ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರು
ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ಇಲ್ಲಿನ ಜನಪ್ರತಿನಿಧಿ ಅಧಿಕಾರಿಗಳು ಸಹಕಾರ ನೀಡುವ ಮೂಲಕ ಬಂದಿರುವ ಅನುದಾನವನ್ನು ಸದ್ಬಳಕೆ ಮಾಡಿಕೊಂಡು ಕುಡಿಯುವ ನೀರು, ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡುವಂತೆ ಶಾಸಕ ಎಂ.ಆರ್.ಮಂಜುನಾಥ್ ತಿಳಿಸಿದರು.ಹನೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬಡಾವಣೆಗಳಲ್ಲಿ ನಗರೋತ್ಥಾನ ಕೇಂದ್ರ ಪುರಸ್ಕೃತ ಕುಡಿಯುವ ನೀರಿನ ಯೋಜನೆ ಹಾಗೂ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಚರ್ಚಿಸಲು ಕರೆಯಲಾಗಿದ್ದ ಸರ್ವ ಸದಸ್ಯರ ಹಾಗೂ ಅಧಿಕಾರಿ ಸಿಬ್ಬಂದಿ ಸಭೆಯಲ್ಲಿ ಅವರು ಮಾತನಾಡಿದರು.
ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ: ಪಟ್ಟಣ ಪಂಚಾಯಿತಿ ವ್ಯಾಪ್ತಿಯ 13 ವಾರ್ಡ್‌ಗಳಲ್ಲಿಯೂ ಬರುವ ಸಾರ್ವಜನಿಕರ ಅಹವಾಲುಗಳು ಚಾಚು ತಪ್ಪದೇ ಸ್ವೀಕರಿಸಿ ಅಧಿಕಾರಿಗಳು ಮತ್ತು ಎಲ್ಲಾ ಸದಸ್ಯರು ಕೈಜೋಡಿಸುವ ಮೂಲಕ ಸಮಗ್ರ ಅಭಿವೃದ್ಧಿಗೆ ಮತ್ತು ಯಾವುದೇ ದೂರುಗಳು ಬರದಂತೆ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಕಚೇರಿಯಲ್ಲಿ ಅಲೆಯುವುದನ್ನು ತಪ್ಪಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.ಶುದ್ಧ ನೀರು ಸರಬರಾಜಿಗೆ ಆದ್ಯತೆ ನೀಡಿ: ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ವಾರ್ಡ್‌ಗಳ ಕುಡಿಯುವ ನೀರು ಸರಬರಾಜು ವ್ಯವಸ್ಥೆಗೆ ಅಮೃತ್ ನಗರೋತ್ಥಾನ 67 ಲಕ್ಷ ವೆಚ್ಚದಲ್ಲಿ ಯೋಜನೆ, ಹನೂರು ಪಟ್ಟಣದ ಕುಡಿಯುವ ನೀರಿನ ವ್ಯವಸ್ಥೆ ಅಡಿ ಸಿದ್ದಯ್ಯನಪುರ ಗ್ರಾಮ ಬಳಿ ಬರುವ ನೀರು ಶುದ್ದಿಕರಣ ಘಟಕ ದುರಸ್ತಿ ಹಾಗೂ ಪುನಶ್ಚೇತನ ಕಾಮಗಾರಿ ಯೋಜನೆ ಅಡಿ ವಿವಿಧ ಮೋಟಾರು ಪಂಪುಗಳ ಬದಲಾವಣೆ ಕ್ಲೋರಿನೇಷನ್ ಘಟಕದ ವಾಲ್‌ಗಳನ್ನು ನೂತನವಾಗಿ ನಿರ್ಮಾಣ ಮಾಡಿ ಕ್ರಮ ಕೈಗೊಳ್ಳಲು ಸಭೆಯಲ್ಲಿ ಚರ್ಚಿಸಲಾಯಿತು.