ಸಿದ್ದೇಶ್ವರ, ರವಿ ನೇತೃತ್ವದಲ್ಲಿ ದೇಗುಲಗಳ ಸ್ವಚ್ಛತೆ

| Published : Jan 15 2024, 01:47 AM IST

ಸಾರಾಂಶ

ನಗರದ ವೀರ ಮದಕರಿ ನಾಯಕ ವೃತ್ತದ ಬಳಿ ಶ್ರೀ ಕೇದಾರಲಿಂಗೇಶ್ವರ ದೇವಸ್ಥಾನ ಹಾಗೂ ಶ್ರೀ ಚಂದ್ರಮೌಳೇಶ್ವರ ದೇವಸ್ಥಾನ ಹಾಗೂ ಸುತ್ತಲಿನ ಪ್ರದೇಶವನ್ನು ಸಂಸದ ಡಾ.ಜಿ.ಎಂ.ಸಿದ್ದೇಶ್ವರ, ವಿಧಾನಪರಿಷತ್‌ ಮುಖ್ಯ ಸಚೇತಕ ಎನ್.ರವಿಕುಮಾರ, ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಎಂ.ವೀರೇಶ ಹನಗವಾಡಿ ಇತರರ ನೇತೃತ್ವದಲ್ಲಿ ಉಭಯ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಯಿತು.

ಅಯೋಧ್ಯೆ ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಕೇದಾರಲಿಂಗೇಶ್ವರ, ಚಂದ್ರಮೌಳೇಶ್ವರ ದೇವಸ್ಥಾನಗಳಲ್ಲಿ ಶುಚಿತ್ವ

ಕನ್ನಡಪ್ರಭ ವಾರ್ತೆ ದಾವಣಗೆರೆ

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಲೋಕಾರ್ಪಣೆ, ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ದೇಶಾದ್ಯಂತ ದೇಗುಲಗಳ ಸ್ವಚ್ಛತೆಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದ ಬೆನ್ನಲ್ಲೇ ಭಾನುವಾರ ಬಿಜೆಪಿ ಜಿಲ್ಲಾ ಘಟಕದಿಂದ ನಗರದ ವಿವಿಧ ದೇವಸ್ಥಾನಗಳ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು.

ನಗರದ ವೀರ ಮದಕರಿ ನಾಯಕ ವೃತ್ತದ ಬಳಿ ಶ್ರೀ ಕೇದಾರಲಿಂಗೇಶ್ವರ ದೇವಸ್ಥಾನ ಹಾಗೂ ಶ್ರೀ ಚಂದ್ರಮೌಳೇಶ್ವರ ದೇವಸ್ಥಾನ ಹಾಗೂ ಸುತ್ತಲಿನ ಪ್ರದೇಶವನ್ನು ಸಂಸದ ಡಾ.ಜಿ.ಎಂ.ಸಿದ್ದೇಶ್ವರ, ವಿಧಾನಪರಿಷತ್‌ ಮುಖ್ಯ ಸಚೇತಕ ಎನ್.ರವಿಕುಮಾರ, ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಎಂ.ವೀರೇಶ ಹನಗವಾಡಿ ಇತರರ ನೇತೃತ್ವದಲ್ಲಿ ಉಭಯ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಯಿತು.

ಈ ವೇಳೆ ಮಾತನಾಡಿದ ವಿಧಾನಪರಿಷತ್‌ ಮುಖ್ಯ ಸಚೇತಕ ಎನ್.ರವಿಕುಮಾರ, ಜ.22ರ ನಂತರ ಅಯೋಧ್ಯೆಗೆ ಹೋಗುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದನ್ನು ಸ್ವಾಗತಿಸುವೆ. ಸಿದ್ದರಾಮಯ್ಯ ಪರಿವರ್ತನೆಯಾಗಿರುವುದು ಒಳ್ಳೆಯದು. ರಾಮ ಎಂದರೇನೇ ಪರಿವರ್ತನೆ, ಸುಧಾರಣೆಯಾಗಿದೆ. ಗೃಹ ಸಚಿವ ಡಾ.ಜಿ.ಪರಮೇಶ್ವರ ಕೂಡ ಕಾಂಗ್ರೆಸ್ ತನ್ನ ನೀತಿ ಬದಲಿಸಿದರೆ, ಅಯೋಧ್ಯೆಗೆ ಹೋಗುವುದಾಗಿ ಹೇಳಿದ್ದಾರೆ. ಏನೇ ಆದರೂ ರಾಮಮಂದಿರ ಉದ್ಘಾಟನೆಯ ಐತಿಹಾಸಿಕ ಕಾರ್ಯಕ್ರಮಕ್ಕೆ ಸರ್ಕಾರ ಸಂಪೂರ್ಣ ಬೆಂಬಲ ನೀಡಬೇಕು ಎಂದರು.

