ಸಾರಾಂಶ
ಧಾರ್ಮಿಕ ಕೇಂದ್ರಗಳು ಸ್ವಚ್ಛತೆಯಿಂದ ಇದ್ದಲ್ಲಿ ಭಯ-ಭಕ್ತಿ ಮೂಡಲು ಸಾಧ್ಯ. ಯೋಜನೆ ವತಿಯಿಂದ ಈ ವರ್ಷ ರಾಜ್ಯಾದ್ಯಂತ ಎಲ್ಲಾ ದೇವಾಲಯಗಳ ಆವರಣಗಳನ್ನು ಸ್ವಚ್ಛ ಮಾಡುವ ಕಾರ್ಯಕ್ರಮವನ್ನು ಧರ್ಮಾಧಿಕಾರಿ ಡಾ.ವಿರೇಂದ್ರಹೆಗ್ಗಡೆ ಅವರ ಆದೇಶದಂತೆ ಹಮ್ಮಿಕೊಳ್ಳಲಾಗಿದೆ.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ರಾಜ್ಯದ ಎಲ್ಲ ಧಾರ್ಮಿಕ ಕೇಂದ್ರಗಳಲ್ಲಿ ಶ್ರಮದಾನದ ಮೂಲಕ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಲವು ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಶ್ರೀಕ್ಷೇತ್ರದ ಯೋಜನೆಯ ಮೇಲ್ವಿಚಾರಕಿ ಗುಣಶ್ರೀ ತಿಳಿಸಿದರು.ತಾಲೂಕಿನ ಯಗಚಗುಪ್ಪೆ ಗ್ರಾಮದ ಶ್ರೀದೊಡ್ಡಮ್ಮ ತಾಯಿ ದೇವಾಲಯ ಆವರಣವನ್ನು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಏರ್ಪಡಿಸಿದ ಸ್ವಚ್ಛತೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಧಾರ್ಮಿಕ ಕೇಂದ್ರಗಳು ಸ್ವಚ್ಛತೆಯಿಂದ ಇದ್ದಲ್ಲಿ ಭಯ-ಭಕ್ತಿ ಮೂಡಲು ಸಾಧ್ಯ. ಯೋಜನೆ ವತಿಯಿಂದ ಈ ವರ್ಷ ರಾಜ್ಯಾದ್ಯಂತ ಎಲ್ಲಾ ದೇವಾಲಯಗಳ ಆವರಣಗಳನ್ನು ಸ್ವಚ್ಛ ಮಾಡುವ ಕಾರ್ಯಕ್ರಮವನ್ನು ಧರ್ಮಾಧಿಕಾರಿ ಡಾ.ವಿರೇಂದ್ರಹೆಗ್ಗಡೆ ಅವರ ಆದೇಶದಂತೆ ಹಮ್ಮಿಕೊಳ್ಳಲಾಗಿದೆ ಎಂದರು.ರಾಜ್ಯದ ಎಲ್ಲಾ ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ ಅಂತರಂಗ (ಕೇಂದ್ರದ ಒಳಗೆ) ಮತ್ತು ಬಹಿರಂಗ (ಕೇಂದ್ರದ ಪರಿಸರ) ಸ್ವಚ್ಛತೆ ಮಾಡಿ ಪಾವಿತ್ರ್ಯತೆಯನ್ನು ಕಾಪಾಡಲು ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದ ನೇತೃತ್ವದಲ್ಲಿ ಯೋಜನೆಯೊಂದನ್ನು ರೂಪಿಸಲಾಗಿದೆ ಎಂದರು.
ಈ ವೇಳೆ ಯೋಜನೆ ಪ್ರಗತಿಬಂಧು ಮಹಿಳಾ ಸಂಘಗಳ ಸೇವಾ ಪ್ರತಿನಿಧಿಗಳಾದ ನಾಗರತ್ನ, ಮಹಾದೇವಮ್ಮ, ನೀಲಮ್ಮ ಸ್ವಾಮಿ, ರಾಮಚಂದ್ರ, ಪುಟ್ಟರಾಜು ಸೇರಿದಂತೆ ನೂರಾರು ಗ್ರಾಮಸ್ಥರು ಪಾಲ್ಗೊಂಡಿದ್ದರು.