ಹಂಪಿ ಉತ್ಸವಕ್ಕೆ ವೇದಿಕೆ ನಿರ್ಮಾಣಕ್ಕೆ ಸ್ವಚ್ಛತಾ ಕಾರ್ಯ ಆರಂಭ

| Published : Feb 04 2025, 12:32 AM IST

ಹಂಪಿ ಉತ್ಸವಕ್ಕೆ ವೇದಿಕೆ ನಿರ್ಮಾಣಕ್ಕೆ ಸ್ವಚ್ಛತಾ ಕಾರ್ಯ ಆರಂಭ
Share this Article
  • FB
  • TW
  • Linkdin
  • Email

ಸಾರಾಂಶ

ವಿಶ್ವವಿಖ್ಯಾತ ಹಂಪಿ ಉತ್ಸವಕ್ಕೆ ವಿಜಯನಗರ ಜಿಲ್ಲಾಡಳಿತ ಭರದ ಸಿದ್ಧತೆ ಕೈಗೊಂಡಿದ್ದು, ವೇದಿಕೆಗಳ ನಿರ್ಮಾಣಕ್ಕೆ ಸ್ವಚ್ಛತಾ ಕಾರ್ಯ ಕೈಗೊಂಡಿದೆ.

ಕೃಷ್ಣ ಎನ್‌. ಲಮಾಣಿ

ಹೊಸಪೇಟೆ: ವಿಶ್ವವಿಖ್ಯಾತ ಹಂಪಿ ಉತ್ಸವಕ್ಕೆ ವಿಜಯನಗರ ಜಿಲ್ಲಾಡಳಿತ ಭರದ ಸಿದ್ಧತೆ ಕೈಗೊಂಡಿದ್ದು, ವೇದಿಕೆಗಳ ನಿರ್ಮಾಣಕ್ಕೆ ಸ್ವಚ್ಛತಾ ಕಾರ್ಯ ಕೈಗೊಂಡಿದೆ.

ಹಂಪಿ ಉತ್ಸವವು ಫೆ.28, ಮಾರ್ಚ್‌ 1, 2ರಂದು ಮೂರು ದಿನಗಳವರೆಗೆ ನಡೆಯಲಿದೆ. ಈ ಬಾರಿ ಹಂಪಿ ಉತ್ಸವಕ್ಕೆ ಭಾರೀ ಪ್ರಮಾಣದಲ್ಲಿ ಜನರು ಹರಿದು ಬರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದೆ.

ಸ್ವಚ್ಛತೆ: ಹಂಪಿಯ ಪ್ರಕಾಶನಗರದ ಬಳಿಯ ಗಾಯತ್ರಿ ಪೀಠದ ಬಯಲು ಜಾಗದಲ್ಲಿ ಪ್ರಮುಖ ವೇದಿಕೆ ನಿರ್ಮಾಣಕ್ಕೆ ಜೆಸಿಬಿ ಬಳಸಿ ಸ್ವಚ್ಛತಾ ಕಾರ್ಯ ಭರದಿಂದ ನಡೆಸಲಾಗಿದೆ. ಹಂಪಿ ಉತ್ಸವದಲ್ಲಿ ಈ ವೇದಿಕೆ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಲಿದ್ದಾರೆ. ಈ ವೇದಿಕೆ ಮುಂಭಾಗದಲ್ಲಿ ಸಾವಿರಾರು ಕುರ್ಚಿಗಳನ್ನು ಹಾಕಲಾಗುತ್ತದೆ. ಆಕರ್ಷಕ ವೇದಿಕೆ ನಿರ್ಮಾಣಕ್ಕಾಗಿ ಈಗ ಸ್ವಚ್ಛತಾ ಕಾರ್ಯ ನಡೆದಿದೆ.

2010ರಲ್ಲಿ ಶ್ರೀಕೃಷ್ಣದೇವರಾಯರ 500ನೇ ವರ್ಷದ ಪಟ್ಟಾಭಿಷೇಕ ಮಹೋತ್ಸವ ವೇಳೆಯಲ್ಲಿ ಈ ಸ್ಥಳದಲ್ಲಿ ಪ್ರಮುಖ ವೇದಿಕೆ ನಿರ್ಮಾಣ ಮಾಡಲಾಗಿತ್ತು. ಆಗಿನಿಂದಲೂ ಈ ಸ್ಥಳದಲ್ಲೇ ಪ್ರಮುಖ ವೇದಿಕೆ ನಿರ್ಮಿಸಲಾಗುತ್ತಿದೆ. ಹಾಗಾಗಿ ಈ ಬಾರಿಯೂ ಪ್ರಮುಖ ವೇದಿಕೆ ನಿರ್ಮಾಣಕ್ಕಾಗಿ ಸ್ವಚ್ಛತಾ ಕಾರ್ಯ ಭರದಿಂದ ಸಾಗಿದೆ.

ಎದುರು ಬಸವಣ್ಣ ಮಂಟಪದಲ್ಲಿನ ಶಾಶ್ವತ ವೇದಿಕೆ ಬಳಿ ಸಾಲು ಮಂಟಪಗಳಿರುವುದರಿಂದ ಈ ವೇದಿಕೆಯನ್ನು ಪ್ರಮುಖ ವೇದಿಕೆಯನ್ನಾಗಿಸಲಾಗುತ್ತಿಲ್ಲ. ಕಳೆದ ಬಾರಿಯೂ ಈ ವೇದಿಕೆಯನ್ನು ಎರಡನೇ ಪ್ರಮುಖ ವೇದಿಕೆಯನ್ನಾಗಿಸಲಾಗಿತ್ತು. ಈ ಬಾರಿಯೂ ಸ್ಮಾರಕಗಳ ಸಂರಕ್ಷಣೆ ದೃಷ್ಟಿಕೋನದೊಂದಿಗೆ ಗಾಯತ್ರಿ ಪೀಠದಲ್ಲಿ ಪ್ರಮುಖ ವೇದಿಕೆ ನಿರ್ಮಾಣಕ್ಕಾಗಿ ಜಿಲ್ಲಾಡಳಿತ ಸಿದ್ಧತೆ ಕೈಗೊಂಡಿದೆ.

