ್ಧಿಗೆ ಸಾಕಷ್ಟು ಸಹಕರಿಸಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಅನುದಾನವನ್ನೂ ಒದಗಿಸಲಿದ್ದಾರೆ. ಒಟ್ಟಾರೆ, 38ನೇ ವಾರ್ಡ್‌ನ ಮತ್ತಷ್ಟು ಸರ್ವತೋಮುಖ ಅಭಿವೃದ್ಧಿಗೆ ಕಟಿಬದ್ಧನಾಗಿದ್ದೇನೆ ಎಂದು ಹೇಳಿದರು.ಪಾಲಿಕೆ ಉಪ ಮೇಯರ್ ಶಾಂತಕುಮಾರ ಸೋಗಿ, ಅಧೀಕ್ಷಕ ಅಭಿಯಂತರ, ಕಾರ್ಯನಿರ್ವಾಹಕ ಅಭಿಯಂತರ, ಎಇ, ಎಇಇ, ನೀರು ಪೂರೈಕೆ ವಿಭಾಗದ ಸಿಬ್ಬಂದಿ, ಅಧಿಕಾರಿಗಳು ಇತರರು, ಸ್ಥಳೀಯ ನಿವಾಸಿಗಳು ಇದ್ದರು.
- - -ಬಾಕ್ಸ್ * ಕೆಲ ವಾರ್ಡ್‌ಗಳಲ್ಲಿ ಇನ್ನೂ ಶುಚಿತ್ವ ಸಮಸ್ಯೆ: ಆಯುಕ್ತೆ ಪಾಲಿಕೆ ಆಯುಕ್ತೆ ರೇಣುಕಾ ಮಾತನಾಡಿ, ಪಾಲಿಕೆ ವ್ಯಾಪ್ತಿಯ ಕೆಲ ವಾರ್ಡ್‌ಗಳಲ್ಲಿ ಶುಚಿತ್ವದ ಸಮಸ್ಯೆ ಇದೆ. ಕಸ ವಿಲೇವಾರಿಗೆ ತೊಂದರೆಯಾಗಿದೆ. ಆದರೆ, ಎಂಸಿಸಿ ಬಿ ಬ್ಲಾಕ್‌ನಲ್ಲಿ ಅಂತಹ ಸಮಸ್ಯೆಗಳೇ ಇಲ್ಲ. ಕಸ ನಿರ್ವಹಣೆ ಅತ್ಯುತ್ತಮವಾಗಿ ಇಲ್ಲಿ ಆಗುತ್ತಿದೆ. ಇದು ಹೀಗೆಯೇ ಮುಂದುವರಿಯಲಿ. ಮತ್ತಷ್ಟು ಒಳ್ಳೆಯ ಕೆಲಸಗಳೂ ಆಗಲಿ. ಪಾಲಿಕೆ ಸದಸ್ಯರ ಮಾರ್ಗದರ್ಶನದಲ್ಲಿ ಇಲ್ಲಿನ ಸಿಬ್ಬಂದಿಯೂ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
- - - -9ಕೆಡಿವಿಜಿ1, 2, 3:ದಾವಣಗೆರೆ ಪಾಲಿಕೆಯ 38ನೇ ಎಂಸಿಸಿ ಬಿ ಬ್ಲಾಕ್ ವಾರ್ಡ್‌ಗೆ ಮೇಯರ್ ಕೆ.ಚಮನ್ ಸಾಬ್, ಉಪ ಮೇಯರ್ ಶಾಂತಕುಮಾರ ಸೋಗಿ, ಆಯುಕ್ತೆ ರೇಣುಕಾ, ವಾರ್ಡ್ ಸದಸ್ಯ ಜಿ.ಎಸ್.ಮಂಜುನಾಥ ಗಡಿಗುಡಾಳ, ಅಧಿಕಾರಿಗಳು ಭೇಟಿ ನೀಡಿ, ಪರಿಶೀಲಿಸಿದರು.