ಮಳೆಗಾಲದಲ್ಲಿ ಮನೆ, ಕಟ್ಟಡ, ರಸ್ತೆ ಬದಿ ಹಾಗೂ ಖಾಲಿ ನಿವೇಶನಗಳಲ್ಲಿ ನೀರು ನಿಂತು ಸೊಳ್ಳೆಗಳ ಉತ್ಪತ್ತಿಗೆ ಅನುಕೂಲಕರ ವಾತಾವರಣ ನಿರ್ಮಾಣವಾಗುತ್ತದೆ. ಹೀಗಾಗಿ ಪ್ರತಿಯೊಬ್ಬ ನಾಗರಿಕರೂ ತಮ್ಮ ಮನೆ ಮತ್ತು ಸುತ್ತ-ಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ನೀರು ಸಂಗ್ರಹವಾಗದಂತೆ ಎಚ್ಚರ ವಹಿಸುವ ಮೂಲಕ ಸೊಳ್ಳೆಗಳಿಂದ ಹರಡುವ ರೋಗಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು ಎಂದು ಮೇಯರ್ ಪ್ರೀತಿ ಕಾಮಕರ ಹೇಳಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಮಳೆಗಾಲದಲ್ಲಿ ಮನೆ, ಕಟ್ಟಡ, ರಸ್ತೆ ಬದಿ ಹಾಗೂ ಖಾಲಿ ನಿವೇಶನಗಳಲ್ಲಿ ನೀರು ನಿಂತು ಸೊಳ್ಳೆಗಳ ಉತ್ಪತ್ತಿಗೆ ಅನುಕೂಲಕರ ವಾತಾವರಣ ನಿರ್ಮಾಣವಾಗುತ್ತದೆ. ಹೀಗಾಗಿ ಪ್ರತಿಯೊಬ್ಬ ನಾಗರಿಕರೂ ತಮ್ಮ ಮನೆ ಮತ್ತು ಸುತ್ತ-ಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ನೀರು ಸಂಗ್ರಹವಾಗದಂತೆ ಎಚ್ಚರ ವಹಿಸುವ ಮೂಲಕ ಸೊಳ್ಳೆಗಳಿಂದ ಹರಡುವ ರೋಗಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು ಎಂದು ಮೇಯರ್ ಪ್ರೀತಿ ಕಾಮಕರ ಹೇಳಿದರು.ಬೆಳಗಾವಿ ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಡೆಂಘೀ ವಿರೋಧಿ ಮಾಸಾಚರಣೆ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಡೆಂಘೀ ತಡೆ ಕೇವಲ ಆರೋಗ್ಯ ಇಲಾಖೆ ಅಥವಾ ಮಹಾನಗರ ಪಾಲಿಕೆಯ ಜವಾಬ್ದಾರಿಯಲ್ಲ. ಸಾರ್ವಜನಿಕರು, ಸಂಘ-ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಸ್ಥಳೀಯ ಸಮುದಾಯಗಳು ಸಕ್ರಿಯವಾಗಿ ಕೈಜೋಡಿಸಿದಾಗ ಮಾತ್ರ ಸೊಳ್ಳೆ ನಿಯಂತ್ರಣ ಅಭಿಯಾನ ಯಶಸ್ವಿಯಾಗುತ್ತದೆ. ಪ್ರತಿಯೊಂದು ಮನೆಯಲ್ಲೂ ವಾರಕ್ಕೊಮ್ಮೆ ಒಣ ದಿನ ಆಚರಿಸಿ, ನೀರು ಸಂಗ್ರಹಿಸುವ ಪಾತ್ರೆಗಳನ್ನು ಖಾಲಿ ಮಾಡಿ ಸ್ವಚ್ಛಗೊಳಿಸಬೇಕು ಎಂದು ಮನವಿ ಮಾಡಿದರು.