ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ಮಾನಸಿಕ ನೆಮ್ಮದಿ, ಶಾಂತಿಗಾಗಿ ಜನರು ಶ್ರದ್ಧಾ ಕೇಂದ್ರಗಳಿಗೆ ಆಗಮಿಸುತ್ತಾರೆ. ಅಂತಹ ಧಾರ್ಮಿಕ ಶ್ರದ್ಧಾ ಕೇಂದ್ರಗಳು ಒಂದು ಗ್ರಾಮದ ಅತೀ ಮುಖ್ಯ ಭಾಗವಾಗಿದ್ದು, ಇವುಗಳು ಸ್ವಚ್ಛವಾಗಿರುವುದು ಅತೀ ಅಗತ್ಯವಾಗಿದೆ. ಈ ಕುರಿತಂತೆ ಅರಿವು ಹಾಗೂ ಜಾಗೃತಿ ಮೂಡಿಸುವ ಸಲುವಾಗಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಮಾತೃಶ್ರೀ ಹೇಮಾವತಿ ಹೆಗ್ಗಡೆ ಅವರ ಚಿಂತನೆಯಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಜನ ಸಹಭಾಗಿತ್ವದಲ್ಲಿ ಶ್ರದ್ಧಾಕೇಂದ್ರಗಳ ಬೃಹತ್ ಸ್ವಚ್ಛತಾ ಅಭಿಯಾನವನ್ನು ರಾಜ್ಯಾದ್ಯಂತ ಕೈಗೊಳ್ಳಲಾಗುತ್ತಿದೆ ಎಂದು ಯೋಜನೆಯ ಪ್ರಕಟಣೆ ತಿಳಿಸಿದೆ.ಈ ಅಭಿಯಾನದಲ್ಲಿ ಜನರೇ ಸ್ವಯಂ ಪ್ರೇರಣೆಯಿಂದ ಸ್ವಯಂ ಸೇವಕರಾಗಿ ಪಾಲ್ಗೊಂಡು ವರ್ಷದಲ್ಲಿ 2 ಬಾರಿ ಅಂದರೆ ದೇಶದ ಸ್ವಾತಂತ್ರ್ಯೋತ್ಸವ ಮತ್ತು ಮಕರ ಸಂಕ್ರಾತಿಯ ಸಂದರ್ಭ ಸಪ್ತಾಹದ ಮೂಲಕ ಶ್ರದ್ಧಾ ಕೇಂದ್ರಗಳಾದ ದೇವಸ್ಥಾನ, ಬಸದಿ, ಮಸೀದಿ, ಚರ್ಚ್‌ಗಳ ಸ್ವಚ್ಛತೆಯನ್ನು ಕೈಗೊಳ್ಳುವ ಮೂಲಕ ಸ್ವಚ್ಛತಾ ಸಂದೇಶ ಸಾರುತ್ತಾರೆ.
ಕಳೆದ 8 ವರ್ಷಗಳಿಂದ ನಿರಂತರವಾಗಿ ಸ್ವ-ಸಹಾಯ ಸಂಘಗಳ ಸದಸ್ಯರು ಶ್ರದ್ಧಾಕೇಂದ್ರದ ಸ್ವಚ್ಛತೆಯನ್ನು ಕೈಗೊಳ್ಳುತ್ತಿದ್ದು, ಬರುವ ಸ್ವಾತಂತ್ರ್ಯೋತ್ಸವ ಪೂರ್ವ ಆ. 8 ರಿಂದ 14 ರವರೆಗೆ ಶ್ರದ್ಧಾಕೇಂದ್ರಗಳ ಸ್ವಚ್ಛತಾ ಸಪ್ತಾಹವನ್ನು ನಡೆಸಲಾಗುವುದು.