ಪರಿಸರ ಉಳಿಸುವ ಮನೋಭಾವದಿಂದ ಎಲ್ಲರೂ ಕೈಜೋಡಿಸಿ ನದಿ, ಪರಿಸರ ಮತ್ತು ಸಮಾಜ ಉಳಿಸುವ ಕೆಲಸ ಆಗಬೇಕು
ಕೊಪ್ಪಳ: ಸ್ವಚ್ಛತೆ ಒಂದು ದಿನದ ಆಲೋಚನೆಯಾಗಬಾರದು, ಜನರು ಸ್ವಾಭಾವಿಕವಾಗಿ ಸೇರಿಕೊಂಡು ನಿರಂತರವಾಗಿ ಪರಿಸರ ಸಂರಕ್ಷಣೆಯ ಕೆಲಸದಲ್ಲಿ ಭಾಗವಹಿಸಬೇಕು ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಗೊಂಡಬಾಳ ಹೇಳಿದರು.
ತಾಲೂಕಿನ ಐತಿಹಾಸಿಕ ಹುಲಿಗಿ ಜಾತ್ರಾಮಹೋತ್ಸವದ ಸಂದರ್ಭದಲ್ಲಿ ನಮ್ಮ ನದಿ ನಮ್ಮ ಹೊಣೆ ಎಂಬ ಘೋಷಣೆಯಡಿ ತುಂಗಭದ್ರಾ ನದಿ ತಟದಲ್ಲಿ ಅಂಗಳ ಟ್ರಸ್ಟ್‌ನ ಹಾಗೂ ವಿಸ್ತಾರ ಸಂಸ್ಥೆಯವರು ಹಾಗೂ ಜನರ ಸಹಭಾಗಿತ್ವದಲ್ಲಿ ನಡೆದ ಸ್ವಚ್ಛತಾ ಹಾಗೂ ಜಾಗೃತಿ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದರು.ಪರಿಸರ ಉಳಿಸುವ ಮನೋಭಾವದಿಂದ ಎಲ್ಲರೂ ಕೈಜೋಡಿಸಿ ನದಿ, ಪರಿಸರ ಮತ್ತು ಸಮಾಜ ಉಳಿಸುವ ಕೆಲಸ ಆಗಬೇಕು, ಇದು ಇಲಾಖೆ, ಪ್ರಾಧಿಕಾರ, ಸಂಘಟನೆ ಹಾಗೂ ಸಾರ್ವಜನಿಕರು ಒಟ್ಟಾಗಿ ಕೈಜೋಡಿಸಿದಾಗ ಮಾತ್ರ ನದಿ ಉಳಿಸಲು ಸಾಧ್ಯ ಎಂದರು.
ಹುಲಿಗಿ ಜಾತ್ರಾಮಹೋತ್ಸವದಲ್ಲಿ ಆರಂಭವಾದ ಈ ಹೆಜ್ಜೆ ಮುಂದೆ ನಿರಂತರವಾಗಿ ನಡೆಯಲಿದೆ, ಜಾತ್ರೆ ನಂತರ ಬೃಹತ್ ಸ್ವಚ್ಛತಾ ಕಾರ್ಯ ಮಾಡಬೇಕಿದೆ ಎಂದ ಅವರು, ಇಲ್ಲಿ ಸರಿಯಾದ ಮಾಹಿತಿ ಫಲಕ ಹಾಕಬೇಕಿದೆ, ಅದರಲ್ಲಿ ಜನರು ಅಲ್ಲಿ ತೆಗೆದ ಬಟ್ಟೆ ಹಾಕಲು ಪ್ರತ್ಯೇಕವಾಗಿ ದೊಡ್ಡ ದೋಣಿ ಆಕಾರದಲ್ಲಿ ಸ್ಥಳ ಮಾಡಬೇಕು ಎಲ್ಲ ಕಸ ಡಬ್ಬಿಗಳಲ್ಲಿ ಹಾಕುವ ಹಾಗೇ ಮಾಡಬೇಕು, ಈ ನಿಟ್ಟಿನಲ್ಲಿ ಪ್ರಾಧಿಕಾರ ಮೊದಲ ಆದ್ಯತೆಯ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.ಅಂಗಳ ಸಂಸ್ಥೆಯ ಜ್ಯೋತಿ ಹಿಟ್ನಾಳ ಮಾತನಾಡಿ, ತುಂಗಭದ್ರಾ ನದಿ ಇಂದು ಹೆಚ್ಚುತ್ತಿರುವ ಪ್ಲಾಸ್ಟಿಕ್ ಹಾಗೂ ಕಸದ ಸಮಸ್ಯೆಯಿಂದ ತನ್ನ ಸ್ವಚ್ಛತೆ ಕಳೆದುಕೊಳ್ಳುತ್ತಿರುವುದು ಬೇಸರದ ಸಂಗತಿ. ನದಿ ತೀರದಲ್ಲಿ ಶೌಚಾಲಯ ವ್ಯವಸ್ಥೆಯ ಕೊರತೆ, ಕಸ ವಿಲೇವಾರಿ ವ್ಯವಸ್ಥೆಯ ಅಭಾವ ಹಾಗೂ ಸ್ವಚ್ಛತಾ ಸೌಲಭ್ಯಗಳ ಕೊರತೆ ಪರಿಸರಕ್ಕೆ ಹಾನಿಯಾಗುತ್ತಿರುವುದು ಅಭಿಯಾನದ ವೇಳೆ ಗಮನಿಸಲಾಯಿತು. ಈ ಹಿನ್ನೆಲೆಯಲ್ಲಿ ಅಗತ್ಯ ಮೂಲಭೂತ ಸೌಲಭ್ಯ ಒದಗಿಸುವಂತೆ ಸಂಬಂಧಪಟ್ಟ ಪ್ರಾಧಿಕಾರಗಳಿಗೆ ಮನವಿ ಸಲ್ಲಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ಪ್ಲಾಸ್ಟಿಕ್ ಬಳಕೆ ನಿಲ್ಲಿಸಿ:ಬಟ್ಟೆ ಚೀಲ ಬಳಸಿ ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ನದಿಗೂ ಜೀವಿಸುವ ಹಕ್ಕಿದೆ ಎಂಬ ಘೋಷಣೆಗಳ ಮೂಲಕ ಜನರಲ್ಲಿ ಪರಿಸರ ಜಾಗೃತಿ ಮೂಡಿಸಲಾಯಿತು. ಅಲ್ಲಿನ ಜನರೊಂದಿಗೆ ಸಂವಾದ ನಡೆಸಿ,ನದಿ ಕೇವಲ ನೀರಿನ ಮೂಲವಾಗಿ ಅಲ್ಲದೆ ದೇವಿಯಷ್ಟೇ ಪೂಜ್ಯವಾಗಿ ಕಾಣಬೇಕು ಎಂಬ ಸಂದೇಶ ನೀಡಲಾಯಿತು.ತಂಡದ ಸದಸ್ಯರು ಸಂಸದ ಕೆ.ರಾಜಶೇಖರ ಹಿಟ್ನಾಳ ಮತ್ತು ಪ್ರಾಧಿಕಾರ ಸದಸ್ಯರನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಉಪಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ, ನಾಗರತ್ನ, ಕಾವೇರಿ, ಕೆಂಚಪ್ಪ, ಸುಜಾತ, ಜ್ಯೋತಿ, ಶಂಕ್ರವ್ವ, ಕವಿತಾ, ಪಾರ್ವತಿ, ವಿಜಯಲಕ್ಷ್ಮಿ, ಅಲಸಾಬ್, ರವಿ ಅನೇಕರಿದ್ದರು.