ಕೆಲವು ಜಿಲ್ಲೆಗಳಲ್ಲಿ ಖಾಸಗಿ ಸ್ವಾಮ್ಯದ ಸಂಸ್ಥೆಗಳು ಸಿದ್ಧ ಬಿಸಿಯೂಟವನ್ನು ಶಾಲೆಗಳಿಗೆ ಪೂರೈಕೆ ಮಾಡುತ್ತಿದ್ದು, ಇತರೇ ಕಡೆಗಳಲ್ಲಿ ಶಾಲೆಗಳಲ್ಲಿಯೇ ಬಿಸಿಯೂಟ ತಯಾರಿಸಲಾಗುತ್ತಿದೆ. ಅಧಿಕಾರಿಗಳು ಎಲ್ಲ ಶಾಲೆ ಸಂದರ್ಶಿಸಿ ವಿದ್ಯಾರ್ಥಿಗಳಿಗೆ ನೀಡುವ ಬಿಸಿಯೂಟವನ್ನು ಖುದ್ದಾಗಿ ಸೇವಿಸಿ ಅದರ ಗುಣಮಟ್ಟ ಖಾತ್ರಿಪಡಿಸಿಕೊಳ್ಳಬೇಕು.
ಧಾರವಾಡ:
ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ-ಪ್ರೌಢಶಾಲಾ ವಿದ್ಯಾರ್ಥಿಗಳು ಮೊಟ್ಟೆ ಸಹಿತ ಪೌಷ್ಟಿಕ ಆಹಾರ ಒಳಗೊಂಡ ಶುಚಿ-ರುಚಿಯಾದ ಬಿಸಿಯೂಟ ಸೇವಿಸುವಂತೆ ಅಕ್ಷರ ದಾಸೋಹದ ಅಧಿಕಾರಿಗಳು ಗಮನ ನೀಡಬೇಕೆಂದು ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಸೂಚಿಸಿದರು.ನಗರದ ಶಿಕ್ಷಕಿಯರ ಸರ್ಕಾರಿ ತರಬೇತಿ ವಿದ್ಯಾಲಯದಲ್ಲಿ ಕಿತ್ತೂರು ಕರ್ನಾಟಕ ಶೈಕ್ಷಣಿಕ ವಲಯದ 9 ಜಿಲ್ಲೆಗಳಲ್ಲಿ ಪ್ರಧಾನ ಮಂತ್ರಿ ಪೋಷಣ ಶಕ್ತಿ ನಿರ್ಮಾಣ ಅಭಿಯಾನ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನೆಯಲ್ಲಿ ಮಾತನಾಡಿದ ಅವರು, ಈಗಾಗಲೇ ಕೆಲವು ಜಿಲ್ಲೆಗಳಲ್ಲಿ ಖಾಸಗಿ ಸ್ವಾಮ್ಯದ ಸಂಸ್ಥೆಗಳು ಸಿದ್ಧ ಬಿಸಿಯೂಟವನ್ನು ಶಾಲೆಗಳಿಗೆ ಪೂರೈಕೆ ಮಾಡುತ್ತಿದ್ದು, ಇತರೇ ಕಡೆಗಳಲ್ಲಿ ಶಾಲೆಗಳಲ್ಲಿಯೇ ಬಿಸಿಯೂಟ ತಯಾರಿಸಲಾಗುತ್ತಿದೆ. ಅಧಿಕಾರಿಗಳು ಎಲ್ಲ ಶಾಲೆ ಸಂದರ್ಶಿಸಿ ವಿದ್ಯಾರ್ಥಿಗಳಿಗೆ ನೀಡುವ ಬಿಸಿಯೂಟವನ್ನು ಖುದ್ದಾಗಿ ಸೇವಿಸಿ ಅದರ ಗುಣಮಟ್ಟ ಖಾತ್ರಿಪಡಿಸಿಕೊಳ್ಳಬೇಕು ಎಂದರು.
ಶುಚಿತ್ವಕ್ಕೆ ಆದ್ಯತೆ ಅಗತ್ಯ:ಶಾಲೆಗಳಲ್ಲಿ ಬಿಸಿಯೂಟ ತಯಾರಿ, ವಿತರಣೆ ಜತೆಗೆ ಆಹಾರ ಧಾನ್ಯಗಳ ಸಂಗ್ರಹದ ವಿಚಾರದಲ್ಲಿ ಎಲ್ಲಿಯೂ ಹುಳಗಳು ಕಾಣಿಸಿಕೊಳ್ಳದಂತೆ ವ್ಯಾಪಕ ಶುಚಿತ್ವಕ್ಕೆ ಆದ್ಯತೆ ನೀಡುವ ಅಗತ್ಯವಿದೆ. ನಿತ್ಯದ ಪ್ರಾರ್ಥನಾ ಸಮಯದಲ್ಲಿ ‘ಊಟಕ್ಕೂ ಮುನ್ನ ವಿದ್ಯಾರ್ಥಿಗಳು ಸ್ವಚ್ಛವಾಗಿ ಕೈತೊಳೆದುಕೊಳ್ಳಬೇಕು’ ಎಂಬ ಸಾಮೂಹಿಕ ಸಂದೇಶ ಬಿತ್ತರಿಸಬೇಕು. ಬಿಸಿಯೂಟ ವಿತರಣೆ ಮೂಲಕ ಅವರ ದೈಹಿಕ ಆರೋಗ್ಯ ವರ್ಧನೆಯಾಗಬೇಕೇ ವಿನಃ ಎಲ್ಲಿಯೂ ಮಕ್ಕಳಿಗೆ ಆರೋಗ್ಯದ ಹಿನ್ನೆಡೆಯಾಗದಂತೆ ಇಲಾಖೆಯ ಭಾಗೀದಾರರು ಎಚ್ಚರಿಕೆವಹಿಸಬೇಕು ಎಂದ ಅವರು, ವಾರದ 6 ದಿನವೂ ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರವಾಗಿ ಕುದಿಸಿದ ಮೊಟ್ಟೆ ನೀಡಲಾಗುತ್ತಿದ್ದು, ಈ ಮೊಟ್ಟೆ ವಿತರಣೆಯ ವೆಚ್ಚ ಭರಿಸಲು ನೀಡಲಾಗುವ ವಿಶೇಷ ಅನುದಾನದ ಹಣಕಾಸು ನಿರ್ವಹಣೆ ಕುರಿತು ಅಧಿಕಾರಿಗಳು ಪರಿಶೀಲಿಸಬೇಕು ಎಂದು ಹೇಳಿದರು.
ಅಪರ ಆಯುಕ್ತರ ಕಚೇರಿಯ ನಿರ್ದೇಶಕ ಈಶ್ವರ ನಾಯಕ, ಜಂಟಿ ನಿರ್ದೇಶಕ ಜಯಶ್ರೀ ಕಾರೇಕರ, ಉಪನಿರ್ದೇಶಕ ಗಿರೀಶ ಪದಕಿ, ಶೈಕ್ಷಣಿಕ ಜಿಲ್ಲೆಗಳ ಅಕ್ಷರ ದಾಸೋಹದ ಜಿಲ್ಲಾ ಶಿಕ್ಷಣಾಧಿಕಾರಿಗಳು ಹಾಗೂ ತಾಲೂಕು ಮಟ್ಟದ ಸಹಾಯಕ ನಿರ್ದೇಶಕರು ಇದ್ದರು.