ಮನೆಯ ಚಾವಣಿ, ಹೂವಿನ ಕುಂಡ, ಹಳೆಯ ಟೈರ್, ತೆಂಗಿನ ಚಿಪ್ಪು, ಪ್ಲಾಸ್ಟಿಕ್ ಡಬ್ಬಿ, ಬಕೆಟ್, ನೀರಿನ ತೊಟ್ಟಿ, ಫ್ರಿಜ್ ಹಿಂಭಾಗದ ತಟ್ಟೆ ಹಾಗೂ ಬಳಕೆಯಾಗದ ವಸ್ತುಗಳಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ಡೆಂಘೀ ಹರಡುವ ಈಡಿಸ್ ಸೊಳ್ಳೆಗಳು ಸ್ವಚ್ಛ ನೀರಿನಲ್ಲಿಯೇ ಹೆಚ್ಚಾಗಿ ಸಂತಾನೋತ್ಪತ್ತಿ ಮಾಡುವುದರಿಂದ ನೀರು ಸಂಗ್ರಹವಾಗುವ ಸಣ್ಣ ಸ್ಥಳಗಳನ್ನೂ ನಿರ್ಲಕ್ಷಿಸಬಾರದು ಎಂದು ಮನವಿ ಮಾಡಿದರು.ನಗರದ ಎಲ್ಲ ವಾರ್ಡ್‌ಗಳಲ್ಲಿ ಲಾರ್ವಾ ಸಮೀಕ್ಷೆಯನ್ನು ತೀವ್ರಗೊಳಿಸಬೇಕು. ಜ್ವರದಿಂದ ಬಳಲುತ್ತಿರುವವರನ್ನು ಗುರುತಿಸಿ ತ್ವರಿತವಾಗಿ ಪರೀಕ್ಷೆಗೆ ಒಳಪಡಿಸುವುದು ಹಾಗೂ ರೋಗ ಪತ್ತೆಯಾದ ಪ್ರದೇಶಗಳಲ್ಲಿ ತಕ್ಷಣವೇ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮೇಯರ್ ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಜಗದೀಶ ಜಿಂಗಿ ಪ್ರಾಸ್ತಾವಿಕವಾಗಿ ಮಾತನಾಡಿ, ನಗರದಲ್ಲಿ 1 ಮಲೇರಿಯಾ, 6 ಡೆಂಘೀ, 4 ಚಿಕುನಗುನ್ಯಾ ವರದಿಯಾಗಿದ್ದು, ನಿಯಂತ್ರಣಕ್ಕಾಗಿ ಕಚೇರಿ ಸಿಬ್ಬಂದಿ ಹಾಗೂ ತಾಲೂಕು ಬೆಳಗಾವಿಯ ಸಿಬ್ಬಂದಿ ನಿರಂತರವಾಗಿ ನಗರದಲ್ಲಿ ಲಾರ್ವಾ ಸಮಿಕ್ಷೆ ಮತ್ತು ಜ್ವರ ಸಮಿಕ್ಷೆ ಕೈಗೊಂಡು ರೋಗ ನಿಯಂತ್ರಣದಲ್ಲಿರುತ್ತದೆ ಎಂದು ತಿಳಿಸಿದರು.ಡೆಂಘೀ ರೋಗಕ್ಕೆ ನಿರ್ದಿಷ್ಟ ಔಷಧವಿಲ್ಲದ ಕಾರಣ ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ಪಡೆಯುವುದು ಮುಖ್ಯವಾಗಿದೆ. ಜ್ವರ ಬಂದಾಗ ದೇಹದಲ್ಲಿ ನೀರಿನ ಕೊರತೆಯಾಗದಂತೆ ಸಾಕಷ್ಟು ದ್ರವ ಆಹಾರ ಸೇವಿಸಬೇಕು. ವೈದ್ಯರ ಸಲಹೆಯಿಲ್ಲದೆ ನೋವು ನಿವಾರಕ ಮಾತ್ರೆಗಳನ್ನು ಸೇವಿಸಬಾರದು ಎಂದರು.