ಈ ಸ್ವತ್ತು ಸಮಸ್ಯೆ ದೊಡ್ಡ ಸಮಸ್ಯೆ: ಪಟ್ಟಣದ ಆಶ್ರಯ ಬಡಾವಣೆ ಈ ಸ್ವತ್ತು ಸಮಸ್ಯೆ ಬಗ್ಗೆ ಈಗಾಗಲೇ ಉಪ ವಿಭಾಗಾಧಿಕಾರಿಗಳು ಇದರ ಬಗ್ಗೆ ತನಿಖೆ ನಡೆಸಿ ವರದಿ ನೀಡಲಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಪಟ್ಟಣದ ಈ ಸ್ವತ್ತು ಸಮಸ್ಯೆಯನ್ನು ಬಗೆಹರಿಸಲು ವಿವಿಧ ಹಂತಗಳಲ್ಲಿ ಗ್ರಾಮ ಠಾಣೆ ಮತ್ತು ಆಶ್ರಯ ಬಡಾವಣೆ ಸೇರಿದಂತೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ದೊಡ್ಡ ಸಮಸ್ಯೆಯಾಗಿ ಕಾಡುತ್ತಿರುವ ಸಮಸ್ಯೆಯನ್ನು ಬಗೆಹರಿಸಲು ನಾನು ಸೇರಿದಂತೆ ಅಧಿಕಾರಿಗಳ ತಂಡ ರಚನೆ ಮಾಡಿ ವಿಶೇಷವಾಗಿ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಕ್ರಮ ವಹಿಸಲಾಗುವುದು ಎಂದು ಸಭೆಯಲ್ಲಿ ಭರವಸೆ ನೀಡಿದರು.
ಪಟ್ಟಣದ ಅಭಿವೃದ್ಧಿಗೆ ಆದ್ಯತೆ: ಪಟ್ಟಣದ ಪ್ರತಿ ವಾರ್ಡ್‌ಗಳಲ್ಲಿಯೂ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳಾದ ಸಿಸಿ ರಸ್ತೆ ಮತ್ತು ಒಳಚರಂಡಿ ನಿರ್ಮಾಣಗಳ ಬಗ್ಗೆ ಸಮುದಾಯ ಭವನ ನಿರ್ಮಾಣಗಳ ಬಗ್ಗೆ ಶಾಸಕರು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ನಂತರ ಪಟ್ಟಣ ಪಂಚಾಯಿತಿಯಲ್ಲಿ ಸಿಬ್ಬಂದಿ ಕೊರತೆ ಬಗ್ಗೆ ಈಗಾಗಲೇ ಸಂಬಂಧಪಟ್ಟವರ ಜೊತೆ ಚರ್ಚಿಸಿದ್ದೇನೆ. ಮುಂದಿನ ದಿನಗಳಲ್ಲಿ ಹೆಚ್ಚುವರಿ ಸಿಬ್ಬಂದಿ ನೇಮಕ ಮಾಡಲು ಕೊರತೆ ನೀಗಿಸಲು ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರಿಗೆ ಅಧಿಕಾರಿ ಸಿಬ್ಬಂದಿ ವರ್ಗದವರು ಕೆಲಸ ಕಾರ್ಯಗಳನ್ನು ಮಾಡಿಕೊಡಲು ವಿಳಂಬ ಧೋರಣೆ ಅನುಸರಿಸದೆ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದರು.ಇದೇ ಸಂದರ್ಭದಲ್ಲಿ ತಹಸೀಲ್ದಾರ್ ಗುರುಪ್ರಸಾದ್, ಪಟ್ಟಣ ಮುಖ್ಯ ಅಧಿಕಾರಿ ಅಶೋಕ್ ಹಾಗೂ ಪಟ್ಟಣ ಪಂಚಾಯಿತಿ ಅಧ್ಯಕ್ಷ ಮಮ್ತಾಜ್ ಬಾನು, ಉಪಾಧ್ಯಕ್ಷ ಅನಂತ್ ಕುಮಾರ್ ಸದಸ್ಯರುಗಳಾದ ಗಿರೀಶ್, ಮಹೇಶ್ ನಾಯಕ್, ಸೋಮಣ್ಣ, ಪವಿತ್ರ, ಮಂಜುಳಾ, ಹರೀಶ್,ಮಹೇಶ್, ಸುರೇಶ್ ಸಂಪತ್ ಕುಮಾರ್ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.