ಶಂಕರಾಚಾರ್ಯರ ತತ್ವಾದರ್ಶಗಳ ಯುವಕರು ಅಳವಡಿಸಿಕೊಳ್ಳಿ-ಜಿಲ್ಲಾಧಿಕಾರಿ

| Published : May 02 2025, 11:45 PM IST

ಸಾರಾಂಶ

ಶಂಕರಚಾರ್ಯರ ತತ್ವ ಆದರ್ಶಗಳನ್ನು ಇಂದಿನ ಯುವ ಜನತೆ ಅಳವಡಿಸಿಕೊಳ್ಳಬೇಕು. ಆಮೂಲಕ ಸಾತ್ವಿಕ, ನೆಮ್ಮದಿಯ ಬದುಕು ಕಟ್ಟಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಹೇಳಿದರು.

ಗದಗ: ಶಂಕರಚಾರ್ಯರ ತತ್ವ ಆದರ್ಶಗಳನ್ನು ಇಂದಿನ ಯುವ ಜನತೆ ಅಳವಡಿಸಿಕೊಳ್ಳಬೇಕು. ಆಮೂಲಕ ಸಾತ್ವಿಕ, ನೆಮ್ಮದಿಯ ಬದುಕು ಕಟ್ಟಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಹೇಳಿದರು.

ಅವರು ಶುಕ್ರವಾರ ಗದಗ ನಗರದ ಸಂಭಾಪೂರ ರಸ್ತೆಯಲ್ಲಿರುವ ಶಂಕರ ಮಠದಲ್ಲಿ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್‌ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಆದಿಜಗದ್ಗುರು ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾಡಿದರು. ಆದಿ ಶಂಕರಾಚಾರ್ಯರು ತಮ್ಮ ನಿಶ್ಚಲ ಧರ್ಮಭಾವನೆಯಿಂದ ಭಾರತ ದೇಶವನ್ನೆಲ್ಲಾ ಸಂಚರಿಸಿ, ಹಿಂದೂ ಧರ್ಮದ ತತ್ವವನ್ನು ಜನಮಾನಸದಲ್ಲಿ ಬಿತ್ತಿದರು.

ಅವರು ಅಹಂ ಬ್ರಹ್ಮಾಸ್ಮಿ ಎಂಬ ಮಹಾವಾಕ್ಯದ ಮೂಲಕ ಈ ಜಗತ್ತಿನ ಪ್ರತಿ ಜೀವಿಯಲ್ಲೂ ದೈವತ್ವವಿದೆ ಎಂಬ ಸತ್ಯವನ್ನು ಸಾರಿದರು. ನಾನು ದೇವನು ಎಂಬ ಅರ್ಥದ ಈ ವಾಕ್ಯ, ಅಹಂಕಾರವಲ್ಲ, ಅದು ಮಾನವೀಯತೆ ಹಾಗೂ ಆತ್ಮಜ್ಞಾನದ ಪರಮೋನ್ನತ ತತ್ತ್ವವಾಗಿದೆ ಎಂದು ಹೇಳಿದರು.

ಅವರು ಬೋಧಿಸಿದಂತೆ, ನಾವೆಲ್ಲರೂ ಒಳಗೆ ದೈವತ್ವವನ್ನು ಧರಿಸಿಕೊಂಡವರಾಗಿದ್ದೇವೆ. ಈ ತತ್ತ್ವವನ್ನು ಜೀವನದೊಳಗೆ ಅಳವಡಿಸಿಕೊಂಡಾಗ, ಪ್ರಪಂಚವೇ ಒಂದು ದೇವಮಯ ತಳಮಳವಾಗುತ್ತದೆ. ಶಂಕರರ ತತ್ವದುರ್ದರ್ಶಿತೆಯಿಂದ, ತತ್ವಪೂರ್ಣವಾದ ಜೀವನದ ದಾರಿಯಲ್ಲಿ ನಾವು ಹೆಜ್ಜೆಹಾಕಲು ಸಾಧ್ಯವಾಗುತ್ತದೆ ಎಂದರು.

ಸಂಸ್ಕೃತಿ ಚಿಂತಕ ಡಾ. ಶಶಿಧರ ನರೇಂದ್ರ ಉಪನ್ಯಾಸ ನೀಡಿ, ಶಂಕರಚಾರ್ಯರು ತಮ್ಮ ಸಣ್ಣ ವಯಸ್ಸಿನಲ್ಲಿ ವೇದ ಪರಿಷತ್ ಪುರಾಣಗಳನ್ನು ಅರಿತುಕೊಂಡು ಹಿಂದು ಧರ್ಮವನ್ನು ಉಳಿಸಬೇಕು, ಎಲ್ಲರಿಗೂ ಅರಿವು ಮೂಡಿಸಬೇಕೆಂದು ಭರತ ಖಂಡವನ್ನು ಪಾದ ನಡೆಗೆಯಿಂದ ಸನಾತನ ಧರ್ಮವನ್ನು ಪುನರ್ ಸ್ಥಾಪಿಸಬೇಕು ಎಂದು ಸಂಚರಿಸಿ ಮಠಗಳನ್ನು ಸ್ಥಾಪಿಸಿದ್ದರು, ಅಲ್ಲಿ ಇಂದಿಗೂ ಜಾಗೃತಿ ಕಾರ್ಯಗಳು ನಡೆಯುತ್ತಿವೆ. ನಾವೆಲ್ಲಾ ಇಂದು ನಮ್ಮ ವೈಯಕ್ತಿಕ ಕೆಲಸಗಳಲ್ಲಿ ಮುಳುಗಿ ಹೋಗಿದ್ದೇವೆ ಇದನ್ನು ಹೊರತು ಪಡಿಸಿ ಸನಾತನ ಧರ್ಮದ ಉಳಿವಿಗೆ ನಾವೆಲ್ಲರೂ ಪಣ ತೊಡಬೇಕು ಎಂದರು. ನಗರಾಭಿವೃದ್ದಿ ಪ್ರಾಧಿಕಾರ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ಮಾಜಿ ಶಾಸಕ ಡಿ.ಆರ್. ಪಾಟೀ,ಲ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ. ಸಂಕದ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ., ಗದಗ ತಹಸೀಲ್ದಾರ್‌ ಶ್ರೀನಿವಾಸ ಕುಲಕರ್ಣಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ವೀರಯ್ಯಸ್ವಾಮಿ, ರತ್ನಾಕರ ಭಟ್ ಜೋಶಿ, ಶ್ರೀನಿವಾಸ ಹುಯಿಲಗೋಳ ಸೇರಿದಂತೆ ಗಣ್ಯರು ಹಾಜರಿದ್ದರು. ಡಾ. ವೆಂಕಟೇಶ ಕುಲಕರ್ಣಿ ಹಾಗೂ ತಂಡ ಭಕ್ತಿ ಸಂಗೀತ ಗಾಯನ ಪ್ರಸ್ತುತ ಪಡಿಸಿದರು. ಉಪನ್ಯಾಸಕ ಅನಿಲ ವೈದ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಮನ್ ಪಾಟೀಲ ನಿರೂಪಿಸಿದರು.