ರಾಹುಲ್‌ ಯಾತ್ರೆಗೆ ವ್ಯಂಗ್ಯ:

ಶ್ರೀರಾಮಚಂದ್ರನ ಮಂದಿರ ಅಯೋಧ್ಯೆಯಲ್ಲಿ ಉದ್ಘಾಟನೆಯಾಗುವಾಗಲೇ ಕಾಂಗ್ರೆಸ್ಸಿಗರು ಭಾರತ್ ಜೋಡೋ ನ್ಯಾಯ ಯಾತ್ರೆ ಕೈಗೊಂಡಿದ್ದಾರೆ. ದೇಶ ವಾಸಿಗಳನ್ನು ಜಾತಿ, ಮತ, ಪಂಥದ ಹೊರತಾಗಿ ಬೆಸೆದಿರುವ ಪ್ರಭು ಶ್ರೀರಾಮನಿಗಿಂತಲೂ ಬೇರೊಂದು ಜೋಡೋ ಕಾರ್ಯಕ್ರಮ ರಾಹುಲ್ ಗಾಂಧಿ ಮಾಡುತ್ತಾರೆ. ಶ್ರೀರಾಮನ ವಿರುದ್ಧ ಇರುವವರು ಕಷ್ಟ ಅನುಭವಿಸುತ್ತಾರೆ ಎಂದು ಸೂಚ್ಯವಾಗಿ ತಿಳಿಸಿದರು.

ಸಂಸದ ಡಾ.ಜಿ.ಎಂ.ಸಿದ್ದೇಶ್ವರ ಮಾತನಾಡಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಜಗದೀಶ, ಉಪಾಧ್ಯಕ್ಷರಾದ ಶ್ರೀನಿವಾಸ ಟಿ.ದಾಸಕರಿಯಪ್ಪ, ದೂಡಾ ಮಾಜಿ ಅಧ್ಯಕ್ಷರಾದ ಯಶವಂತರಾವ್ ಜಾಧವ್, ರಾಜನಹಳ್ಳಿ ಶಿವಕುಮಾರ, ರೈತ ಮೋರ್ಚಾದ ರಾಜ್ಯ ಸಮಿತಿ ಸದಸ್ಯ ಬಿ.ಎಂ.ಸತೀಶ ಕೊಳೇನಹಳ್ಳಿ, ಎನ್.ರಾಜಶೇಖರ, ರಮೇಶ ನಾಯ್ಕ, ಪಾಲಿಕೆ ವಿಪಕ್ಷ ನಾಯಕ ಕೆ.ಪ್ರಸನ್ನಕುಮಾರ, ಸದಸ್ಯರಾದ ಗಾಯತ್ರಿಬಾಯಿ ಖಂಡೋಜಿರಾವ್. ಆರ್.ಎಲ್‌.ಶಿವಪ್ರಕಾಶ, ಆರ್.ಶಿವಾನಂದ, ಸೋಗಿ ಶಾಂತಕುಮಾರ, ಮುಖಂಡರಾದ ಶಿವನಗೌಡ ಟಿ.ಪಾಟೀಲ್‌, ಟಿಂಕರ ಮಂಜಣ್ಣ, ಗುರು ಸೋಗಿ, ಮಹಿಳಾ ಮೋರ್ಚಾದ ಪುಷ್ಪಾ ವಾಲಿ, ಭಾಗ್ಯ ಪಿಸಾಳೆ, ಲೀಲಮ್ಮ, ವೈ.ಶಿವಾನಂದ, ಗಂಗಾಧರ, ಸಂತೋಷ, ಶಂಕರಗೌಡ ಬಿರಾದಾರ, ಸಚಿನ್ ವರ್ಣೇಕರ್‌, ಕಿಶೋರಕುಮಾರ ಇತರರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಕಾಂಗ್ರೆಸ್‌ ಸರ್ಕಾರದಿಂದ ಅಭದ್ರತೆ ಭಾಗ್ಯ

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದ್ದು, ಬೆಳಗಾವಿ ಸುವರ್ಣಸೌಧದ ಕೂಗಳತೆ ದೂರದಲ್ಲೇ ಮಹಿಳೆಯೊಬ್ಬರನ್ನು ಬೆತ್ತಲೆ ಮಾಡಿ, ಹಲ್ಲೆ ಮಾಡಿದರೂ ಸರ್ಕಾರ ಕ್ರಮ ಕೈಗೊಂಡಿಲ್ಲ. ಮಹಿಳೆಯರಿಗೆ ಕಾಂಗ್ರೆಸ್ ಸರ್ಕಾರ ಅಭದ್ರತೆಯ ಭಾಗ್ಯ ನೀಡಿದೆ. ಗೃಹಲಕ್ಷ್ಮಿಯಡಿ ಮನೆ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ನೀಡುವ ಭರವಸೆ ನೀಡಿದ್ದವರು ಈಗ ಮೋಸ ಮಾಡುತ್ತಿದ್ದಾರೆ. ಬಹುತೇಕ ಮಹಿಳೆಯರಿಗೆ ಯೋಜನೆಯೇ ತಲುಪಿಲ್ಲ. ಸಿಎಂ ಸಿದ್ದರಾಮಯ್ಯ ಇದಕ್ಕೆಲ್ಲಾ ಬೆಲೆ ತೆರಬೇಕಾಗುತ್ತದೆ ಎಂದು ವಿಧಾನಪರಿಷತ್‌ ಮುಖ್ಯ ಸಚೇತಕ ಎನ್.ರವಿಕುಮಾರ ಎಚ್ಚರಿಸಿದರು.