ಬ್ಯಾಡಗಿಯಲ್ಲಿ ಶಿಥಿಲಾವಸ್ಥೆಯ 19 ಕಟ್ಟಡಗಳ ತೆರವುಗೊಳಿಸಿ: ಡಾ. ಬಾಲಚಂದ್ರ ಪಾಟೀಲ ಸೂಚನೆ

| Published : May 02 2025, 11:45 PM IST

ಬ್ಯಾಡಗಿಯಲ್ಲಿ ಶಿಥಿಲಾವಸ್ಥೆಯ 19 ಕಟ್ಟಡಗಳ ತೆರವುಗೊಳಿಸಿ: ಡಾ. ಬಾಲಚಂದ್ರ ಪಾಟೀಲ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಮುಖ್ಯರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟನಿಂದ ಯಾವುದೇ ಕ್ಷಣದಲ್ಲಿ ಅಂತಿಮ ಆದೇಶ ಹೊರಬೀಳುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಪುರಸಭೆ ಮೇಲಿರುವ ಕಟ್ಟಡ ತೆರವುಗೊಳಿಸುವ ಜವಾಬ್ದಾರಿಯನ್ನು ಅಷ್ಟರೊಳಗೆ ಪೂರೈಸಬೇಕಾಗಿದ್ದು, ಕೂಡಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಪುರಸಭೆ ಅಧ್ಯಕ್ಷ ಡಾ. ಬಾಲಚಂದ್ರ ಪಾಟೀಲ ಖಡಕ್ ಸೂಚನೆ ನೀಡಿದರು.

ಬ್ಯಾಡಗಿ: ಮುಖ್ಯರಸ್ತೆ ಅಗಲೀಕರಣಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಶಿಥಿಲಾವಸ್ಥೆ ತಲುಪಿರುವ ಮುಖ್ಯರಸ್ತೆಯಲ್ಲಿ 19 ಕಟ್ಟಡಗಳನ್ನು ತೆರುವುಗೊಳಿಸುವಲ್ಲಿ ಪುರಸಭೆ ಹಾಗೂ ಲೋಕೋಪಯೋಗಿ ಅಧಿಕಾರಿಗಳು ವಿಳಂಬ ನೀತಿ ತೋರುವುದು ಸರಿಯಲ್ಲ. ಕೂಡಲೇ ಕಟ್ಟಡ ತೆರವುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಪುರಸಭೆ ಅಧ್ಯಕ್ಷ ಡಾ. ಬಾಲಚಂದ್ರ ಪಾಟೀಲ ತಾಕೀತು ಮಾಡಿದರು

ಶುಕ್ರವಾರ ಪುರಸಭೆ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಮುಖ್ಯರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟನಿಂದ ಯಾವುದೇ ಕ್ಷಣದಲ್ಲಿ ಅಂತಿಮ ಆದೇಶ ಹೊರಬೀಳುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಪುರಸಭೆ ಮೇಲಿರುವ ಕಟ್ಟಡ ತೆರವುಗೊಳಿಸುವ ಜವಾಬ್ದಾರಿಯನ್ನು ಅಷ್ಟರೊಳಗೆ ಪೂರೈಸಬೇಕಾಗಿದ್ದು, ಕೂಡಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಖಡಕ್ ಸೂಚನೆ ನೀಡಿದರು.

ಸಾಮೂಹಿಕ ರಾಜೀನಾಮೆ: ಸದಸ್ಯ ಬಸವರಾಜ ಛತ್ರದ ಮಾತನಾಡಿ, ಬ್ಯಾಡಗಿ ಬಂದ್ ನಡೆಸಿದ ವೇಳೆ ಅಗತ್ಯ ಬಿದ್ದರೆ ಸರ್ವ ಸದಸ್ಯರು ತಮ್ಮ ಸ್ಥಾನಕ್ಕೆ ಸಾಮೂಹಿಕ ರಾಜೀನಾಮೆ ನೀಡಿ ಹೋರಾಟಗಾರರೊಂದಿಗೆ ಕೈಜೋಡಿಸುವುದಾಗಿ ಭರವಸೆ ನೀಡಿದ್ದನ್ನು ನೆನಪಿಸಿದ ಅವರು, ಮುಖ್ಯರಸ್ತೆ ಅಗಲೀಕರಣ ಸಾರ್ವಜನಿಕರ ಹಕ್ಕು. ರಸ್ತೆ ಯಾರೊಬ್ಬರ ಸೊತ್ತಲ್ಲ. ಆದರೆ ನೂರಾರು ಜನರ ಸಮಸ್ಯೆಗೆ ಲಕ್ಷಾಂತರ ಜನರು ನಿತ್ಯ ತೊಂದರೆ ಅನುಭಿಸಬೇಕಾಗಿದೆ. ಇದಕ್ಕಾಗಿ ಕೋರ್ಟ್ ಮೂಲಕ ಪರಿಹಾರ ದೊರೆಯುತ್ತಿದ್ದು, ಕೂಡಲೇ 19 ಕಟ್ಟಡಗಳನ್ನು ತೆರವುಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುಂತೆ ಸೂಚಿಸಿದರು.

