ಮಾಧ್ಯಮದ ಜೊತೆಗೆ ಸಮಾಜ ಸೇವೆ ಮಾಡುತ್ತಿರುವ ಮೀಡಿಯ ಮನಸು ತಂಡದಿಂದ ಕಸದ ಕೊಂಪೆಯಾಗಿ ಅವ್ಯವಸ್ಥೆಯಲ್ಲಿದ್ದ ಎರಡು ಬಸ್ ನಿಲ್ದಾಣಗಳಿಗೆ ಮರು ಜೀವ ನೀಡಿದೆ.
ಮೂಲ್ಕಿ: ಮಾಧ್ಯಮದ ಜೊತೆಗೆ ಸಮಾಜ ಸೇವೆ ಮಾಡುತ್ತಿರುವ ಮೀಡಿಯ ಮನಸು ತಂಡದಿಂದ ಕಸದ ಕೊಂಪೆಯಾಗಿ ಅವ್ಯವಸ್ಥೆಯಲ್ಲಿದ್ದ ಎರಡು ಬಸ್ ನಿಲ್ದಾಣಗಳಿಗೆ ಮರು ಜೀವ ನೀಡಿದೆ.
ರಾಷ್ಟ್ರೀಯ ಹೆದ್ದಾರಿಯ ಕುಳಾಯಿ ಹೊನ್ನಕಟ್ಟೆ ಮತ್ತು ಹೊಸಬೆಟ್ಟು ಬಸ್ ನಿಲ್ದಾಣ ನಿತ್ಯ ನೂರಾರು ಪ್ರಯಾಣಿಕರು ಬಂದು ಹೋಗುವ ಬಸ್ ನಿಲ್ದಾಣ. ಕೆಲವು ದಿನದ ಹಿಂದಷ್ಟೇ ನಗರಪಾಲಿಕೆ ಸ್ವಚ್ಛತಾ ಕಾರ್ಮಿಕರು ಸುತ್ತಲೂ ಬೆಳೆದಿದ್ದ ಹುಲ್ಲನ್ನು ಕತ್ತರಿಸಿ ತಮ್ಮ ಜವಾಬ್ದಾರಿ ಮುಗಿಸಿದ್ದರು. ಆದರೆ, ಬಸ್ಸಿಗಾಗಿ ಕಾಯುವ ಸಾರ್ವಜನಿಕರು ನಿಲ್ದಾಣದೊಳಗೆ ಕಾಲಿಟ್ಟರೆ ಒಂದೆರಡು ನಿಮಿಷ ಕುಳಿತುಕೊಳ್ಳಲೂ ಸಾಧ್ಯವಾಗದಷ್ಟು ಅಸಹ್ಯಕರ ವಾತಾವರಣವಿತ್ತು.ಬಸ್ ನಿಲ್ದಾಣದ ಸ್ಥಿತಿಯನ್ನು ನಾಗರಿಕನೊಬ್ಬ ಕುಳಾಯಿ ಹೊನ್ನಕಟ್ಟೆ ಮತ್ತು ಹೊಸಬೆಟ್ಟು ಬಸ್ ನಿಲ್ದಾಣಗಳ ಅವ್ಯವಸ್ಥೆ ಬಗ್ಗೆ ಮೀಡಿಯಾ ಮನಸುಗಳು ತಂಡದ ಗಮನಕ್ಕೆ ತಂದಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ತಂಡ ಕೈಯಲ್ಲಿ ಪೊರಕೆ, ನೀರು ಮತ್ತು ಸ್ವಚ್ಚತಾ ಸಾಮಗ್ರಿಗಳೊಂದಿಗೆ ಶ್ರಮದಾನ ನಡೆಸಿದೆ.
ಎರಡು ಬಸ್ ನಿಲ್ದಾಣಗಳಲ್ಲಿ ಸಂಗ್ರಹವಾದ ಮೂಟೆಗಟ್ಟಲೆ ಪ್ಲಾಸ್ಟಿಕ್ ತ್ಯಾಜ್ಯ, ಗುಟ್ಕಾ ಪ್ಯಾಕೆಟ್, ಬಾಟಲಿಗಳನ್ನು ಮನಪಾ ವಾಹನದಲ್ಲಿ ಸಾಗಿಸಲಾಯಿತು.ಪತ್ರಕರ್ತರು ಸುದ್ದಿ ವರದಿ ಮಾಡುವುದಕ್ಕಷ್ಟೇ ತಮ್ಮ ಜವಾಬ್ದಾರಿ ಸೀಮಿತವಲ್ಲ, ಸಾಮಾಜಿಕ ಕಾಳಜಿಯಲ್ಲೂ ತಾವು ಮುಂಚೂಣಿಯಲ್ಲಿರುತ್ತೇವೆ ಎಂಬುದನ್ನು ಸಾಬೀತುಪಡಿಸಿದ್ದಾರೆ. ಈ ಕಾರ್ಯಕ್ಕೆ ಸಂತೋಷ್ ಹೊಸಬೆಟ್ಟು ಹಾಗೂ ಹೊನ್ನಕಟ್ಟೆ ಅಭಿನಂದನ್ ಹೋಟೆಲ್ ನವೀನ್ ದೇವಾಡಿಗ ಅವರು ಸಹಕಾರ ನೀಡಿದ್ದರು. ಅಭಿಯಾನದಲ್ಲಿ ತಂಡದ ಪ್ರಮುಖರಾದ ಶಶಿ ಬೆಳ್ಳಾಯರು, ಶಿವು ಕುಲಾಲ್, ಗಿರೀಶ್ ಮಣೇಲ್, ರಾಕೇಶ್ ಎಕ್ಕಾರ್ ಹಾಗೂ ಸಂದೇಶ್ ಶೆಟ್ಟಿ, ಅನೂಪ್ ಸೂರಿಂಜೆ ಭಾಗವಹಿಸಿದ್ದರು.