ಬಡವಿಲಿಂಗದ ಬಳಿ ಸ್ವಚ್ಛತೆ: ಹಂಪಿಯ ಬಡವಿಲಿಂಗ ಸ್ಮಾರಕದ ಬಳಿ ಪಾರ್ಕಿಂಗ್‌ ಸ್ಥಳಕ್ಕಾಗಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದೆ. ಕಲಾವಿದರು, ಗಣಾತಿಗಣ್ಯರು, ಗಣ್ಯರ ವಾಹನಗಳು, ಬಸ್‌ಗಳು, ಕಾರುಗಳ ನಿಲುಗಡೆಗೆ ಈ ಸ್ಥಳದಲ್ಲಿ ಪಾರ್ಕಿಂಗ್‌ ನಿರ್ಮಾಣ ಮಾಡಲು ಯೋಜಿಸಲಾಗಿದೆ. ಶ್ರೀಕೃಷ್ಣ ದೇವಾಲಯದ ಹಿಂಬದಿ ಸ್ಥಳದಲ್ಲಿ ಪಾರ್ಕಿಂಗ್‌ ಸ್ಥಳ ನಿರ್ಮಿಸಿದರೆ, ಪ್ರಮುಖ ಕಲಾವಿದರು, ಗಣ್ಯರನ್ನು ಕರೆತರಲು ಅನುಕೂಲವಾಗಲಿದೆ. ಜೊತೆಗೆ ಸಾರ್ವಜನಿಕರಿಗೆ ಬಸ್‌ಗಳಲ್ಲಿ ಓಡಾಡಲು ಕೂಡ ಅನುಕೂಲ ಆಗಲಿದೆ.

ಏಕಮುಖ ಸಂಚಾರ: ಹಂಪಿ ಉತ್ಸವದಲ್ಲಿ ಸಂಚಾರ ದಟ್ಟಣೆ ತಪ್ಪಿಸಲು ಏಕಮುಖ ರಸ್ತೆ ಮಾರ್ಗದ ನಿಯಮ ಅಳವಡಿಸಲು ಪೊಲೀಸ್‌ ಇಲಾಖೆ ಮುಂದಾಗಿದೆ. ಕಡ್ಡಿರಾಂಪುರ ಕ್ರಾಸ್‌ನಿಂದ ಪ್ರವೇಶಿಸಿದರೆ ಕಮಲಾಪುರ ಹಳೇ ಅತಿಥಿಗೃಹದ ಬಳಿ ಹೊರ ಹೋಗಲು ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಸಂಚಾರ ದಟ್ಟಣೆ ತಪ್ಪಿಸಲು ಪೊಲೀಸ್‌ ಇಲಾಖೆ ಹಲವು ಉಪಕ್ರಮಗಳನ್ನು ಕೈಗೊಳ್ಳುತ್ತಿದ್ದು, ಇದಕ್ಕಾಗಿ ಚಿಂತನೆ ನಡೆಸಿದೆ.

ಸ್ಥಳೀಯರಿಗೆ ಆಹ್ವಾನ: ಹಂಪಿ ಉತ್ಸವದಲ್ಲಿ ಈ ಬಾರಿ ಸ್ಥಳೀಯರ ಪಾಲ್ಗೊಳ್ಳುವಿಕೆಗೆ ವಿಜಯನಗರ ಜಿಲ್ಲಾಡಳಿತ ಒತ್ತು ನೀಡಿದೆ. ಹಾಗಾಗಿ ಈಗಾಗಲೇ ಕಮಲಾಪುರ ಪಪಂ ಸೇರಿದಂತೆ ಗ್ರಾಪಂಗಳ ಸದಸ್ಯರ ಜೊತೆಗೆ ಸಭೆ ನಡೆಸಿದೆ. ಹೊಸಪೇಟೆಯಲ್ಲೂ ಸಂಘ-ಸಂಸ್ಥೆಗಳು ಮತ್ತು ಸಾರ್ವಜನಿಕರೊಂದಿಗೆ ಸಭೆ ನಡೆಸಿ ಸಲಹೆಗಳನ್ನು ಪಡೆದಿದೆ.

ಈ ನೆಲದ ಕಲೆಯನ್ನು ಅನಾವರಣಗೊಳಿಸಲು ವೇದಿಕೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಈ ಮೂಲಕ ಹಂಪಿ ಗತ ವೈಭವ ಮರುಕಳಿಸುವ ಕಾರ್ಯ ಮಾಡಲಾಗುತ್ತಿದೆ.

ಹಂಪಿ ಉತ್ಸವವನ್ನು ಜನೋತ್ಸವವನ್ನಾಗಿಸಲು ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಹಂಪಿ ಗತ ವೈಭವ ಮರುಕಳಿಸುವ ಮಾದರಿಯಲ್ಲಿ ಉತ್ಸವ ನಡೆಸಲಾಗುವುದು ಎನ್ನುತ್ತಾರೆ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ ಅಹಮದ್ ಖಾನ್‌.