ಆದಾಯಕ್ಕೆ ಕಂಟಕ: ಸದಸ್ಯ ಈರಣ್ಣ ಬಣಕಾರ ಮಾತನಾಡಿ, ನಗರ ಯೋಜನಾ ಇಲಾಖೆ ಅನುಮತಿ ಪಡೆಯದ ಕೆಲವೊಂದು ಬಡಾವಣೆಗಳು, ಪುರಸಭೆಯಲ್ಲಿ ಅಧಿಕೃತವಾಗಿ(ಇ- ಸ್ವತ್ತು) ನೋಂದಣಿಯಾಗಿವೆ. ಆದರೆ ಈ ನಿವೇಶನಗಳಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ನಗರ ಯೋಜನಾ ಇಲಾಖೆ ಅನುಮತಿ ನೀಡುತ್ತಿಲ್ಲ. ಹೀಗಿದ್ದರೂ ಕ್ಯಾರೆ ಎನ್ನದ ಕಟ್ಟಡಗಳ ಮಾಲೀಕರು ಕಟ್ಟಡ ನಿರ್ಮಾಣಗೊಳ್ಳುತ್ತಿವೆ. ನಗರ ಯೋಜನಾ ಇಲಾಖೆ ತಪ್ಪು ನಿರ್ಧಾರದಿಂದ ಪುರಸಭೆಗೆ(ಶೇ. 9) ಶುಲ್ಕ ಕೂಡ ಬರದಂತಾಗಿದ್ದು, ಆದಾಯಕ್ಕೆ ಕತ್ತರಿ ಬಿದ್ದಿದೆ ಎಂದು ಆರೋಪಿಸಿದ ಅವರು, ಇಂತಹ ನಿವೇಶನಗಳ ಸಕ್ರಮಗೊಳಿಸಲು ಸರ್ಕಾರಕ್ಕೆ ಪತ್ರ ಬರೆಯುವಂತೆ ಆಗ್ರಹಿಸಿದರು.

ಭ್ರಷ್ಟಾಚಾರ ಮಿತಿ ಮೀರಿದೆ: ಸದಸ್ಯ ಮೆಹಬೂಬ ಅಗಸನಹಳ್ಳಿ ಮಾತನಾಡಿ, ಯುಜಿಡಿ ಹಾಗೂ 24x7 ಕುಡಿಯುವ ನೀರು ಯೋಜನೆಯಲ್ಲಿ ದೊಡ್ಡ ಪ್ರಮಾಣದ ಭ್ರಷ್ಟಾಚಾರ ನಡೆದಿದೆ. ಇದೇ ರೀತಿ ಮುಂದುವರಿದಲ್ಲಿ ಇನ್ನೂ 50 ವರ್ಷ ಗತಿಸಿದರೂ ಯೋಜನೆ ಸಾರ್ವಜನಿಕರಿಗೆ ತಪ್ಪುವ ಸಾಧ್ಯತೆ ಇಲ್ಲ. ಕಳೆದ 7 ವರ್ಷದ ಹಿಂದೆ ಸದಸ್ಯರಾಗಿ ಬಂದಿದ್ದೇವೆ. ಇಂದಿಗೂ ಯೋಜನೆಯಡಿ ಜನರಿಗೆ ನೀರು ತಲುಪಿಸಲು ಸಾಧ್ಯವಾಗಿಲ್ಲ. ಕೂಡಲೇ ಜಿಲ್ಲಾಧಿಕಾರಿಗಳು ಸೇರಿದಂತೆ ಚೀಫ್ ಎಂಜಿನಿಯರ್ ಜತೆ ಸಭೆ ನಡೆಸಬೇಕು. ಅಲ್ಲಿ ಎಲ್ಲವನ್ನೂ ಬಹಿರಂಗಪಡಿಸುವುದಾಗಿ ತಿಳಿಸಿದರು.

ಸಿಬ್ಬಂದಿ ಸಹಕಾರ ನೀಡುತ್ತಿಲ್ಲ: ಸದಸ್ಯೆ ಕಲಾವತಿ ಬಡಿಗೇರ ಮಾತನಾಡಿ, ವಾರ್ಡ್ ನಂ. 1ರಲ್ಲಿ ಸಮರ್ಪಕವಾಗಿ ನೀರು ಬರುತ್ತಿಲ್ಲ ಎಂದು ಸಿಬ್ಬಂದಿ ಕುಮಾರಸ್ವಾಮಿ ಹಿರೇಮಠ ಅವರಿಗೆ ದೂರವಾಣಿ ಮೂಲಕ ತಿಳಿಸಿದರೆ, ಸರಿಯಾದ ಸ್ಪಂದನೆ ನೀಡದೇ ಹಾರಿಕೆ ಉತ್ತರವನ್ನು ನೀಡುತ್ತಾರೆ. ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸದಿರುವ ಸಿಬ್ಬಂದಿಯನ್ನು ಕಿತ್ತೊಗೆದು ಬೇರೆಯರನ್ನು ನೇಮಕ ಮಾಡುವಂತೆ ಒತ್ತಾಯಿಸಿದರು. ಸಭೆಯಲ್ಲಿ ಪುರಸಭೆ ಉಪಾಧ್ಯಕ್ಷ ಸುಭಾಸ್ ಮಾಳಗಿ, ಸ್ಥಾಯಿ ಸಮಿತಿ ಚೇರಮನ್ ಚಂದ್ರಣ್ಣ ಶೆಟ್ಟರ, ಮುಖ್ಯಾಧಿಕಾರಿ ವಿನಯಕುಮಾರ ಹೊಳಿಯೊಪ್ಪಗೋಳ, ಪುರಸಭೆ ಸರ್ವಸದಸ್ಯರು ಹಾಗೂ ಸಿಬ್ಬಂದಿ ಇದ್ದರು.