ಈ ಅಭಿಯಾನದಲ್ಲಿ ರಾಜ್ಯದಾದ್ಯಂತ 16, 797 ಶ್ರದ್ಧಾ ಕೇಂದ್ರಗಳನ್ನು ಗುರುತಿಸಲಾಗಿದ್ದು, ಸುಮಾರು 3, 95, 724 ಸ್ವಯಂ ಸೇವಕರು, ದೇವಾಲಯದ ಆಡಳಿತ ಮಂಡಳಿ, ಒಕ್ಕೂಟದ ಪದಾಧಿಕಾರಿಗಳು, ಜನಜಾಗೃತಿ ಸದಸ್ಯರು, ನವಜೀವನ ಸಮಿತಿಯ ಸದಸ್ಯರು, ಶೌರ್ಯ ವಿಪತ್ತು ನಿರ್ವಹಣೆಯ ಸದಸ್ಯರು, ಸ್ವಚ್ಛತಾ ಸೇನಾನಿಗಳು, ಊರಿನ ಗಣ್ಯರು, ಗ್ರಾ.ಪಂ.ನ ಸದಸ್ಯರು ವಿವಿಧ ಸಂಘ ಸಂಸ್ಥೆಯ ಕಾರ್ಯಕರ್ತರು ಭಾಗವಹಿಸಿ ರಾಜ್ಯಾದಾದ್ಯಂತ ನಡೆಯುವ ಸ್ವಚ್ಛತಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಿದ್ದಾರೆ ಎಂದು ತಿಳಿಸಲಾಗಿದೆ.ನಡೆಯುವ ಸ್ವಚ್ಛತಾ ಕಾರ್ಯಕ್ರಮಗಳ ವಿವರ:
ದೇವಸ್ಥಾನದ ಸುತ್ತಮುತ್ತಲಿನ ಗಿಡ ಘಂಟಿಗಳನ್ನು ತೆಗೆದು ಸ್ವಚ್ಛಗೊಳಿಸುವುದು. ಮಂದಿರ, ಮಸೀದಿ, ಚರ್ಚ್‌ಗಳ ಆವರಣ ಸ್ವಚ್ಛತೆ, ಒಳಾಂಗಣ ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು. ದೇವಸ್ಥಾನದ ಕಲ್ಯಾಣಿ, ಸಭಾಭವನ, ಅಶ್ವಥ ಕಟ್ಟೆ/ಅರಳಿಕಟ್ಟೆ ಸ್ವಚ್ಛಗೊಳಿಸುವುದು. ಶ್ರದ್ಧಾ ಕೇಂದ್ರದ ಪರಿಕರಗಳನ್ನು ಸ್ವಚ್ಛಗೊಳಿಸುವುದು. ಸಾರ್ವಜನಿಕ ಶೌಚಾಲಯ, ನಗರ ಸ್ವಚ್ಛತೆ, ಬೀದಿ ಸ್ವಚ್ಛತೆಗೆ ಒತ್ತು ನೀಡಲಾಗುವುದು. ಶ್ರದ್ಧಾಕೇಂದ್ರಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಲ್ಲಿಸಿ, ಬಟ್ಟೆ ಚೀಲ ಬಳಕೆ ಮಾಡುವುದು.ಜಾತ್ರೆ, ವಿಶೇಷ ಕಾರ್‍ಯಕ್ರಮದ ದಿನ ಸ್ವಚ್ಛತೆಗೆ ತಂಡ ರಚಿಸಿ ಜಾಗೃತಿ ಮೂಡಿಸುವುದು. ಸ್ವಚ್ಛತೆಯ ಬಗ್ಗೆ ನಿಗಾ ವಹಿಸುವ ಆಸಕ್ತ ಸ್ವಯಂಸೇವಕರ ಕಾವಲು ಸಮಿತಿ ರಚನೆ ಮಾಡುವುದು. ತ್ಯಾಜ್ಯಗಳನ್ನು ಬಿಸಾಡಲು ಡಸ್ಟ್‌ಬಿನ್ ಇಟ್ಟು ಕಸವನ್ನು ಅಲ್ಲಿಯೇ ಹಾಕುವಂತೆ ಭಕ್ತಾದಿಗಳಿಗೆ ಸೂಚನೆ ನೀಡುವ ಫಲಕಗಳನ್ನು ಹಾಕುವುದು. ಕಾರ್‍ಯಕ್ರಮದ ದಿನ ಸ್ವಚ್ಛತೆಗೆ ತಂಡ ರಚಿಸಿ ಜಾಗೃತಿ ಮೂಡಿಸುವುದು.