ಕಾರ್ಯಕ್ರಮದ ಬಳಿಕ ಕೆಎಲ್‌ಇ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ನಗರದ ವಿವಿಧ ಪ್ರದೇಶಗಳಲ್ಲಿ ಮನೆ ಮನೆಗೆ ತೆರಳಿ ಲಾರ್ವಾ ಸಮೀಕ್ಷೆ ನಡೆಸಿದರು. ನೀರು ಸಂಗ್ರಹವಾಗಿದ್ದ ಪಾತ್ರೆಗಳನ್ನು ಖಾಲಿ ಮಾಡಿಸಿ, ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಪಡಿಸುವ ಕುರಿತು ನಿವಾಸಿಗಳಿಗೆ ಮಾಹಿತಿ ನೀಡಿದರು.ಸೊಳ್ಳೆ ಕಚ್ಚದಂತೆ ಪೂರ್ಣ ತೋಳಿನ ಬಟ್ಟೆ ಧರಿಸುವುದು, ಸೊಳ್ಳೆ ಪರದೆ ಹಾಗೂ ಸೊಳ್ಳೆ ನಿರೋಧಕಗಳನ್ನು ಬಳಸುವುದು, ಮನೆ ಬಾಗಿಲು ಮತ್ತು ಕಿಟಕಿಗಳಿಗೆ ಜಾಲರಿ ಅಳವಡಿಸುವುದು ಹಾಗೂ ರಾತ್ರಿ ಮಾತ್ರವಲ್ಲದೆ ಹಗಲಿನಲ್ಲಿಯೂ ಸೊಳ್ಳೆ ಕಡಿತದಿಂದ ರಕ್ಷಿಸಿಕೊಳ್ಳುವುದು ಅಗತ್ಯ ಎಂದು ಜಾಗೃತಿ ಮೂಡಿಸಿದರು.ಜಾಗೃತಿ ಜಾಥಾದಲ್ಲಿ ವಿದ್ಯಾರ್ಥಿಗಳು ಡೆಂಘೀ ತಡೆ, ಪರಿಸರ ಸ್ವಚ್ಛತೆ, ನೀರು ನಿಲ್ಲದಂತೆ ಎಚ್ಚರಿಕೆ ಹಾಗೂ ಸೊಳ್ಳೆ ನಿಯಂತ್ರಣ ಕುರಿತು ಘೋಷಣೆಗಳನ್ನು ಕೂಗಿದರು. ಸಾರ್ವಜನಿಕರಿಗೆ ಡೆಂಗಿ ಹರಡುವ ವಿಧಾನ, ರೋಗದ ಲಕ್ಷಣಗಳು ಮತ್ತು ಮುನ್ನೆಚ್ಚರಿಕೆ ಕ್ರಮಗಳ ಕುರಿತು ಕರಪತ್ರಗಳನ್ನು ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಈಶ್ವರಪ್ಪ ಪಿ.ಗಡಾದ, ತಾಲೂಕು ಆರೋಗ್ಯಾಧಿಕಾರಿ ಡಾ.ಸಂಜೀವ ನಾಂದ್ರೆ, ಮಹಾನಗರ ಪಾಲಿಕೆಯ ಅಧಿಕಾರಿಗಳು, ವೈದ್ಯಾಧಿಕಾರಿಗಳು, ಆರೋಗ್ಯ ನಿರೀಕ್ಷಕರು, ಆಶಾ ಕಾರ್ಯಕರ್ತೆಯರು, ಕೆಎಲ್‌ಇ ನರ್ಸಿಂಗ್ ಕಾಲೇಜಿನ ಬೋಧಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ಬೆಳಗಾವಿ ನಗರದಲ್ಲಿ ಪ್ರಸ್ತುತ 1 ಮಲೇರಿಯಾ, 6 ಡೆಂಘೀ ಹಾಗೂ 4 ಚಿಕೂನ್‌ಗುನ್ಯಾ ಪ್ರಕರಣಗಳು ವರದಿಯಾಗಿವೆ. ಎಲ್ಲ ಪ್ರಕರಣಗಳ ಮೇಲೂ ಆರೋಗ್ಯ ಇಲಾಖೆ ನಿಗಾ ವಹಿಸಿದ್ದು, ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ.
-ಡಾ.ಜಗದೀಶ ಜಿಂಗಿ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ.